Site icon Suddi Belthangady

ಫೆ. 22: ಬಂದಾರು ಶ್ರೀ ರಾಮನಗರದಲ್ಲಿ ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಭಾ ಸಮಾಗಮ – ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಕುಂಬಾರರ ಸೇವಾ ಸಂಘ, ಜೈ ಶ್ರೀ ರಾಮ್ ಗೆಳೆಯರ ಬಳಗ ಶ್ರೀ ರಾಮ ನಗರ ಬಂದಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಫೆ. 22ರಂದು ದ. ಕ. ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಭಾ ಸಮಾಗಮ ಸ್ವಜಾತಿ ಭಾಂದವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಮತ್ತು ಸನ್ಮಾನ ಕಾರ್ಯಕ್ರಮ ಬಂದಾರು ಶ್ರೀ ರಾಮ ನಗರದ ಶಿವ ಪ್ರಿಯ ಮೈದಾನದಲ್ಲಿ ನಡೆಯಲಿದೆ ಎಂದು ಸಮಾವೇಶದ ಕಾರ್ಯಾಧ್ಯಕ್ಷ ವಕೀಲ ಉದಯ ಬಿ. ಕೆ. ಹೇಳಿದರು. ಅವರು ಫೆ. 18ರಂದು ಪತ್ರಿಕಾ ಭವನದಲ್ಲಿ ಕರೆದ ಗೋಷ್ಠಿಯಲ್ಲಿ ವಿವರ ನೀಡಿದರು.

ಭಾರತದ ವೈವಿಧ್ಯಮಯ ವಿವಿಧ ಪಂಗಡಗಳಲ್ಲಿ ಕುಂಬಾರ ಸಮುದಾಯವು ಅಗ್ರಸ್ಥಾನದಲ್ಲಿದೆ. ಮೂಲತ: ಮಣ್ಣಿನ ಮಕ್ಕಳಾದ ಕುಂಬಾರರ ಬಗ್ಗೆ ನಮ್ಮ ಪುರಾತನ ಕಾವ್ಯಗಳಲ್ಲಿ ಅನೇಕ ಉಲ್ಲೇಖವಿದೆ. ಭಾರತೀಯ ಸಂಸ್ಕೃತಿಗೆ ಸಂಪ್ರದಾಯ ಆಚಾರ ವಿಚಾರಕ್ಕೆ ಕುಂಬಾರ ಸಮುದಾಯ ತನ್ನದೆ ಆದ ಆನೇಕ ಕೊಡುಗೆಗಳನ್ನು ನೀಡಿದೆ. ನಾಗರೀಕ ಸಮಾಜಕ್ಕೆ ಆಹಾರ ಬೇಯಿಸಿ ತಿನ್ನಲು ಬೇಕಾಗುವ ಮಡಿಕೆ-ಕುಡಿಕೆಗಳನ್ನು ನೀಡಿರುವ ಹೆಗ್ಗಳಿಕೆ ಕುಂಬಾರ ಸಮುದಾಯದಾಗಿರುತ್ತದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿರುವ ಕುಂಬಾರ ಸಮುದಾಯ ಧಾರ್ಮಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಹಿನ್ನಲೆಯನ್ನು ಹೊಂದಿದೆ. ಅತ್ಯಂತ ಕಷ್ಟ, ಸಹಿಷ್ಣು ಹಾಗೂ ಪ್ರಾಮಾಣಿಕವಾಗಿ ಬದುಕಿಗೊಂಡು ಬಂದಿರುವ ಸ್ವಭಾವದವರು ಹಾಗೂ ತಮ್ಮ ಪಾಲಿಸಿಗೊಂಡು ಬರುವಲ್ಲಿ ಬದ್ದರು.

ಸಮುದಾಯದ ಜನರ ಪರಿಶ್ರಮಿಗಳು ಮೃದು ಕಟ್ಟುಪಾಡು ಅಚಾರ-ವಿಚಾರ ಸಂಪ್ರದಾಯವನ್ನು ಕುಂಬಾರ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ಹಾಗೂ ಕುಂಬಾರ ಸಮುದಾಯದ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶ ಹಾಗೂ ಸಮುದಾಯದ ಜನರಿಗೆ ವಿವಿಧ ವಿಷಯಗಳಲ್ಲಿ ಜಾಗೃತಿ ಮೂಡಿಸುವ ಧೈಯದೊಂದಿಗೆ ಕುಂಬಾರರಿಗೆ ರಾಜಕೀಯ ಸ್ಥಾನಮಾನ ಕುಲವೃತ್ತಿ ಕುಂಬಾರಿಕೆಯನ್ನು ಉಳಿಸಿ ಬೆಳೆಸಲು ಸರಕಾರದಿಂದ ವಿಶೇಷ ಸೌಲಭ್ಯಕ್ಕೆ ಒತ್ತಾಯಿಸಿ ದ.ಕ ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ “ಕುಂಬಾ ಸಮಾಗಮ” ಸಮಾಜದ ವಿವಿಧ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ವಜಾತಿ ಬಾಂಧವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಬಾರರ ಮಹಾ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಚೌಡ ಶೆಟ್ಟಿ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಸಂಸದ ಬ್ರಿಜೇಶ್ ಚೌಡ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ರಾಜೀವ ಗಾಂಧಿ ವಿ.ವಿ ಸೆನೆಟ್ ಸದಸ್ಯ ಶ್ರೀನಿವಾಸ ಮೇಲು, ನಾಯಕರಾದ ಹರೀಶ್ ಕಾರಿಂಜ, ಅಣ್ಣಯ್ಯ ಕುಲಾಲ್, ಪದ್ಮಕುಮಾರ್, ಭಾಸ್ಕರ ಪೆರುವಾಯಿ, ಉದ್ಯಮಿ ಕಿರಣ್ ಚಂದ್ರ, ಕುಂಬಾರ ಸಮುದಾಯದ ವಿವಿಧ ಗುರಿಕಾರರು ನಾಯಕರುಗಳು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಂದಾರು ಕುಂಬಾರರ ಸೇವಾ ಸಂಘದ ಅಧ್ಯಕ್ಷ ಕೆಂಚಪ್ಪ ಕುಂಬಾರ, ಮಾಜಿ ಅಧ್ಯಕ್ಷ ರಮೇಶ್ ಕುಂಬಾರ, ಕಾರ್ಯದರ್ಶಿ ಪ್ರಕಾಶ್ ಕೆ, ಜೈ ಶ್ರೀರಾಮ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಬಿ. ಕೆ. ಉಪಸ್ಥಿತರಿದ್ದರು.

Exit mobile version