Site icon Suddi Belthangady

ಎಕ್ಸೆಲ್ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ನಂತರ ಮುಂದೇನು ಕಾರ್ಯಾಗಾರ

ಗುರುವಾಯನಕೆರೆ: ಪ್ರತಿಯೊಬ್ಬ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಕನಸು ಕಾಣಬೇಕು ಮತ್ತು ಗುರಿಯನ್ನು ಇಟ್ಟುಕೊಳ್ಳಬೇಕು. ಶಿಕ್ಷಣ ಪಡೆಯುವ ಸಮಯವನ್ನು ನಿರ್ಲಕ್ಷ್ಯ ಮಾಡಬೇಡಿ. ಹಾಗೆ ಮಾಡಿದರೆ ಭವಿಷ್ಯವನ್ನು ಹಾಳುಮಾಡಿಕೊಂಡಂತೆ. ಹಿಂದೆ ಬಹುತೇಕ ಮಕ್ಕಳಿಗೆ ಮಾರ್ಗದರ್ಶಕರು ಇರಲಿಲ್ಲ. ಇಂದು ಗುರುವಾಯನಕೆರೆ ಎಕ್ಸೆಲ್ ಕಾಲೇಜು ಮಕ್ಕಳ ಶಿಕ್ಷಣ ಮುಂದಿನ ಬಗ್ಗೆ ದಾರಿತೋರಿಸುವ ಉತ್ತಮ ಕೆಲಸ ಮಾಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ ಎಂದು ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಹೇಳಿದರು.

ಅವರು ಫೆ. 16ರಂದು ಎಕ್ಸೆಲ್ ಕಾಲೇಜು ಗುರುವಾಯನಕೆರೆ ವತಿಯಿಂದ ಅರಮಲೆಬೆಟ್ಟ ಕ್ಯಾಂಪಸ್ ಎಕ್ಸೆಲ್ ಪಿ. ಯು ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ನಂತರ ಮುಂದೇನು ಎಂಬ 10ನೇ ತರಗತಿ ಮಕ್ಕಳಿಗೆ ಮತ್ತು ಪಾಲಕರಿಗೆ ನಡೆದ ವಿಷೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಶಿಕ್ಷಣಕ್ಕೆ ಉತ್ತಮ ಕಾಲೇಜನ್ನು ಆಯ್ಕೆಮಾಡಬೇಕಾಗಿದೆ. ಇಂದು ರಾಜ್ಯಾದ್ಯಂತ ಹೆಸರುವಾಸಿಯಾದ ಎಕ್ಸೆಲ್ ಕಾಲೇಜು ನೂರಾರು ಸಾಧಕ ವಿದ್ಯಾರ್ಥಿಗಳನ್ನು ಪಡೆದಿದೆ. ಮಕ್ಕಳಿಗೆ ಭವಿಷ್ಯ ರೂಪಿಸುವ
ಕನಸನ್ನು ಕಾಲೇಜು ಕಂಡಿರುವುದು ಇಂದಿನ ಮಕ್ಕಳ ಭಾಗ್ಯ ಎಂದು ಅವರು ಹೇಳಿದರು.

ಶಿಕ್ಷಕ ಧರಣೇಂದ್ರ ಜೈನ್‌ ಮಾತನಾಡಿ, ಮಕ್ಕಳಿಗೆ ಯಾವ ಆಯ್ಕೆಯನ್ನು ಮಾಡಿಕೊಳ್ಳುವ ಅವಕಾಶ ಇಂದು ಇದೆ. ಆದರೆ ಮಕ್ಕಳಲ್ಲಿ ಕಲಿಯುವ ಆಸಕ್ತಿ ಬೇಕು. ಹಿರಿಯರು ನಮಗೇನು ಮಾಡಿದ್ದಾರೆ ಎನ್ನುವುದಕ್ಕಿಂತ ನಾನೇನು ಹಿರಿಯರಿಗೆ ನೀಡಬಲ್ಲೆನು ಎನ್ನುವ ಸಂಕಲ್ಪ ಮಾಡಬೇಕು ಅದಕ್ಕೆ ಶಿಕ್ಷಣವೊಂದೇ ದಾರಿ ಎಂದರು. ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಮನೋಹರ್ ಬಳಂಜ, ಸಂತೊಷ್ ಪಿ.ಕೋಟ್ಯಾನ್ ಶುಭಹಾರೈಸಿದರು.

ಎಕ್ಸೆಲ್ ವಿದ್ಯಾಸಾಗರ ಕ್ಯಾಂಪಸ್‌ನ ಪ್ರಾಂಶುಪಾಲ ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಉಪನ್ಯಾಸಕ ಮಹಮ್ಮದ್ ಮುನೀರ್ ನಿರೂಪಿಸಿದರು. ಎಕ್ಸೆಲ್ ಅರಮಲೆಬೆಟ್ಟ ಕ್ಯಾಂಪಸ್‌ನ ಪ್ರಾಂಶುಪಾಲ ಪ್ರಜ್ವಲ್ ಕಜೆ ವಂದಿಸಿದರು.

Exit mobile version