Site icon Suddi Belthangady

ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಸಂಪನ್ನ

ಬೆಳಾಲು: ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿಯಲ್ಲಿ ವಾರ್ಷಿಕ ಉತ್ಸವ ಫೆ. 10ರಿಂದ 14ರವರೆಗೆ ವಿವಿಧ ವೈದಿಕ, ಸಾಂಸ್ಕೃಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಫೆ. 10ರಂದು ಬೆಳಿಗ್ಗೆ ಪುಣ್ಯಾಹ, ಶುದ್ಧಿ, ದೇವತಾ ಪ್ರಾರ್ಥನೆ, ಗಣಹೋಮ, ಮೃತ್ಯುಂಜಯ ಹೋಮ, ನವಗ್ರಹ ಶಾಂತಿ ಹೋಮ, ಕಲಶ ಪೂಜೆ, ಮಹಾ ಪೂಜೆ, ಸಂಜೆ ಸುದರ್ಶನ ಹೋಮ, ವಾಸ್ತು ರಾಕ್ಷಾಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ ಮಹಾ ಪೂಜೆ ನಡೆಯಿತು. ರಾತ್ರಿ ವಿಧುಷಿ ಸ್ವಾತಿಜಯರಾಮ್, ವಿಧುಷಿ ಪೃಥ್ವಿ ಸತೀಶ್ ಶಿಷ್ಯ ವೃಂದದಿಂದ ನೃತ್ಯಾರ್ಪಣ, ಪುತ್ತೂರು ಜಗದೀಶ್ ಆಚಾರ್ಯ ಬಳಗದವರಿಂದ ಸಂಗೀತ ಗಾನ ಸಂಭ್ರಮ, ವಿವಿಧ 114 ಭಜನಾ ತಂಡಗಳಿಂದ ಕುಣಿತ ಭಜನಾ ಕಮ್ಮಟೋತ್ಸವ ನಡೆಯಿತು.

ಫೆ. 11ರಂದು ಬೆಳಿಗ್ಗೆ ಶ್ರೀ ನಾಗದೇವರಿಗೆ ನಾಗತಂಬಿಲ, ಶ್ರೀ ಚಾಮುಂಡೇಶ್ವರಿ ದೇವಿಗೆ ಮಹಾ ಚಂಡಿಕಾ ಯಾಗ, ಲಲಿತ ಸಹಸ್ರನಾಮ, ಕದಳಿಯಾಗ, ಕಲಶಾಭಿಷೇಕ, ಮಹಾ ಪೂಜೆ, ಸಂಜೆ ಆಶ್ಲೇಷ ಬಲಿ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾ ಪೂಜೆ, ಚಾಮುಂಡೇಶ್ವರಿ ಅಮ್ಮನವರಿಗೆ ರಂಗ ಪೂಜೆ, ದಿನೇಶ್ ಕೋಡಪದವು ಸಾರಥ್ಯದಲ್ಲಿ ಹಾಸ್ಯ ಕಲಾವಿದರಿಂದ ಯಕ್ಷ ತೆಲಿಕೆ ಹಾಸ್ಯ ವೈಭವ, ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಂದಾರ ಕಲಾವಿದರು ಉಜಿರೆ ಇವರಿಂದ ಮಾಯೋದ ತುಡರ್ ನಾಟಕ ಪ್ರದರ್ಶನಗೊಂಡಿತು.

ಫೆ. 12ರಂದು ಬೆಳಿಗ್ಗೆ ನಾಗ ದೇವರಿಗೆ ನಾಗತಂಬಿಲ, ಶ್ರೀ ಚಾಮುಂಡೇಶ್ವರಿ ದೇವಿಗೆ ಕಲಶ ಪೂಜೆ ಪ್ರಧಾನ ಹೋಮ, ಪರಿವಾರ ಪೂಜೆ, ಕಲಶಾ ಭಿಷೇಕ, ಮಹಾಪೂಜೆ ನಡೆಯಿತು. ರಾತ್ರಿ ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಉತ್ಸವ, ಚಾಮುಂಡೇಶ್ವರಿ ಮತ್ತು ಗುಳಿಗ ನೇಮೋತ್ಸವ ಜರಗಿತು.

ಫೆ. 13ರಂದು ಮಧ್ಯಾಹ್ನ ಮಹಾಪೂಜೆ ರಾತ್ರಿ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ಫೆ. 14ರಂದು ರಾತ್ರಿ ಕ್ಷೇತ್ರದ ಪರಿವಾರ ದೈವಗಳಾದ ಕಲ್ಲುರ್ಟಿ, ಮಂತ್ರ ದೇವತೆ, ಸನ್ಯಾಸಿ ಗುಳಿಗ, ಶಕ್ತಿ ಗುಳಿಗ ಹಾಗೂ ಇತರ ದೈವಗಳಿಗೆ ನೇಮೋತ್ಸವ ನಡೆಯಿತು.

ಧರ್ಮದರ್ಶಿ ಹರೀಶ್ ಆರಿಕೋಡಿ, ಆಡಳಿತ ಮೋಕ್ತೆಸರ ಡೊಂಬಯ್ಯ ಗೌಡ, ಆಡಳಿತ ಮಂಡಳಿ ಅಧ್ಯಕ್ಷರು, ಸಿಬ್ಬಂದಿಗಳು ಊರವರ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು.ಊರ ಪರ ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Exit mobile version