Site icon Suddi Belthangady

ಉಜಿರೆ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆ

ಬೆಳ್ತಂಗಡಿ: ಉಜಿರೆ ಸರ್ಕಲ್‌ನಲ್ಲಿ ಸರಕಾರಿ ಬಸ್ ಸಮಸ್ಯೆ ವಿರುದ್ಧ ಪ್ರತಿಭಟನೆ ನಡೆಸಿದ್ದ ಎಬಿವಿಪಿ ಕಾರ್ಯಕರ್ತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲು ಬೆಳ್ತಂಗಡಿ ಠಾಣಾ ಪೊಲೀದರು ಸಿದ್ಧತೆ ನಡೆಸಿದ್ದಾರೆ. ಮುಂಡಾಜೆಯಲ್ಲಿ ಜ.೨೮ರಂದು ನಡೆದ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿಗಳ ಮಾಹಿತಿ ಪಡೆದುಕೊಳ್ಳಲು ಹೋಗಿದ್ದ ವೇಳೆ ಸಾರಿಗೆ ಇಲಾಖೆಯ ಅಧಿಕಾರಿಗಳು ಉಡಾಫೆಯಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಉಜಿರೆ ಸರ್ಕಲ್‌ನಲ್ಲಿ ಜ.೨೯ರಂದು ಬೆಳಿಗ್ಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಎಂಬ ಆರೋಪದಡಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾತ್ತು.

ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಲಾಗಿದೆ ಮತ್ತು ಗುಂಪು ಸೇರಿ ಅಕ್ರಮ ಕೂಟ ಮಾಡಲಾಗಿದೆ ಎಂದು ಎಬಿವಿಪಿ ಕಾರ್ಯಕರ್ತರಾದ ಪ್ರಾರ್ಥನ್, ಶಿವಶಂಕರ್, ತೀಕ್ಷಿತ್ ದಿಡುಪೆ, ಜೀವನ್, ಚಿತ್ತಾರ, ಕವನ್, ಶಿವಪ್ರಸಾದ್, ಮಹಿಕ್, ಯಶಸ್, ಸುವಿತ್ ಶೆಟ್ಟಿ ಮತ್ತು ಇತರರ ಮೇಲೆ ಪೊಲೀಸ್ ಠಾಣೆಯ ಸಬ್‌ಇನ್ಸೆಪೆಕ್ಟರ್ ಮುರುಳೀಧರ್ ನಾಯ್ಕ್ ಜ.೨೯ರಂದು ನೀಡಿದ ದೂರಿನಂತೆ ೩೧(೦),೧೦೩(೨), ೧೮೯(೨),೨೮೫ ೩ ೧೯೦ರಡಿ ಪ್ರಕರಣ ದಾಖಲಾಗಿದೆ. ಇದೀಗ ಎಸ್.ಐ. ಮುರಳೀಧರ ನಾಯ್ಕ ಅವರು ಆಪಾದಿತ ವಿದ್ಯಾರ್ಥಿಗಳ ವಿರುದ್ಧ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಕೇಸ್‌ಗೆ ಒಳಗಾದ ವಿದ್ಯಾರ್ಥಿಗಳು ಇನ್ನೂ ಜಾಮೀನು ಪಡೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.

Exit mobile version