ಬೆಳ್ತಂಗಡಿ: ಕಬಡ್ಡಿ ಅಸೋಸಿಯೇಷನ್ ಕುರಿತು ಇಲ್ಲಸಲ್ಲದ ಆರೋಪ ಮಾಡುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ವಾರ್ಷಿಕ ಮಹಾಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ. ಬಂಟ್ವಾಳ ರೋಟರಿ ಭವನದಲ್ಲಿ ಜ.೩೧ರಂದು ನಡೆದ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ.
ನಿರ್ಣಯ ಅಂಗೀಕಾರ: ಸಂಸ್ಥೆಯ ಅಧ್ಯಕ್ಷ ರಾಕೇಶ್ ಮಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಕಬಡ್ಡಿಯನ್ನು ಉಳಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಂದ್ಯಾಟಗಳು ಸಂಜೆ ವೇಳೆಗೆ ಆರಂಭಗೊಂಡು ರಾತ್ರಿ ೧೧ರ ವೇಳೆಗೆ ಮುಗಿಸಬೇಕು. ಈ ಬಗ್ಗೆ ಸಹಕರಿಸುವಂತೆ ಪೊಲೀಸ್ ಇಲಾಖೆ, ಜಿಲ್ಲೆಯ ಎಲ್ಲಾ ಶಾಸಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಬೇಕು ಎಂದು ಚರ್ಚೆ ನಡೆಸಿ ಅದರಂತೆ ನಿರ್ಣಯ ಕೈಗೊಳ್ಳಲಾಯಿತು. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನಲ್ಲಿ ಅವ್ಯಹಾರ ನಡೆದಿದೆ ಎಂಬಿತ್ಯಾದಿ ಆರೋಪ ಮಾಡುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಹೇಳಿಕೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸರಕಾರದಿಂದ ಯಾವುದೇ ಅನುದಾನ ಬಾರದೇ ಇದ್ದರೂ ಕಬಡ್ಡಿ ಸಂಸ್ಥೆಯವರು ಕಬಡ್ಡಿ ಪಂದ್ಯಾಟ ನಡೆಸುತ್ತಿದ್ದಾರೆ. ಆದರೂ ಹರೀಶ್ ಪೂಂಜ ಅವರು ಇಲ್ಲಸಲ್ಲದ ಆರೋಪ ಮಾಡಿ ಸಂಸ್ಥೆಗೆ ಕೆಟ್ಟ ಹೆಸರು ತರುತ್ತಿದ್ದಾರೆ.
ಆದ್ದರಿಂದ ಅವರ ಹೇಳಿಕೆ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಬಳಿಕ ಅದರಂತೆ ನಿರ್ಣಯ ಕೈಗೊಳ್ಳಲಾಯಿತು. ಸಂಸ್ಥೆಯ ಜಿಲ್ಲಾ ಸದಸ್ಯರಾಗಿದ್ದುಕೊಂಡು ಅಶಿಸ್ತು ತೋರ್ಪಡಿಸುತ್ತಿರುವ ಈರ್ವರ ಸದಸ್ಯತ್ವವನ್ನು ರದ್ದುಗೊಳಿಸುವ ಮತ್ತು ಲೆಕ್ಕ ಪರಿಶೋಧಕರಾಗಿ ಬಸರಿ ಎನ್.ರಾವ್ ಅವರನ್ನು ಮುಂದುವರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಸಂಸ್ಥೆಯ ಕಾರ್ಯಾಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಉಪ್ಪಿನಂಗಡಿ, ಉಪಾಧ್ಯಕ್ಷ ಕೆ.ಟಿ. ಸುವರ್ಣ, ತೀರ್ಪುಗಾರರ ಮಂಡಳಿ ಜಿಲ್ಲಾಧ್ಯಕ್ಷ ಶಿವರಾಮ ಏನೆಕಲ್ಲು ಮತ್ತು ಬಂಟ್ವಾಳ ತಾಲೂಕು ಅಧ್ಯಕ್ಷ ಪುಷ್ಪರಾಜ್ ಚೌಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ಬೇಬಿ ಕುಂದರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಅನಿಲ್ ಕೆಂಬಾರ್ ಲೆಕ್ಕಪತ್ರ ಮಂಡಿಸಿದರು. ಅಸೋಸಿಯೇಷನ್ ಗೌರವ ಸಲಹೆಗಾರರಾದ ಪುರುಷೋತ್ತಮ ಪೂಜಾರಿ, ರತನ್ ಶೆಟ್ಟಿ, ಪ್ರಮುಖರಾದ ಕೃಷ್ಣಾನಂದ, ನಾಮ್‌ದೇವ್ ರಾವ್, ಲೋಕನಾಥ್ ಶೆಟ್ಟಿ ಬಿ.ಸಿ.ರೋಡ್, ಮಹಮ್ಮದ್ ವಳವೂರು ಮೊದಲಾದವರು ಸಲಹೆ ನೀಡಿದರು.
ಬಂಟ್ವಾಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶಿವರಾಜ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಕಾರ್ಯಾಧ್ಯಕ್ಷ ಝಕರಿಯಾ ಕಲ್ಲಡ್ಕ, ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ ಮತ್ತು ಪ್ರಸಾದ್ ಶೆಟ್ಟಿ ಸಹಕರಿಸಿದರು.