Site icon Suddi Belthangady

ಹೊಸಂಗಡಿ ಶಾಲೆಯಲ್ಲಿ ಭಾಷಣ ವಿವಾದ – ಅರುಣ್ ಉಳ್ಳಾಲ್ ಕಾರ್ಯಕ್ರಮ ರದ್ದು!

ಬೆಳ್ತಂಗಡಿ: ಬಹಿರಂಗ ವೇದಿಕೆಯಲ್ಲಿ ಕೋಮು ದ್ವೇಷದ ಭಾಷಣ ಮಾಡಿದ ಆರೋಪ ಹೊಂದಿರುವ ಅರುಣ್ ಉಳ್ಳಾಲ್ ಎಂಬವರನ್ನು ಸರಕಾರಿ ಶಾಲೆಯೊಂದರ ಭಾಷಣಕ್ಕೆ ಆಹ್ವಾನಿಸಿದ್ದರಿಂದ ವಿವಾದ ಸೃಷ್ಠಿಯಾಗಿ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನೇ ರದ್ಧುಗೊಳಿಸಿದ ಘಟನೆ ಫೆ. 6ರಂದು ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಹೊಸಂಗಡಿಯ ಇಂದಿರಾಗಾಂಧಿ ಸರಕಾರಿ ವಸತಿ ಶಾಲೆಯಲ್ಲಿ ಫೆ. 6ರಂದು ಬೆಳಿಗ್ಗೆ ಅರುಣ್ ಉಳ್ಳಾಲ್ ಎಂಬವರ ಭಾಷಣ ಏರ್ಪಡಿಸಲಾಗಿತ್ತು. ಸದರಿ ಶಾಲೆ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೊಳಪಟ್ಟ ವಸತಿ ಶಾಲೆಯಾಗಿದೆ.

ಕೋಮು ವೈಷಮ್ಯ ಬಿತ್ತುವ ಭಾಷಣದ ಆರೋಪದಡಿ ಈ ಹಿಂದೆ ಮಂಗಳೂರಿನಲ್ಲಿ ಕೇಸು ದಾಖಲಾಗಿದ್ದ ಅರುಣ್ ಉಳ್ಳಾಲ ಅವರನ್ನು ಮಕ್ಕಳಿಗೆ ಉಪದೇಶ ನೀಡಲು ಆಹ್ವಾನಿಸಿರುವುದರ ವಿರುದ್ಧ ಪೋಷಕರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗೆ ಮೌಖಿಕವಾಗಿ ದೂರು ನೀಡಿದ್ದರು. ದ್ವೇಷ ಭಾಷಣ ಮಾಡುವವರನ್ನು ಶಾಲೆಗೆ ಉಪನ್ಯಾಸಕ್ಕೆ ಆಹ್ವಾನಿಸಿದ ಶಾಲಾ ಪ್ರಾಂಶುಪಾಲ ಶ್ರೀಧರ ಶೆಟ್ಟಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಪೋಷಕರ ಆಕ್ಷೇಪದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆರಂಭಗೊಳ್ಳುವುದಕ್ಕಿಂತ ಅರ್ಧ ತಾಸು ಮೊದಲೇ ಕಾರ್ಯಕ್ರಮ ರದ್ಧುಗೊಂಡಿರುವುದಾಗಿ, ಇಲಾಖಾಧಿಕಾರಿಗಳು ಹಾಗೂ ಶಾಲಾ ಪ್ರಾಂಶುಪಾಲರು ಘೋಷಣೆ ಮಾಡಿ ವಿವಾದವನ್ನು ಸುಖಾಂತ್ಯಗೊಳಿಸಿದರು.

ಅರುಣ್ ಉಳ್ಳಾಲ್ ಎಂಬವರು ಇತ್ತೀಚೆಗೆ ಉಳ್ಳಾಲ ತಾಲೂಕಿನ ತಲಪಾಡಿಯಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿ ಕ್ರೈಸ್ತರು ನಡೆಸುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬಾರದು, ಕ್ರೈಸ್ತರು ನಡೆಸುವ ಮದುವೆ ಸಭಾಂಗಣದಲ್ಲಿ ಮದುವೆಯಾಗಬಾರದು ಎಂಬುದಾಗಿ ಭಾಷಣ ಮಾಡಿದ್ದರು. ಈ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸಂದರ್ಭದಲ್ಲಿ ಸೈಬರ್ ಕ್ರೈಮ್ ಠಾಣಾ ಪೊಲೀಸರು ಅರುಣ್ ಉಳ್ಳಾಲ್ ವಿರುದ್ಧ ಕೋಮು ವೈಷಮ್ಯ ಬಿತ್ತುವ ಹಾಗೂ ಕೋಮು ಪ್ರಚೋದನೆ ಮಾಡಿದ ಸೆಕ್ಷನ್ ಅನ್ವಯ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದರು.

Exit mobile version