Site icon Suddi Belthangady

ಡಿ. ಕೆ. ಆರ್. ಡಿ. ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

ಬೆಳ್ತಂಗಡಿ: ಫೆ. 4 ವಿಶ್ವ ಕ್ಯಾನ್ಸರ್ ದಿನ. ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗತಿಕವಾಗಿ ಆಚರಣೆ ಮಾಡಲಾಗುತ್ತದೆ. ಅಂತೆಯೇ ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗವಾದ ಡಿ.ಕೆ.ಆರ್.ಡಿ.ಎಸ್ ನೇತೃತ್ವದಲ್ಲಿ ಕಾರಿತಾಸ್ ಇಂಡಿಯಾ ನವದೆಹಲಿ, ಸಂಪದ ಉಡುಪಿ, ಜೆ.ಸಿ.ಐ ಬೈಂದೂರು ಸಿಟಿ, ಎನ್. ಜಿ. ವಲ್ಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ಇವುಗಳ ಸಹಯೋಗದೊಂದಿಗೆ ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನವು ಬೈಂದೂರು ಪೇಟೆಯಲ್ಲಿ ಫೆ. 4 ರಂದು ಆಯೋಜಿಸಲಾಯಿತು. ಬೈಂದೂರು ಸಿಟಿಯ ಜೆ.ಸಿ.ಐ ಅಧ್ಯಕ್ಷ ರಾಜು ಕೆ. ಮೊಗವೀರರವರು ಕ್ಯಾನ್ಸರ್ ರೋಗದ ಬಗ್ಗೆ ತಯಾರಿಸಿದ ಕರಪತ್ರವನ್ನು ಅನಾವರಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಫಾ. ಬಿನೋಯಿ ಎ. ಜೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಮೂಲಕ ನಡೆಸಲ್ಪಡುವ ಕ್ಯಾನ್ಸರ್ ರೋಗದ ವಿರುದ್ಧದ ಅಭಿಯಾನದ ಕುರಿತು ಸಮಗ್ರವಾಗಿ ವಿವರಿಸಿದರು. ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಶ್ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿದರು. ಕಲ್ಮಕ್ಕಿ ಸಂತ ಸೆಬಾಸ್ಟಿಯನ್ ಚರ್ಚಿನ ಸಹಾಯಕ ಧರ್ಮಗುರು ಫಾ. ಮ್ಯಾಥ್ಯೂ ಮನಪ್ಪಾಟ್ ಹಾಗೂ ಉಡುಪಿ ಸಂಪದ ಸಂಸ್ಥೆಯ ಕಾರ್ಯಕರ್ತೆ ಸಿಂಥಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಂಯೋಜಕ ಸುನಿಲ್ ಗೊನ್ಸಾಲ್ವಿಸ್ ಎಲ್ಲರನ್ನು ಸ್ವಾಗತಿಸಿ, ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಕಾರ್ಯಕರ್ತರಾದ ಮಾರ್ಕ್ ಡಿ’ಸೋಜಾರವರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬೈಂದೂರು ಪೇಟೆಯಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಮೈಕ್ ಉದ್ಘೋಷಣೆ ಮಾಡಿ, ಸಾರ್ವಜನಿಕರಿಗೆ ಕ್ಯಾನ್ಸರ್ ರೋಗದ ಬಗ್ಗೆ ಕರಪತ್ರ ಹಂಚಲಾಯಿತು. ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗ ಪೀಡಿತ ವ್ಯಕ್ತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಹಾಗೂ ಅಂಗಡಿ ಮುಂಗಟ್ಟುಗಳ ವರ್ತಕರಿಂದ ಧನ ಸಹಾಯ ಸಂಗ್ರಹಣೆ ಮಾಡಲಾಯಿತು. ಸ್ವ ಸಹಾಯ ಸಂಘಗಳ ಮಹಿಳೆಯರು, ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ವಿವಿಧ ಸಂಘಟನೆಗಳು ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಉಡುಪಿ ಸಂಪದ ಸಂಸ್ಥೆಯ ಕಾರ್ಯಕರ್ತೆ ಸಿಂಥಿಯಾ ಧನ್ಯವಾದವಿತ್ತರು.

Exit mobile version