Site icon Suddi Belthangady

ಜನತೆಯ ನಾಡಿ ಮಿಡಿತ ಅರಿತು ವಿಕಸಿತ ಭಾರತದ ಬಜೆಟ್ ಮಂಡನೆ – ಹರೀಶ್ ಪೂಂಜ

ಬೆಳ್ತಂಗಡಿ: ಮಧ್ಯಮ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಫೆ. 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2025-26ನೇ ಸಾಲಿನ ಮುಂಗಡ ಪತ್ರ ನರೇಂದ್ರ ಮೋದಿ ನೇತೃತ್ವದ 3ನೇ ಅವಧಿ ಸರ್ಕಾರ ಉತ್ತಮ ಆಡಳಿತ ಆರ್ಥಿಕ ಸುಧಾರಣೆ ನೀಡುವತ್ತ ದಿಟ್ಟ ಹೆಜ್ಜೆ ಇರಿಸುತ್ತಿರುವುದರ ದ್ಯೋತಕವಾಗಿದೆಯೆಂದು ಶಾಸಕ ಹರೀಶ್ ಪೂಂಜ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆ, ಕೃಷಿ ಹಾಗೂ ಉತ್ಪಾದನಾ ವಲಯದ ಪ್ರಗತಿಗೆ ಪೂರಕವಾಗಲಿದ್ದು ಮೀನುಗಾರಿಕಾ ವಲಯಕ್ಕೆ ಉತ್ತೇಜನ, ಸಣ್ಣ ಉದ್ಯಮಿಗಳಿಗೆ ಸರಳ ಸಾಲ ಪ್ರತ್ಯೇಕ ಕ್ರೆಡಿಟ್ ಕಾರ್ಡ್ ಯೋಜನೆ ಪ್ರೋತ್ಸಾಹದಾಯಕವಾಗಲಿದೆ.

ಸ. ಪ್ರೌಢಶಾಲೆಗಳಿಗೆ ಇಂಟರ್ನೆಟ್ ಸೌಲಭ್ಯ, ಐಐಟಿಗಳ ಮೂಲ ಸೌಕರ್ಯ ವೃದ್ಧಿ, ವೈದ್ಯಕೀಯ ಸೀಟುಗಳ ಹೆಚ್ಚಳ ಶಿಕ್ಷಣ ರಂಗದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಪ್ರತೀ ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಭಾಗ ತೆರೆಯುವುದು ಜೀವರಕ್ಷಕ ಔಷಧಿಗಳ ಆಮದು ಸುಂಕ ರದ್ದು ಬಡ ಜನತೆಗೆ ಉತ್ತಮ ಆರೋಗ್ಯ ಸೇವೆ ದೊರಕಲು ನೆರವಾಗಲಿದೆ.

ತೆರಿಗೆ ಯೋಜನೆಯಡಿ ಬಡ್ಡಿ ಹಾಗೂ ಬಾಡಿಗೆಗಳ ಟಿ.ಡಿ.ಎಸ್ ಮಿತಿ ಹೆಚ್ಚಳ, ಮೊಬೈಲ್ ಎಲ್. ಇ. ಡಿ ಸೇವೆಗಳ ಅಗ್ಗ, ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ನೀಡುವ ಬೆಂಬಲದಿಂದ ಉದ್ಯೋಗ ಸೃಷ್ಟಿಯಾಗಲಿದೆ. ಆದಾಯ ತೆರಿಗೆದಾರರಿಗೆ ಆದಾಯದ ಮಿತಿಯನ್ನು12 ಲಕ್ಷಕ್ಕೆ ಏರಿಸಿರುವುದು ಸ್ವಾಗತಾರ್ಹ. ಜನತೆಯ ನಾಡಿಮಿಡಿತ ಅರಿತು ವಿಕಸಿತ ಭಾರತದ ಅತ್ಯುತ್ತಮ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವರನ್ನು, ಪ್ರಧಾನಿ ನರೇಂದ್ರ ಮೋದಿಯವರನ್ನು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ಅಭಿನಂದಿಸಿದ್ದಾರೆ.

Exit mobile version