Site icon Suddi Belthangady

ಚಾಲಕನನ್ನು ಕೊಲೆ ಮಾಡಿ ಶಿರಾಡಿ ಘಾಟ್‌ನಲ್ಲಿ ಶವ ಬಿಸಾಡಿದರು – ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಬಟ್ಟೆ ಎಸೆದು ಪರಾರಿಯಾದರು

ಬೆಳ್ತಂಗಡಿ: ಮೂವರು ಸ್ನೇಹಿತರು ಸೇರಿ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ ಶವವನ್ನು ಕಾರಿನಲ್ಲಿ ಹಾಕಿ ಶಿರಾಡಿ ಘಾಟ್‌ನಲ್ಲಿ ಬೆತ್ತಲೆ ಮಾಡಿ ಎಸೆದು ನಂತರ ಸಾಕ್ಷ್ಯ ನಾಶ ಮಾಡುವ ಉzಶದಿಂದ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯಲ್ಲಿ ಬಟ್ಟೆಗಳನ್ನು ಎಸೆದು ಸ್ನಾನ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ. ಕೃತ್ಯಕ್ಕೆ ಸಂಬಂಧಿಸಿ ಓರ್ವನನ್ನು ಹಾಸನ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಸನ ತಾಲೂಕಿನ ಹರಳಹಳ್ಳಿ ಗ್ರಾಮದ ಅಟೋ ಚಾಲಕ ಶಿವಕುಮಾರ್ (26) ಎಂಬವರನ್ನು ಸ್ನೇಹಿತರಾದ ಶರತ್, ಪ್ರದೀಪ್ ಹಾಗೂ ದಿಲೀಪ್ ಎಂಬವರು ಜ.10ರಂದು ಪಾರ್ಟಿಗೆಂದು ಬೇಲೂರು ರಸ್ತೆಯ ಕುಪ್ಪಳ್ಳಿ ಬಳಿ ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಹತ್ಯೆ ಮಾಡಿ ಬಳಿಕ ಶಿರಾಡಿ ಘಾಟ್‌ನಲ್ಲಿ ಶವವನ್ನು ಬೆತ್ತಲೆ ಮಾಡಿ ಎಸೆದಿದ್ದರು. ಶವ ಎಸೆದ ಬಳಿಕ ಮೂವರು ಕಾರಿನಲ್ಲಿ ಧರ್ಮಸ್ಥಳದ ನೇತ್ರಾವತಿ ನದಿಗೆ ಬಂದು ಹತ್ಯೆ ವೇಳೆ ಬಳಸಿದ್ದ ಬಟ್ಟೆಗಳನ್ನು ಬಿಸಾಡಿ ಸ್ನಾನ ಮಾಡಿ ಪರಾರಿಯಾಗಿದ್ದರು. ಈ ನಡುವೆ ಹಂತಕರ ಪೈಕಿ ದಿಲೀಪ್ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶಿವಕುಮಾರ್‌ಗೆ ಹಲ್ಲೆ ಮಾಡಿ ಆತನನ್ನು ಕೊಲೆ ಮಾಡುವಾಗ ನಾನು ಇದ್ದೆ.

ಅಲ್ಲಿ ಇಬ್ಬರು ನನಗೂ ಹಲ್ಲೆ ಮಾಡಿದ್ದಾರೆ. ಈ ವೇಳೆ ನಾನು ತಪ್ಪಿಸಿಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದ. ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಶರತ್ ಮತ್ತು ಪ್ರದೀಪ್ ಜತೆ ದಿಲೀಪ್ ಕೂಡ ಶಿವಕುಮಾರ್‌ನ ಕೊಲೆಯಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ. ಬಳಿಕ ಹಾಸನ ಗ್ರಾಮಾಂತರ ಠಾಣಾ ಪೊಲೀಸರು ದಿಲೀಪ್‌ನನ್ನು ಬಂಧಿಸಿ ಕೊಲೆಯಾದ ಶಿವಕುಮಾರ್ ಶವವನ್ನು ಬಿಸಾಡಿದ ಶಿರಾಡಿ ಘಾಟ್ ಪ್ರದೇಶ ಮತ್ತು ಸ್ನಾನ ಮಾಡಿ ಬಟ್ಟೆ ಬಿಸಾಡಿದ ನೇತ್ರಾವತಿ ನದಿಗೆ ಕರೆದುಕೊಂಡು ಬಂದು ಮಹಜರು ನಡೆಸಿದ್ದಾರೆ. ಜ.21ರಂದು ಸಂಜೆ ಮಂಗಳೂರು ಎಫ್.ಎಸ್.ಎಲ್ ವಿಭಾಗದ ಅರ್ಪಿತಾ, ಕಾವ್ಯಶ್ರೀ, ಸುಮನ್ ನೇತೃತ್ವದಲ್ಲಿ ಮಹಜರು ನಡೆಸಲಾಗಿದೆ. ಶರತ್ ಮತ್ತು ಪ್ರದೀಪ್ ಸೇರಿ ಮಾಡಿದ್ದ ಕಳ್ಳತನ ಪ್ರಕರಣದ ಬಗ್ಗೆ ಶಿವಕುಮಾರ್‌ಗೆ ಗೊತ್ತಿತ್ತು.
ಈ ವಿಚಾರ ಪೊಲೀಸರಿಗೆ ಹೇಳುತ್ತಾನೆ ಎಂಬ ಭಯದಲ್ಲಿ ಪಾರ್ಟಿ ಮಾಡುವ ನೆಪದಲ್ಲಿ ದಿಲೀಪ್ ಜತೆ ಸೇರಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಿಲೀಪ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಮುಖ ಆರೋಪಿಗಳಾದ ಪ್ರದೀಪ್ ಮತ್ತು ಶರತ್ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ.

Exit mobile version