Site icon Suddi Belthangady

ಮಚ್ಚಿನ ಪೇಟೆಯ ಸಾರ್ವಜನಿಕ ಶೌಚಾಲಯದ ಗತಿ ಅಧೋಗತಿ – ಮೂಲಭೂತ ಸೌಕರ್ಯ ಒದಗಿಸಲು ಸಾರ್ವಜನಿಕರ ಒಕ್ಕೊರಲ ಆಗ್ರಹ

ಮಚ್ಚಿನ: ಮಚ್ಚಿನ ಗ್ರಾಮದ ಪೇಟೆಯಲ್ಲಿರುವ ಶೌಚಾಲಯದ ಗತಿ ಅಧೋಗತಿ ಎಂಬಂತಾಗಿದೆ. ಗ್ರಾಮದಲ್ಲಿ ದೇವಸ್ಥಾನ, ಶಾಲೆ, ಬ್ಯಾಂಕು, ಆರೋಗ್ಯ ಕೇಂದ್ರ ಸಹಿತ ಇತರ ಮೂಲಭೂತ ಸೌಕರ್ಯಗಳಿದೆ. ಆದರೆ ಅತೀ ಅಗತ್ಯವಾಗಿರುವ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಸರಿಯಾಗಿಲ್ಲದೆ ಜನರು ಪರದಾಡುವಂತಾಗಿದೆ. ನಿರ್ಮಲ ಗ್ರಾಮ ಪುರಸ್ಕೃತವಾಗಿರುವ ಮಚ್ಚಿನ ಗ್ರಾಮದಲ್ಲಿ ಮನೆಗೊಂದು ಶೌಚಾಲಯ ಇದೆ. ಆದರೆ ಸಾರ್ವಜನಿಕರ ಉಪಯೋಗಕ್ಕಾಗಿ ಮಚ್ಚಿನ ಗ್ರಾಮದ ಹೃದಯ ಭಾಗದಲ್ಲಿ ಬಹುದೊಡ್ಡ ಶೌಚಾಲಯದ ಕಟ್ಟಡವಿದ್ದರೂ ಉಪಯೋಗಕ್ಕಿಲ್ಲದೆ ನಾರುತ್ತಿದೆ. ಗಿಡಗಂಟಿ, ಪೊದೆಗಳಿಂದ ಮುತ್ತಿ ಹೋಗಿರುವ ಶೌಚಾಲಯದ ಕಟ್ಟಡ ಸುತ್ತಮುತ್ತ ಸಾರಾಯಿ ಬಾಟಲಿಗಳ ರಾಶಿ ರಾಶಿ ಕಾಣುತ್ತಿದೆ. ಶೌಚಾಲಯದ ಬಾಗಿಲು ತುಕ್ಕು ಹಿಡಿದು ಹೋಗಿದ್ದು ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಹಲವಾರು ಜನರು ಓಡಾಡುವ ಈ ಪೇಟೆಯಲ್ಲಿ ಇನ್ನಾದರೂ ಒಂದು ಉತ್ತಮ ಶೌಚಾಲಯ ನಿರ್ಮಾಣವಾಗಬೇಕು. ಶೌಚಾಲಯದ ನಿರ್ವಹಣೆಗೆ ಜನ ನೇಮಕಗೊಳಿಸಬೇಕು ಎಂದು ಜನರಿಂದ ಆಗ್ರಹ ವ್ಯಕ್ತವಾಗಿದೆ.

ಶೌಚಾಲಯದ ಅವಶ್ಯಕತೆ ಇದೆ: ಎರಡು ದೇವಸ್ಥಾನ, ಎಂಟು ಅಂಗನವಾಡಿ ಕೇಂದ್ರ, ಐದು ಪ್ರಾಥಮಿಕ ಶಾಲೆ, ಒಂದು ಪ್ರೌಢಶಾಲೆ, ಮುರಾರ್ಜಿ ದೇಸಾಯಿ ಶಾಲೆ, ಬ್ಯಾಂಕ್, ಗ್ರಾಮ ಪಂಚಾಯತ್ ಕಚೇರಿ, ಆಸ್ಪತ್ರೆ, ಸಮುದಾಯ ಭವನ ಇರುವಂತ ಮಚ್ಚಿನ ಗ್ರಾಮಕ್ಕೆ ಸಾರ್ವಜನಿಕ ಶೌಚಾಲಯದ ಅವಶ್ಯಕತೆ ಇದೆ. ಬೇರೆ ಬೇರೆ ಕೆಲಸಗಳಿಗೆ ದೂರದಿಂದ ಬರುವ ತಾಯಂದಿರು ಶೌಚಾಲಯ ಇಲ್ಲದೆ ಬೇರೆಯವರ ಮನೆಯ ಬಾಗಿಲು ತಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 8 ವರ್ಷಗಳ ಹಿಂದೆ ನಿರ್ಮಾಣವಾದ ಶುದ್ಧ ನೀರಿನ ಘಟಕ ಮಚ್ಚಿನ ಗ್ರಾಮದ ಜನರಿಗೆ ಪ್ರಯೋಜನಕ್ಕೆ ಬಂದಿಲ್ಲ. ಮಚ್ಚಿನ ಗ್ರಾಮಕ್ಕೆ ಒಂದು ವಾಣಿಜ್ಯ ಸಂಕೀರ್ಣದ ಅವಶ್ಯಕತೆ ಇದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ವಹಿಸಬೇಕು ಎಂದು ಪಿಕಪ್ ಚಾಲಕ ಪ್ರಭಾಕರ ಪೂಜಾರಿ ಮುದಲಡ್ಕ ತಿಳಿಸಿದ್ದಾರೆ.

ತೆರಿಗೆ ಕಟ್ಟುತ್ತೇವೆ: ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಗ್ರಾಮ ಪಂಚಾಯತ್‌ನ ಮೊದಲ ಆದ್ಯತೆ. ನಾವೆಲ್ಲರೂ ತೆರಿಗೆ ಕಟ್ಟುತ್ತೇವೆ. ಪೇಟೆಗೆ ಬಂದರೆ ಸಾರ್ವಜನಿಕರಿಗೆ ಶೌಚಾಲಯವಿಲ್ಲ. ಕುಡಿಯಲು ನೀರಿಲ್ಲ. ಮೂಲಭೂತ ಸೌಕರ್ಯಗಳ ವ್ಯವಸ್ಥೆ ಶೀಘ್ರದಲ್ಲಿ ಮಾಡಬೇಕು ಎಂದು ಜೋಸೆಫ್ ವೇಗಸ್ ಬಳ್ಳಮಂಜ ಒತ್ತಾಯಿಸಿದ್ದಾರೆ.

ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ: ಆಟೋದಲ್ಲಿ ಬರುವ ಪ್ರಯಾಣಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಶೌಚಾಲಯ ಹಾಗೂ ಕುಡಿಯುವ ನೀರಿನ ಅವಶ್ಯಕತೆ ಇದೆ. ಅಟೋ ಚಾಲಕ ಮಾಲಕರ ಸಂಘದ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಟ್ಟಿದ್ದೇವೆ. ಆದರೆ ಪೈಪ್‌ಲೈನ್ ವ್ಯವಸ್ಥೆ ಇನ್ನೂ ಆಗಿಲ್ಲ ಎಂದು ಮಡಂತ್ಯಾರು ಮಚ್ಚಿನ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ಕಾರ್ಯದರ್ಶಿ ವಸಂತ ಪೂಜಾರಿ ಕುಂಡಡ್ಕ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಉಪಯೋಗಕ್ಕೆ ಸಿಗುವಂತಾಗಲಿ: ಮಚ್ಚಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದ ಯೋಜನೆ ನಡೆದರೂ ಅದರ ಸಮರ್ಪಕ ಉಪಯೋಗ ಆಗಿಲ್ಲ. ಚುನಾವಣೆ ಹಾಗೂ ಪ್ರಚಾರಕ್ಕೆ ಸೀಮಿತ ಆಗುವಂತೆ ಇಲ್ಲಿ ಹೇಳಿಕೆ ಮಾತ್ರ ನೀಡಲಾಗುತ್ತದೆ. ಕುಡಿಯುವ ನೀರು ಹಾಗೂ ಶೌಚಾಲಯ ಕಾಣಬಹುದಾಗಿದೆ. ಆದರೆ ಪ್ರಯೋಜನ ಯಾವ ಸಾರ್ವಜನಿಕರಿಗೂ ಸಿಗುತ್ತಿಲ್ಲ. ಈ ಯೋಜನೆಗೆ ಸಹಕಾರ ನೀಡುವಂತೆ ಸ್ಥಳೀಯ ಅಧಿಕಾರಿಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಶಾಸಕರಿಗೂ ಗ್ರಾಮ ಪಂಚಾಯತ್ ಸದಸ್ಯರಿಗೂ ಈ ಮೂಲಕ ನನ್ನ ಒಂದು ಚಿಕ್ಕ ವಿನಂತಿ. ಇದರ ಸಮರ್ಪಕ ಬಳಕೆ ಆಗಲಿ. ಸಾರ್ವಜನಿಕರಿಗೆ ಉಪಯೋಗಕ್ಕೆ ಸಿಗುವಂತಾಗಲಿ ಎಂದು ಮಚ್ಚಿನ ಶಾಲಾ ಎಸ್‌.ಡಿ.ಎಂ.ಸಿ ಉಪಾಧ್ಯಕ್ಷೆ ಪ್ರತಿಮಾ ತಾರಾನಾಥ ಶೆಟ್ಟಿ ತಿಳಿಸಿದ್ದಾರೆ.

Exit mobile version