ತಣ್ಣೀರುಪಂತ: ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ಗ್ರಾಮಸಭೆಗೆ ಅಧಿಕಾರಿಗಳು ಗೈರಾಗಿರುವ ಕಾರಣ ಮುಂದೂಡಲಾಗಿದೆ. ಪಂಚಾಯತ್ ವ್ಯಾಪ್ತಿಯ ಶಾಲೆಗಳಿಂದ ಮಕ್ಕಳು, ಮುಖ್ಯೋಪಾಧ್ಯಾಯರು ಹಾಗೂ ಎಸ್. ಡಿ. ಎಂ. ಸಿ ಅಧ್ಯಕ್ಷರುಗಳು ಪಾಲ್ಗೊಂಡ ಸಭೆಯಲ್ಲಿ ತಾಲೂಕು ಮಟ್ಟದ ಯಾವುದೇ ಅಧಿಕಾರಿಗಳು ಉಪಸ್ಥಿತರಿರದೆ ಮಕ್ಕಳ ಗ್ರಾಮಸಭೆಯು ಕಾಟಾಚಾರಕ್ಕೆ ದಾಖಲೆ ಕ್ರೋಡೀಕರಣಕ್ಕಾಗಿ ಮಾಡುವ ಉದ್ದೇಶವನ್ನು ಒಳಗೊಂಡಿತ್ತು.
ಇದರ ಬಗ್ಗೆ ಪ್ರಶ್ನಿಸಿದ ಸ್ಥಳೀಯ ಶಾಲೆಗಳ ಎಸ್. ಡಿ. ಎಂ. ಸಿ ಅಧ್ಯಕ್ಷರುಗಳು, ಈ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕಿದ್ದ ಮಕ್ಕಳ ಅಭಿವೃದ್ಧಿ ಇಲಾಖೆಯವರು, ಶಿಕ್ಷಣ ಇಲಾಖೆಯವರು, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಯಾವುದೇ ಅಧಿಕಾರಿಗಳು ಕೂಡ ಪಾಲ್ಗೊಳ್ಳದೆ ಇರುವುದು ಮಕ್ಕಳ ಗ್ರಾಮಸಭೆಯ ಬಗ್ಗೆ ಇಲಾಖೆಗಳಿಗೆ ಇರುವಂತಹ ತಾತ್ಸಾರ ಭಾವನೆಯನ್ನು ಎತ್ತಿ ತೋರಿಸುತ್ತಿದೆ. ಆದರಿಂದ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಂದ ಮೇಲೆಯೇ ಸಭೆಯನ್ನು ಮುಂದುವರಿಸಲು ಆಗ್ರಹಿಸಿದರು.
ಆದರೆ ಮಧ್ಯಾಹ್ನದವರೆಗೂ ಯಾವುದೇ ಅಧಿಕಾರಿಯು ಪಾಲ್ಗೊಳ್ಳದೆ ಇರುವ ಕಾರಣ ಸಭೆಯನ್ನು ಮುಂದೂಡಲಾಯಿತು. ಈ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷ ಪ್ರಿಯ, ಸದಸ್ಯರಾದ ಅನಿಲ್, ನಿಸಾರ್ ಕುದ್ರಡ್ಕ, ಪಂಚಾಯತ್ ಕಾರ್ಯದರ್ಶಿ ಆನಂದ ಹಾಗೂ ಉಜಿರುಬೆಟ್ಟು, ತುರ್ಕಳಿಕೆ, ಕಲ್ಲೇರಿ, ತಣ್ಣೀರುಪಂಥ, ಕರಾಯ, ಕಲ್ಲಕಟ್ಟಣಿ ಹಾಗೂ ಕರಾಯ ಪ್ರೌಡ ಶಾಲೆಯ ಮಕ್ಕಳು, ಮುಖ್ಯ ಶಿಕ್ಷಕರು ಹಾಗೂ ಎಸ್. ಡಿ. ಎಂ. ಸಿ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು.