ಉಜಿರೆ: ಜ. 26 ರಂದು ರಾಷ್ಟ್ರೀಯ ಹಬ್ಬವಾದ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಯುವ ಮುಂದಾಳು ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಫೆರ್ನಾಂಡಿಸ್, ಹಳ್ಳಿಮನೆ ಮುಖ್ಯ ಅತಿಥಿಯಾಗಿ ಆಗಮಿಸಿ ಗೌರವ ರಕ್ಷೆಯನ್ನು ಸ್ವೀಕರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ರೆ. ಫಾ. ಅಬೆಲ್ ಲೋಬೊ ಪ್ರಜಾಪ್ರಭುತ್ವ ನಮ್ಮ ದೇಶದ ಸಂವಿಧಾನದಲ್ಲಿ ಅಡಕವಾಗಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ನಮ್ಮನ್ನು ಜಾಗೃತಗೊಳಿಸುವುದೆಂದು ತಿಳಿಸುತ್ತಾ ಸೌಹಾರ್ಧಯುತವಾಗಿ ಏಕತೆಯಿಂದ ಬಾಳಿ ಬದುಕಬೇಕೆಂಬ ಸಂದೇಶ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಾಂಶುಪಾಲ ಫಾ. ವಿಜಯ್ ಲೋಬೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟನಿ ಫೆರ್ನಾಂಡೀಸ್, ಕಾರ್ಯದರ್ಶಿ ಲಿಗೋರಿ ವಾಸ್, ಸ್ಥಳೀಯ ಪಂಚಾಯತ್ ಸದಸ್ಯರುಗಳಾದ ಅನಿಲ್ ಡಿ’ಸೋಜಾ ಹಾಗೂ ಜಾನೆಟ್ ರೊಡ್ರಿಗಸ್ ಉಪಸ್ಥಿತರಿದ್ದರು. ಹಾಗೂ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ- ರಕ್ಷಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಪಥ ಸಂಚಲನ ಹಾಗೂ ಸಾಮೂಹಿಕ ಕವಾಯತು ನಡೆಯಿತು. ವಿದ್ಯಾರ್ಥಿಗಳಿಂದ ದೇಶಭಕ್ತಿ ಬಿಂಬಿಸುವ ನೃತ್ಯ ಹಾಗೂ ಹಾಡುಗಳನ್ನು ಪ್ರಸ್ತುತ ಪಡಿಸಲಾಯಿತು. ವಿದ್ಯಾರ್ಥಿನಿ ಪ್ರತೀಕ್ಷಾ ಪ್ರಜಾಪ್ರಭುತ್ವ ದಿನದ ಮಹತ್ವದ ಬಗ್ಗೆ ಭಾಷಣ ಮಾಡಿದಳು. ಕಾರ್ಯಕ್ರಮವನ್ನು ಶಿಕ್ಷಕಿ ಸಿ. ಸಿರಿಶಾ ಹಾಗೂ ಮಿಶಲ್ ನಿರೂಪಿಸಿ ಸ್ವಾಗತಿಸಿ, ವಂದಿಸಿದರು.