Site icon Suddi Belthangady

ಉಜಿರೆ ದೇಗುಲದಲ್ಲಿ ವೈಭವದ ವರ್ಷಾವಧಿ ಜಾತ್ರೆ

ಉಜಿರೆ: ಶ್ರೀ ಜನಾರ್ದನ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಅರ್ಚಕ ಶ್ರೀನಿವಾಸ ಹೊಳ್ಳರ ಧಾರ್ಮಿಕ ವಿಧಿಗಳೊಂದಿಗೆ ಜ. 14 ರಂದು ಪ್ರಾರಂಭಗೊಂಡು, ಜ. 23 ರಂದು ಸಂಪನ್ನಹೊಳ್ಳಲಿದೆ.

10 ದಿನಗಳ ಕಾಲ ವಿವಿಧ ಧಾರ್ಮಿಕ, ವೈದಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದಿವೆ. ಜ. 20 ರಂದು ರಾತ್ರಿ ಶ್ರೀ ದೇವರ ಚಂದ್ರಮಂಡಲ ರಥೋತ್ಸವ ವೈಭವದಿಂದ ನಡೆಯಿತು. ರಾತ್ರಿ ಶ್ರೀ ಜನಾರ್ದನ ಸ್ವಾಮಿಯ ಉತ್ಸವ ಮೂರ್ತಿಯನ್ನು ಕೊಕ್ಕಡದ ವೆಂಕಟರಾಜ ಹೆಬ್ಬಾರ್‌ರಿಂದ ಹೊರಾಂಗಣದಲ್ಲಿ ವಿವಿಧ ವಾದ್ಯವಾದನಗಳ ಸುತ್ತುಬಲಿ, ಭಗಿನಿ ಭಜನಾ ಮಂಡಳಿಯ ಸದಸ್ಯರ ಶ್ರೀ ವಿಷ್ಣು ಸಹಸ್ರನಾಮ ಪಠಣಕ್ಕೆ ಪಲ್ಲಕಿ ಸುತ್ತು, ಯುವವಿಪ್ರರ ಜಾಗಟೆವಾದನಕ್ಕೆ ಬೆಳ್ಳಿ ರಥ ಸುತ್ತು ಬಲಿ ಉತ್ಸವ ನಡೆದು, ರಥಬೀದಿಯಲ್ಲಿ ಚಂದ್ರಮಂಡಲ ರಥಾರೋಹಣ ನಡೆಯಿತು. ಅಶ್ವತ್ಥಕಟ್ಟೆವರೆಗೆ ಭಕ್ತರು ರಥವನನ್ನೆಳೆದು ಮರಳಿ ಸ್ವಸ್ಥಾನಕ್ಕೆ ತಂದರು.

ಜ. 21 ರಂದು ಬೆಳಿಗ್ಗೆ ಶ್ರೀ ದೇವರ ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ ಪ್ರಸಾದ ನಡೆಯಿತು. ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರು. ಮಧ್ಯಾಹ್ನ ಮಹಾಪೂಜೆ ಹಾಗು ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಅರ್ಚಕ ರಾಮಚಂದ್ರ ಹೊಳ್ಳರಿಂದ ಪಲ್ಲಪೂಜೆ ನಡೆಯಿತು.

ಪ್ರವೀಣಕುಮಾರ್ ಇಂದ್ರರವರ ಸೇವಾರ್ಥ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸುಮಾರು 7 ಸಹಸ್ರಕ್ಕೂ ಅಧಿಕ ಭಕ್ತಾದಿಗಳು ಪ್ರಸಾದ ಸ್ವೀಕರಿಸಿದರು. ವೆಂಕಟ್ರಮಣ ಹೆಬ್ಬಾರ್ ಮತ್ತು ರಾಮಚಂದ್ರ ಶೆಟ್ಟಿ ಉಸ್ತುವಾರಿಯಲ್ಲಿ ಅನ್ನಸಂತರ್ಪಣೆ ನಡೆಯಿತು. ವಿ. ಪ. ಸದಸ್ಯ ಪ್ರತಾಪಸಿಂಹ ನಾಯಕ್ ಅನ್ನಸಂತರ್ಪಣೆಗೆ ಚಾಲನೆ ನೀಡಿದರು.

ಬೆಂಗಳೂರಿನ ಜಯಗೋಪಾಲ ಗೌಡ ಮತ್ತು ಮಹಿಶ್ ಕುಮಾರ್ ಸೇವಾರ್ಥ ದೇವಸ್ಥಾನವನ್ನು ಪುಷ್ಪಾಲಂಕಾರಗಳಿಂದ ಅಲಂಕರಿಸಲಾಗಿತ್ತು. ರಾತ್ರಿ ಶ್ರೀ ಜನಾರ್ದನ ಸ್ವಾಮಿ ಹಾಗು ಶ್ರೀ ಮಂಜುಳೇಶ ದೇವರ ಉಭಯ ಉತ್ಸವ ಮೂರ್ತಿಯನ್ನು ವೆಂಕಟರಾಜ ಹೆಬ್ಬಾರ್ ಮತ್ತು ರಾಧಾಕೃಷ್ಣ ಹೊಳ್ಳರು ತಲೆಯ ಮೇಲೆ ಹೊತ್ತು ವಿವಿಧ ವಾದ್ಯವಾದನ ಗಳಿಗೆ ನರ್ತನ ಸೇವೆ ನಡೆಸಿ ಮಧ್ಯರಾತ್ರಿ ವೇಳೆ ರಥಬೀದಿಯಲ್ಲಿ ದರ್ಶನ ಹಾಗೂ ಶ್ರೀ ದೇವರ ರಥಾರೋಹಣ ನಡೆಯಿತು. ಬಳಿಕ ಭಕ್ತರ ಜಯಘೋಷದ ಉದ್ಘಾರದೊಂದಿಗೆ ಮಹಾರಥೋತ್ಸವ ಸಂಭ್ರಮದಿಂದ ನಡೆಯಿತು. ಅಶ್ವತ್ಥಕಟ್ಟೆವರೆಗೆ ಸಾಗಿದ ರಥ ಮರಳಿ ಸ್ವಸ್ಥಾನ ತಲುಪಿ ಶ್ರೀ ಭೂತಬಲಿ ನಡೆದು ನಂತರ ದೇವರ ಶಯನೋತ್ಸವ ನಡೆಯಿತು.

ಶ್ರೀ ಶಾರದಾ ಮಂಟಪದಲ್ಲಿ ಸಂಗೀತ, ನೃತ್ಯ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಿತು. ಆಕರ್ಷಕ ಸುಡುಮದ್ದು ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.

Exit mobile version