Site icon Suddi Belthangady

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಕನ್ನಡ ವ್ಯಾಕರಣ ಕಾರ್ಯಗಾರ

ಪಟ್ಟೂರು: ಕನ್ನಡ ಭಾಷಾ ಬೆಳವಣಿಗೆಯಲ್ಲಿ ವ್ಯಾಕರಣವು ಪ್ರಧಾನವಾಗಿದ್ದು, ಮಕ್ಕಳಿಗೆ ವ್ಯಾಕರಣದ ಪರಿಚಯವಿದ್ದಾಗ ಮಾತ್ರ ಭಾಷೆಯನ್ನು ಸುಲಭವಾಗಿ ಕಲಿಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ವ್ಯಾಕರಣದಲ್ಲಿ ಬರುವ ಸಮಾಸಗಳು, ಸಂಧಿಗಳು ಸೇರಿದಂತೆ ಅನೇಕ ವಿಚಾರಗಳನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕು ಎಂದು ಪಟ್ಟೂರು ಶ್ರೀರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ನುಡಿದರು.

ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕನ್ನಡ ವ್ಯಾಕರಣದಲ್ಲಿ ಸಮಾಸಗಳು ಎಂಬ ವಿಷಯದ ಕುರಿತ ನಡೆದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.

ಚಟುವಟಿಕೆ ಆಧಾರಿತವಾಗಿ ವ್ಯಾಕರಣಗಳನ್ನು ಕಲಿತಾಗ ಅದನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂತಾಗುತ್ತದೆ. ಹಾಗೂ ಇದು ಮುಂದಿನ ತರಗತಿಗಳಿಗೆ ಮಕ್ಕಳ ಕಲಿಕೆಗೆ ಸುಲಭವಾಗಿಸುತ್ತದೆ. ಕ್ರಿಯಾತ್ಮಕವಾಗಿ ಹಾಗೂ ವಿಭಿನ್ನ ರೀತಿಯಲ್ಲಿ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಶಿಕ್ಷಕರು ಸ್ವ ಇಚ್ಛೆಯಿಂದ ಕಾರ್ಯಗಾರವನ್ನು ನಮ್ಮ ಶ್ರೀರಾಮ ಶಾಲೆಯಲ್ಲಿ ನಡೆಸುತ್ತಿರುವುದು ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚು ಹೆಚ್ಚು ಕಾರ್ಯಾಗಾರಗಳು ನಮ್ಮ ಶಾಲೆಯಲ್ಲಿ ನಡೆಯಲಿದೆ ಎಂದರು.

ಕನ್ನಡ ವಿಭಾಗದ ಶಿಕ್ಷಕಿ ಸುಪ್ರೀತಾ ಎ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನೇಕ ಉದಾಹರಣೆಗಳ ಮೂಲಕ ಸಮಾಸವನ್ನು ವಿವರಿಸಿದರು. ಕನ್ನಡ ವಿಭಾಗದ ಶಿಕ್ಷಕಿ ಸ್ವಾತಿ ಕೆ. ವಿ. ಸಹಕರಿಸಿದರು.
ಪ್ರೌಢಶಾಲೆಯ 8ನೇ, 9ನೇ, 10ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡರು.

Exit mobile version