Site icon Suddi Belthangady

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಧಾರ್ಮಿಕ ಸಮನ್ವಯ ಕೇಂದ್ರ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಕಾಜೂರು ಮಖಾಂ ಶರೀಫ್ ನಲ್ಲಿ ಈ‌ ವರ್ಷದ ಉರೂಸ್ ಮಹಾ ಸಂಭ್ರಮವು ಜ. 24ರಿಂದ ಆರಂಭಗೊಂಡು ಫೆ. 2 ರವರೆಗೆ ನಡೆಯಲಿದ್ದು, ಇದರ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಲು ಪೊಲೀಸ್ ಅಧಿಕಾರಿಗಳ ವಿಶೇಷ ಸಭೆಯು ಜ. 17 ರಂದು ಕಾಜೂರಿನ ಆಡಳಿತ ಕಚೇರಿಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ. ಯು. ಇಬ್ರಾಹಿಂ ಮಾತನಾಡಿ, ಕಾಜೂರು ಉರೂಸ್ ಸಂಭ್ರಮಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅಲ್ಲದೆ ಕೇರಳ, ತಮಿಳುನಾಡು ಮೊದಲಾದೆಡೆಗಳಿಂದಲೂ ಅನೇಕ ಭಕ್ತರು ಜಾತಿ ಧರ್ಮದ ಭೇದವಿಲ್ಲದೆ ಆಗಮಿಸುತ್ತಾರೆ.

ಅವರಿಗೆ ತೊಂದರೆಯಾಗದ ರೀತಿಯಲ್ಲಿ ನಾವು ವ್ಯವಸ್ಥೆ ರೂಪಿಸಲಿದ್ದೇವೆ. ಈ‌ ವೇಳೆ ಪೊಲೀಸ್ ಇಲಾಖೆಯಿಂದಲೂ ನಮಗೆ ಹೆಚ್ಚಿನ ಸಹಕಾರ ಬೇಕಾಗಿದೆ ಎಂದರು.

ಸಭೆ ನಡೆಸಿಕೊಟ್ಟ ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಬಿ. ಜಿ. ಸುಬ್ಬಾಪುರಮಠ್ ಮಾತನಾಡಿ, ಕಾಜೂರು ಕ್ಷೇತ್ರದ ಬಗ್ಗೆ ಅನೇಕ ಕಡೆಗಳಲ್ಲಿ ಪ್ರಸಿದ್ಧಿ ಇರುವುದನ್ನು ನಾನು ಮನಗಂಡಿದ್ದೇನೆ. ಇಲ್ಲಿನ ಅಭಿಮಾನಿಗಳು ಹಾಗೂ ಭಕ್ತರು ಇರುವುದನ್ನೂ ನಾನು ಕೇಳಿ ತಿಳಿದುಕೊಂಡಿದ್ದೇನೆ.

ಇಲ್ಲಿನ ಉರೂಸ್ ಕಾರ್ಯಕ್ರಮ ಸುಸೂತ್ರವಾಗಿ ನಡೆಯಬೇಕಾಗಿದೆ. ಅದಕ್ಕೆ ಪೊಲೀಸ್ ಇಲಾಖೆ ಕಡೆಯಿಂದ ಹೆಚ್ಚಿನ ಕಾಳಜಿ ವಹಿಸಲಾಗುವುದು. ಸಮಿತಿ ಮತ್ತು‌ ಈ ಊರಿನವರ ಸಹಕಾರ ಇದ್ದರೆ ಮಾತ್ರ ಈ ಕಾರ್ಯ ಯಶಸ್ವಿಯಾಗಿ ಮಾಡಬಹುದು. ಈ ವರ್ಷದ ಉರೂಸ್ ಕಾರ್ಯಕ್ರಮಗಳನ್ನು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಹಳಿ ತಪ್ಪದಂತೆ ನಾವೆಲ್ಲ ನಡೆಸಿಕೊಡೋಣ ಎಂದರು.

ಉರೂಸ್ ಸಮಿತಿ ವತಿಯಿಂದ ಇನ್ಸ್‌ಪೆಕ್ಟರ್ ರವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಜಿಲ್ಲಾ ವಕಫ್ ಸಲಹಾ ಸಮಿತಿ ಸದಸ್ಯರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯೂ ಆದ ಜೆ‌. ಹೆಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕೋಶಾಧಿಕಾರಿ ಕೆ. ಎಮ್. ಕಮಾಲ್ ಕಾಜೂರು, ಹಿರಿಯರಾದ ಬದ್ರುದ್ದೀನ್ ಕಾಜೂರು, ಅಬೂಬಕ್ಕರ್ ಮಲ್ಲಿಗೆಮನೆ, ಪುತ್ತುಮೋನು ಕಿಲ್ಲೂರು, ಶಾಹುಲ್ ಹಮೀದ್ ಅಮ್ಮಿ, ಎ. ಯು. ಮೊಹಮ್ಮದಲಿ, ಎನ್. ಎಮ್. ಯಾಕುಬ್ ಹಾಗೂ ಕಾಜೂರು ಕಿಲ್ಲೂರು ಜಂಟಿ ಉರೂಸ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version