Site icon Suddi Belthangady

ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ

ಬೆಳಾಲು: ಗ್ರಾಮ ಪಂಚಾಯತಿನ ಮಕ್ಕಳ ಗ್ರಾಮ ಸಭೆ ಜ. 17 ರಂದು ಮಕ್ಕಳ ಗ್ರಾಮ ಸಭೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯ ಸ. ಉ. ಶಾಲಾ ವಿದ್ಯಾರ್ಥಿನಿ ಸೃಜನ್ಯ ವಹಿಸಿಕೊಂಡರು. ಗ್ರಾಮ ಪಂಚಾಯಿತಿನ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ವಿದ್ಯಾರ್ಥಿಗಳಿಗೆ ಗ್ರಾಮ ಸಭೆಯ ಮಹತ್ವ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ವಿದ್ಯಾರ್ಥಿಗಳು ಅನುಸರಿಸಬೇಕಾದ ರೀತಿ ನೀತಿಗಳು ಹಾಗೂ ಗ್ರಾಮ ಪಂಚಾಯಿತಿಗಳಿಂದ ಶಾಲೆಗಳಿಗೆ ಸಿಗುವಂತಹ ಸೌಲಭ್ಯಗಳು ಹಾಗೂ ಅನುದಾನಗಳ ಬಗ್ಗೆ ವಿವರವನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ಸಂಚಾರಿ ಪೊಲೀಸ್ ಸ್ಟೇಷನ್ ಎ. ಎಸ್. ಐ ಚಿನ್ನಪ್ಪ ಭಾಗವಹಿಸಿ ರಸ್ತೆ ಸಂಚಾರ ನಿಯಮದ ಹಾಗೂ ಕಾನೂನುಗಳ ಬಗ್ಗೆ ತಿಳಿಸಿದರು. ಬೆಳಾಲು ಶ್ರೀ ಧ. ಮ. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಜಯರಾಮಯ್ಯ ವಿದ್ಯಾರ್ಥಿಗಳು ಪ್ರಸ್ತುತ ದಿನಗಳಲ್ಲಿ ಎದುರಿಸುವ ಸಮಸ್ಯೆಗಳು ಹಾಗೂ ತೊಂದರೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ವಿದ್ಯಾರ್ಥಿಗಳು ಗ್ರಾಮಸಭೆಯಲ್ಲಿ ತಮ್ಮ ಬೇಡಿಕೆಯನ್ನು ಮುಂದಿಟ್ಟರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಎಳ್ಳು ಗದ್ದೆ, ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ನಾಯ್ಕ್, ಆಶಾ ಕಾರ್ಯಕರ್ತೆ ನಿರ್ಮಲ, ಬೆಳಾಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಮಾಯ, ಎಸ್‌. ಡಿ. ಎಂ., ಬೆಳಾಲು, ಕೊಲ್ಪಾಡಿ, ಪೆರಿಯಡ್ಕ, ಸರಸ್ವತಿ ಅ. ಹಿ. ಪ್ರಾ.ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಬೆಳಾಲು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Exit mobile version