Site icon Suddi Belthangady

ಅರಸಿನಮಕ್ಕಿ: ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ

ಹತ್ಯಡ್ಕ: ಸೇವಾಭಾರತಿ ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ-ಶಿಶಿಲ ಇದರ ಸಹಭಾಗಿತ್ವದೊಂದಿಗೆ ಮಹಿಳೆಯರಿಗಾಗಿ 30ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಅರಸಿನಮಕ್ಕಿ ನಾವಳೆ ಪಾಲೆಂಜದ ಅಂಗನವಾಡಿ ಕೇಂದ್ರದಲ್ಲಿ ಜ. 14ರಂದು ನಡೆಯಿತು. ಸಮಾಜ ಸೇವಕ ಧರ್ಮರಾಜ ಗೌಡ ಅಡ್ಕಾಡಿ ಮಹಿಳೆಯರು ತನ್ನ ಕಾಲ ಮೇಲೆ ನಿಂತುಕೊಂಡು ಸ್ವಾವಲಂಬಿಯಾಗಿ ಬದುಕು ನಡೆಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ಸಿಇಒ ಸ್ವರ್ಣಗೌರಿ ಟೈಲರಿಂಗ್ ಕಲಿಯುವುದರಿಂದ ಬೇರೆ ಬೇರೆ ರೀತಿಯ ಸ್ವ – ಉದ್ಯೋಗದ ಅವಕಾಶವಿರುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಯಾರಿಗೂ ಅವಲಂಬಿತವಾಗದೆ ಸ್ವಾವಲಂಬಿ ಜೀವನವನ್ನು ನಡೆಸುವುದು ಅತ್ಯಗತ್ಯವೆಂದು ತಿಳಿಸಿದರು.

ಅರಿಕೆಗುಡ್ಡೆ ಶ್ರೀ ವನದುರ್ಗ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕಬೆ, ಅರಸಿನಮಕ್ಕಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಾಘವೇಂದ್ರ ನಾಯಕ್ ಬರ್ಗುಳ, ಅರಸಿನಮಕ್ಕಿ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಜಯಪ್ರಸಾದ್ ಶೆಟ್ಟಿಗಾರ್, ಕನ್ಯಾಡಿ ಶ್ರೀದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ಶಾಂತ ಪಿ. ಶೆಟ್ಟಿ, ಅರಿಕೆಗುಡ್ಡೆ ಶ್ರೀ ವನದುರ್ಗ ದೇವಸ್ಥಾನದ ಮಹಿಳಾ ಕಾರ್ಯದರ್ಶಿ ನೀತಾ ರಾಧೇಶ್ ಆಚಾರ್ಯ, ನಾವಳೆ-ಪಾಲೆಂಜ ಬಾಲವಿಕಾಸ ಕೇಂದ್ರದ ಅಧ್ಯಕ್ಷೆ ಕೇಶವತಿ, ನಾವಳೆ ಟೈಲರಿಂಗ್ ತರಬೇತಿದಾರರಾದ ವಿಮಲ ಆರ್. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಟ್ಟು 23 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪೂರ್ಣಿಮಾ ಸ್ವಾಗತಿಸಿ, ಸೇವಾಭಾರತಿಯ ಡಾಕ್ಯುಮೆಂಟೇಶನ್ ಮೋನಿಟರಿಂಗ್ ಮತ್ತು ಇವಲ್ಯೂವೇಟಿಂಗ್ ಕಾರ್ಡಿನೇಟರ್ ಸುಮ ಕಾರ್ಯಕ್ರಮ ನಿರೂಪಿಸಿ ನಮಿತಾ ವಂದಿಸಿದರು.

Exit mobile version