ಬೆಳ್ತಂಗಡಿ: ಉಜಿರೆಯ ಬೆನಕ ಆಸ್ಪತ್ರೆಗೆ 25 ವರ್ಷ ಪೂರ್ಣಗೊಂಡಿದ್ದು, ರಜತ ಸಂಭ್ರಮ ಆಚರಿಸುತ್ತಿದೆ. ಹೊಸದಾಗಿ ನಿರ್ಮಾಣಗೊಂಡಿರುವ ಆಸ್ಪತ್ರೆಯ ವಿಸ್ತೃತ ಕಟ್ಟಡ ನಿರ್ಮಾಣವೂ ಪೂರ್ಣಗೊಂಡಿದ್ದು, ಜ. 18 ರಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ.
ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ರಜತ ಸಂಭ್ರಮದ ಉದ್ಘಾಟನೆ ಮಾಡಲಿದ್ದಾರೆ. ತುರ್ತು ಚಿಕಿತ್ಸಾ ವಿಭಾಗವನ್ನು ದಕ್ಷಿಣ ಕನ್ನಡ ಸಂಸದ ಬೃಜೇಶ್ ಚೌಟ, ಡೇ-ಕೇರ್ ವಿಭಾಗವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಕ್ಕಳ ವಾರ್ಡ್‌ನ ಉದ್ಘಾಟನೆ ಮಾಡಲಿದ್ದು, ರಾಜ್ಯ ಅರೆ ವೈದ್ಯಕೀಯ ಮಂಡಳಿ ಅಧ್ಯಕ್ಷ ಯು. ಟಿ. ಇಫ್ತಿಕರ್ ಉದ್ಘಾಟಿಸಲಿದ್ದಾರೆ.
ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಾಂಗ್ರೆಸ್ ಮುಖಂಡ, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ, ಉಜಿರೆ ಗ್ರಾ. ಪಂ. ಉಪಾಧ್ಯಕ್ಷ ರವಿಕುಮಾರ್ ಬರಮೇಲು ಉಪಸ್ಥಿತರಿರಲಿದ್ದಾರೆ. ಸೀತಾರಾಮ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜ. 18 ರಂದು ಉಜಿರೆಯ ಬೆನಕ ಆಸತ್ರೆಯ ವಿಸ್ತೃತ ಕಟ್ಟಡ ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಜ. 13 ರಂದು ಕುಕ್ಕೆಸುಬ್ರಹ್ಮಣ್ಯ ದೇಗುಲದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿ, ಸಂಸ್ಥೆಯ ಮುಖ್ಯಸ್ಥ ಗೋಪಾಲಕೃಷ್ಣ ದಂಪತಿ, ಸಿಬ್ಬಂದಿ ವರ್ಗಕ್ಕೆ ಆಶೀರ್ವಾದ ನೀಡಿ, ಶುಭಾಶಯ ತಿಳಿಸಿದರು. ಇದಕ್ಕೂ ಮುನ್ನ ಆಸ್ಪತ್ರೆಯ ವಿಸ್ತೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಸ್ವಾಮೀಜಿಯವರು, ಉಜಿರೆಯಂತಹ ಸಣ್ಣ ಪ್ರದೇಶದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಆರೋಗ್ಯ ಸೇವೆ ನೀಡುವುದು ಸುಲಭದ ಕೆಲಸವಲ್ಲ. ಎಲ್ಲಾ ಸವಾಲುಗಳನ್ನು ಎದುರಿಸಿ, 25 ವರ್ಷಗಳಿಂದ ಈ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಒದಗಿಸಿರುವುದು ನಿಮ್ಮ ಸೇವಾ ಮನೋಭಾವಕ್ಕೆ ಸಾಕ್ಷಿ. ಆಸ್ಪತ್ರೆಯನ್ನು ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಿರುವುದು ನಿಮ್ಮ ಸಾಧನೆಗೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭವಿಷ್ಯದಲ್ಲೂ ಈ ಮಾದರಿಯಲ್ಲೇ ಆಸ್ಪತ್ರೆ ನಡೆಸಿಕೊಂಡು ಜನಸೇವೆ ಮಾಡುತ್ತಾ ಉತ್ತಮ ಆರೋಗ್ಯ ಕಲ್ಪಿಸಲು ಶ್ರೀ ಸುಬ್ರಹ್ಮಣ್ಯ ದೇವರ ಅನುಗ್ರಹ ನಿಮ್ಮೆಲ್ಲರ ಮೇಲೆ ಇರಲಿ ಎಂದು ಸ್ವಾಮೀಜಿ ಆಶೀರ್ವಚನ ನೀಡಿದರು.
ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ವ್ಯವಸ್ಥೆಗಳ ಬಗ್ಗೆ ಶ್ಲಾಘಿಸಿದರು. ಸ್ವಾಮೀಜಿಯವರಿಗೆ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಗೋಪಾಲಕೃಷ್ಣ ಮತ್ತು ಡಾ. ಭಾರತಿ ದಂಪತಿ ಪೂರ್ಣ ಕುಂಭ ಸ್ವಾಗತ ನೀಡಿ ಪಾದಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸೀತಾರಾಮ್ ಭಟ್, ಡಾ. ಆದಿತ್ಯರಾವ್, ಡಾ. ಅಂಕಿತ ಜಿ. ಭಟ್, ಡಾ. ರೋಹಿತ್ ಜಿ. ಭಟ್, ಕುಟುಂಬಸ್ಥರು ಮತ್ತು ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡಿದ್ದರು.