Site icon Suddi Belthangady

ಉಜಿರೆ ಶ್ರೀ ಜನಾರ್ದನ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ ಆರಂಭ – ಪ್ರವಚನ  ಸಪ್ತಾಹ

ಉಜಿರೆ: ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಮಣ ಶುಭದಿನ ಜ. 14 ರಂದು ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಮುಂಜಾನೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ  ನೇತೃತ್ವದಲ್ಲಿ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳ ಮತ್ತು ರಾಮಚಂದ್ರ ಹೊಳ್ಳರು ಪ್ರಾರ್ಥಿಸಿ ಶುಭಾರಂಭಗೊಳಿಸಿದರು. 

ಶಮನ ಕ್ಲಿನಿಕ್ ನ ಚಕ್ರಪಾಣಿ ಸರಳಾಯರ ಪ್ರಾಯೋಜಕತ್ವದಲ್ಲಿ  ನಡೆಸಲ್ಪಡುವ ಉಡುಪಿಯ ಮದ್ವೇಶ ಆಚಾರ್ಯ ಮಠದ  “ಭಾಗವತ ಪಾತ್ರ ಪ್ರಪಂಚ-ನೀತಿ ಕಥೆಗಳು” ಪ್ರವಚನ ಸಪ್ತಾಹಕ್ಕೆ  ಶರತ್ ಕೃಷ್ಣ ಪಡುವೆಟ್ನಾಯರು ದೀಪ ಪ್ರಜ್ವಲಿಸಿ ಚಾಲನೆ ನೀಡಿ ಸ್ವಾಗತಿಸಿ,  ಕ್ಷೇತ್ರದ ವತಿಯಿಂದ ಧಾರ್ಮಿಕ ಜ್ಞಾನ ಪ್ರಸಾರಕ್ಕೆ ವಿಶೇಷ ಆದ್ಯತೆ ನೀಡುತ್ತಾ ಬರುತ್ತಿದ್ದು, ಉತ್ಸವ ಕಾಲದಲ್ಲಿ ಪುರಾಣ ಪ್ರವಚನ ಸಪ್ತಾಹ ನಡೆಸಲು  ಯೋಜಿಸಿದ್ದೇವೆ.

ಭಗವದ್ಭಕ್ತರು  ಜ್ಞಾನ ಸತ್ರದಲ್ಲಿ ಭಾಗವಹಿಸಿ ಪುಣ್ಯಭಾಜನರಾಗಬೇಕೆಂದರು. ಪ್ರವಚನಕಾರ ಮದ್ವೇಶ ಆಚಾರ್ಯ ಮಠ, ಉಜಿರೆ ಕ್ಷೇತ್ರ ಜ್ಞಾನಕ್ಕೆ ಪ್ರಾಧಾನ್ಯತೆ ನೀಡುತ್ತಿದ್ದು, ಹರಿವಾಯು ಪ್ರೇರಣೆಯಂತೆ ಭಾಗವತ ಪಾತ್ರಗಳ ವಿಶೇಷತೆಯನ್ನು ತಿಳಿಸಲು ಬಯಸುತ್ತೇವೆ. ಉಚ್ಚಭೂತಿಯೆಂದರೆ ಹೇರಳ ಸಂಪತ್ತು ಇದ್ದ ಜಾಗ ಎಂದರ್ಥ. ಇಲ್ಲಿ ಘನ ವಿದ್ವಾಂಸರು ನೆಲೆಯಾಗಿದ್ದು ಮಧ್ವಾಚಾರ್ಯರ ಜ್ಞಾನವನ್ನು ಪರೀಕ್ಷಿಸಿ ಅವರಲ್ಲಿ ದೋಷ ಹುಡುಕುವ ಪ್ರಯತ್ನ ಮಾಡಿ ಸೋತರು. ಮಧ್ವಾಚಾರ್ಯರು ತನ್ನ 37 ಗ್ರಂಥಗಳ ಪೈಕಿ  ಇಲ್ಲೇ “ಕರ್ಮ ನಿರ್ಣಯ”ಗ್ರಂಥ  ರಚಿಸಿ ದೇವರಿಗೆ ಸಮರ್ಪಿಸಿದ ಜಾಗ ಉಜೇರ್ಯ ಮುಂದೆ ಉಜಿರೆ ಹೆಸರಿನಿಂದ ಪ್ರಸಿದ್ಧಿ ಪಡೆಯಿತು.

ಉತ್ಸವ ಕಾಲದಲ್ಲಿ ದೇವರು ಸಂತುಷ್ಟನಾಗಿ ಭಕ್ತರನ್ನು ಅನುಗ್ರಹಿಸುವ ಪರ್ವ ಕಾಲ 18 ಸಹಸ್ರ ಸ್ತೋತ್ರಗಳನ್ನೊಳಗೊಂಡ ಭಾಗವತ ಪುರಾಣದ ಪಾತ್ರಗಳನ್ನು ಸಾದರಪಡಿಸಲು ಪ್ರಯತ್ನಿಸಲಾಗುವುದು. ಜ 20 ರವರೆಗೆ ಪ್ರತಿದಿನ ಬೆಳಿಗ್ಗೆ 9.30 ರಿಂದ 12 ರವರೆಗೆ  ಪ್ರವಚನ ನಡೆಯಲಿದೆ ಎಂದರು. ಪ್ರವಚನ ಸತ್ರದ ಪ್ರಾಯೋಜಕ ಶಾರದಾ ಮತ್ತು ಚಕ್ರಪಾಣಿ ಸರಳಾಯ, ದ ಕ. ಜಿಲ್ಲಾ ಕ. ಸಾ. ಪ. ಅಧ್ಯಕ್ಷ ಎಂ. ಪಿ. ಶ್ರೀನಾಥ್, ವಿ. ಪ. ಸದಸ್ಯ ಪ್ರತಾಪಸಿಂಹ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.                                                                                   

ಧರ್ಮಸ್ಥಳದ ಕಮಲಾಕ್ಷ ಗುಡಿಗಾರ್ ಸಾಹಿತ್ಯ ಮತ್ತು ಸಂಗೀತ ನೀಡಿ ಕೇಶವ ದೇವಾಂಗ ಬನಶಂಕರಿ ಹಾಡಿರುವ “ಶ್ರೀ ಲಕ್ಷ್ಮಿ ಜನಾರ್ದನ” ಕನ್ನಡ ಭಕ್ತಿ ಗೀತೆಗಳನ್ನು ಶರತ್ ಕೃಷ್ಣ ಪಡುವೆಟ್ನಾಯರು ಬಿಡುಗಡೆಗೊಳಿಸಿ ಶುಭ ಕೋರಿದರು. ರಾತ್ರಿ ಧ್ವಜಾರೋಹಣ ಹಾಗು ಭಂಡಾರ ಏರುವುದರೊಂದಿಗೆ ವರ್ಷಾವಧಿ ಜಾತ್ರೆಗೆ ಸಂಭ್ರಮದ ಚಾಲನೆ ದೊರೆಯಿತು. ಜ 23 ರವರೆಗೆ  ವಿವಿಧ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಲಿವೆ.

Exit mobile version