ಉಜಿರೆ: ರತ್ನಮಾನಸ ನಿಲಯದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಜ. 14 ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ರಾಜಶೇಖರ ಹಳ್ಳಿ ಮನೆ ದೀಪ ಬೆಳಗಿಸಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಸೂರ್ಯನು ತನ್ನನ್ನು ತಾನು ಅವಲೋಕ ಮಾಡಿಕೊಳ್ಳುವ ಕಾಲವಿದು. ಸೂರ್ಯ ಯಾರಿಗೂ ಮೋಸ ಮಾಡುವುದಿಲ್ಲ. ಎಲ್ಲರಿಗೂ ಒಂದೇ ರೀತಿಯ ಶಾಖವನ್ನು ಕೊಡುತ್ತಾನೆ. ಈ ಕಾರಣಕ್ಕೆ ಜಗತ್ತಿನ ವಿಜ್ಞಾನಿಗಳು ಸೂರ್ಯನಿಗೆ ಕೈ ಮುಗಿಯುತ್ತಾರೆ. ಮನುಷ್ಯನು ಕೂಡ ಈ ಸಮಯದಲ್ಲಿ ಅವಲೋಕನ ಮಾಡಿಕೊಳ್ಳಬೇಕಾದ ಸಂಧರ್ಭ ಇದು.
ಸಂಕ್ರಮಣ ಎಂದರೆ ಬದಲಾವಣೆ ಕಾಲ. ದಕ್ಷಿಣಾಯಣದಿಂದ ಉತ್ತರಾಯಣ ಕಾಲದಲ್ಲಿ ಸೂರ್ಯ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಾನೆ. ಈ ಪ್ರಕಾಶವನ್ನುನೀರು ಹೀರಿಕೊಳ್ಳುತ್ತದೆ . ಆದ್ದರಿಂದ ಈ ದಿನ ಸಮುದ್ರ, ಹೊಳೆಗಳಿಗೆ ತೆರಳಿ ಸ್ನಾನ ಮಾಡಿದರೆ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನದಂದು ಎಳ್ಳಿನ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಿದರೆ ಚರ್ಮರೋಗಗಳು ವಾಸಿಯಾಗುತ್ತದೆ.
ಚರ್ಮದ ಒಣಗುವಿಕೆಯನ್ನು ತಡೆಯಲು ಎಳ್ಳು, ಕಡಲೆ, ಬೆಲ್ಲ, ಸಜ್ಜೆ ಸೇವನೆಯಿಂದ ನಮ್ಮ ದೇಹ ಸದೃಢವಾಗಿರುತ್ತದೆ. ಹಾಗು ಹೆಚ್ಚು ಪ್ರೋಟೀನ್ ದೊರಕುತ್ತದೆ. ಭೀಷ್ಮಚಾರ್ಯರು ತನ್ನ ಪ್ರಾಣತ್ಯಾಗ ಮಾಡಲು ಈ ದಿನಕ್ಕೆಂದೇ ಕಾಯುತ್ತಿದ್ದರು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರತ್ನಮಾನಸದ ನಿಲಯ ಪಾಲಕ ಯತೀಶ್ ಕೆ. ಬಳಂಜ ವಹಿಸಿ, ಎಳ್ಳು ಬೆಲ್ಲ ತಿಂದು ನಾಲ್ಕು ಒಳ್ಳೆಯ ಮಾತಾಡು ಎನ್ನುವ ಗಾದೆ ಮಾತಿನೊಂದಿಗೆ ಸಂಕ್ರಾಂತಿಯ ವಿಶೇಷತೆಯನ್ನು ತಿಳಿಸಿದರು.
ವಿದ್ಯಾರ್ಥಿ ನಿಶಿತ್ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಯಶವಂತ ಸ್ವಾಗತಿಸಿದರು. ಸುಮಂತ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ರತ್ನ ಮಾನಸ ಸಿಬ್ಬಂದಿಗಳಾದ ರವಿಚಂದ್ರ, ಉದಯಾರಾಜ್, ದೀಪಕ್ ಉಪಸ್ಥಿತರಿದ್ದರು. ನಿಶಿತ್ ಧನ್ಯವಾದ ಸಲ್ಲಿಸಿದರು.