Site icon Suddi Belthangady

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ – ರಾಷ್ಟ್ರೀಯ ಯುವ ದಿನ ಆಚರಣೆ

ಬೆಳ್ತಂಗಡಿ: ವಿವೇಕಾನಂದರು ಹುಡುಗಾಟಿಕೆಯ ವಯಸ್ಸಿನಲ್ಲಿ ಇಡೀ ಪ್ರಪಂಚವೇ ತಮ್ಮ ಕಡೆ ತಿರುಗಿ ನೋಡುವಂತೆ ಮಾಡಿದ ವೀರ ಸಂನ್ಯಾಸಿ. ಇಂತಹ ವ್ಯಕ್ತಿ ಬದುಕಿ ಬಾಳಿದಂತಹ ದೇಶದಲ್ಲಿ ನಾವು ವಾಸಿಸುತ್ತಿದ್ದೇವೆ ಎಂದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕು. ಯಾವುದನ್ನು ಪರೀಕ್ಷೀಸದೆ ನೇರವಾಗಿ ಒಪ್ಪಿಕೊಳ್ಳದ ಮನಸ್ಥಿತಿ ವಿವೇಕಾನಂದರದು. ತಮ್ಮ ಜೀವನದ ಮೂಲಕ ಯುವಕರಿಗೆ ದೃಷ್ಠಿಯ ಮಿತಿಯೊಳಗೆ ಹೊಸ ಹೋರಾಟದ ತತ್ವಗಳನ್ನು ಮತ್ತು ಸಮಾಜದ ಮೇಲೆ ಬಲವನ್ನು ತರುವ ಮಾರ್ಗಗಳನ್ನು ತೋರಿಸಿದ್ದರು.

ನಮ್ಮ ದೇಶವು ಯಾವುದೇ ಸಮಸ್ಯೆಗಳನ್ನು ಎದುರಿಸಲು, ಬದಲಾಗಲು ಮತ್ತು ಮುಂದುವರಿಯಲು ಯುವಕ ಸಮಾಜದ ಸಕ್ರೀಯ ಭಾಗವಾಗಬೇಕು. ಈ ದೇಶದಲ್ಲಿರುವ ಪ್ರತಿಯೊಬ್ಬ ಯುವಕರು ಸ್ವಾಮಿ ವಿವೇಕಾನಂದರ ಚಿಂತನೆಯನ್ನು ಮೈಗೂಡಿಸಿಕೊಂಡು ಬಲಿಷ್ಠವಾದ ರಾಷ್ಟ್ರವನ್ನು ನಿರ್ಮಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅಲ್ಲದೆ ಇಡೀ ಜಗತ್ತು ನನ್ನದು ಎಂಬುದನ್ನು ತಿಳಿದುಕೊಳ್ಳಬೇಕು. ತನ್ನ ಅಂತರಂಗದ ಶಕ್ತಿಯಿಂದಲೇ ಎಲ್ಲರಿಂದಲೂ ಪೂಜಿಸಿಕೊಳ್ಳುತ್ತಿರುವ ಸ್ವಾಮಿ ವಿವೇಕಾನಂದರು ಭಾರತದ ಹೆಮ್ಮೆ ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಸಂಪತ್‌ಕುಮಾರ್ ಕಲ್ಲಬೆಟ್ಟುವಿನ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಯುವಕರು ದೇಶ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಸಮಾಜಕ್ಕೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸವನ್ನು ಮಾಡಬೇಕು. ವಿವೇಕಾನಂದರು ದೇಶ ಕಂಡ ಮಹಾನ್ ವ್ಯಕ್ತಿ. ಅವರ ಚಿಂತನೆಗಳು ನಮ್ಮ ಸಮಾಜಕ್ಕೆ ಮಾರ್ಗದರ್ಶಿಗಳಾಗಿವೆ. ಅಂತಹ ಶ್ರೇಷ್ಠ ಪುರುಷನಂತೆ ಪ್ರತಿಯೊಬ್ಬರೂ ದೇಶಾಭಿಮಾನವನ್ನು ಹೊಂದಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯೋಪಾಧ್ಯಾಯಿನಿ ಜಯಶೀಲ ಉಪಸ್ಥಿತರಿದ್ದರು. ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಓಂ ರಾಷ್ಟ್ರೀಯ ಯುವ ದಿನದ ಮಹತ್ವವನ್ನು ವಾಚಿಸಿದರು. ಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿವೇಕಾನಂದರ ಜೀವನ ಕುರಿತಾದ ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

Exit mobile version