Site icon Suddi Belthangady

ನಟೋರಿಯಸ್ ನಕ್ಸಲ್ ಕುತ್ಲೂರಿನ ಸುಂದರಿ ಸಹಿತ 6 ಮಂದಿ ಶರಣಾಗತಿ

ಬೆಳ್ತಂಗಡಿ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲುನಲ್ಲಿ ನ.18ರಂದು ಮಧ್ಯರಾತ್ರಿ ಎನ್‌ಕೌಂಟರ್‌ಗೆ ಬಲಿಯಾಗಿರುವ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ(48ವ)ನ ತಂಡದಲ್ಲಿ ಗುರುತಿಸಿಕೊಂಡಿದ್ದ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರಿನ ಸುಂದರಿ(40ವ) ಸಹಿತ ಆರು ಮಂದಿ ನಕ್ಸಲರು ಶರಣಾಗತಿಯಾಗಿದ್ದಾರೆ.

ನಕ್ಸಲರು ಚಿಕ್ಕಮಗಳೂರು ಜಿಡಳಿತದ ಮೂಲಕ ಜ.೮ರಂದು ಬೆಳಿಗ್ಗೆ ಶರಣಾಗಲು ಸಿದ್ಧತೆ ನಡೆದಿತ್ತು. ಕೊನೇಯ ಕ್ಷಣದಲ್ಲಿ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಚಿಕ್ಕಮಗಳೂರು ಬಾಳೆಹೊನ್ನೂರಿನಿಂದ ಹಾಸನ ಚನ್ನಪಟ್ಟಣ ಹಿರಿಸಾವೆ ಮೂಲಕ ಬೆಂಗಳೂರಿಗೆ ಕರೆದೊಯ್ದು ಸಂಜೆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇರ್ಶ್ವ ಅವರ ಎದುರು ಹಾಜರು ಪಡಿಸಲಾಯಿತು. ಈ ವೇಳೆ ನಕ್ಸಲರು ತಮ್ಮ ನಕ್ಸಲ್ ಸಮವಸ್ತ್ರವನ್ನು ಮುಖ್ಯಮಂತ್ರಿ ಅವರಿಗೆ ಹಸ್ತಾಂತರಿಸಿದರು. ಸಿದ್ದರಾಮಯ್ಯ ಅವರು ಶರಣಾದ ನಕ್ಸಲರಿಗೆ ಸಂವಿಧಾನದ ಪುಸ್ತಕ ನೀಡಿ ಮುಖ್ಯವಾಹಿನಿಗೆ ಬರಮಾಡಿಕೊಂಡರು.

ನಾಡು ಬಿಟ್ಟು ನಕ್ಸಲರೊಂದಿಗೆ ಕಾಡು ಸೇರಿದ್ದಳು: 2002-04ರ ವೇಳೆಗೆ ಕುದುರೆಮುಖ ರಕ್ಷಿತಾರಣ್ಯದಿಂದ ಮಲೆಕುಡಿಯ ನಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ಮತ್ತು ಪಶ್ಚಿಮ ಘಟ್ಟದ ತಪ್ಪಲಿನಿಂದ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ನಡೆದ ನಕ್ಸಲ್ ಚಳವಳಿಯಲ್ಲಿ ಕುತ್ಲೂರು ಗ್ರಾಮದ ಕೋಟ್ಯಂದಡ್ಕದವರಾದ ದಿ.ಬಾಬು ಮತ್ತು ಶ್ರೀಮತಿ ದಂಪತಿಯ ಪುತ್ರ ವಸಂತ ತೊಡಗಿಸಿಕೊಂಡಿದ್ದ. 2007ರಲ್ಲಿ ವಸಂತನ ಅಕ್ಕ ಸುಂದರಿಯೂ ನಾಡು ಬಿಟ್ಟು ನಕ್ಸಲರೊಂದಿಗೆ ಕಾಡು ಸೇರಿದ್ದಳು. ಸುಂದರಿಗೆ ನಾಲ್ಕು ಮಂದಿ ಸೋದರರು ಇದ್ದರು. ಅವರಲ್ಲಿ ವಸಂತ ಕೆಲವೇ ವರ್ಷಗಳಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿದ್ದ. 17 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಭೂಗತಳಾಗಿದ್ದ ಮತ್ತು ನಟೋರಿಯಸ್ ನಕ್ಸಲ್ ಎಂದೇ ಕರೆಸಿಕೊಂಡಿದ್ದ ಸುಂದರಿ ಮನೆಯತ್ತ ಬಂದಿರಲಿಲ್ಲ. ನಕ್ಸಲ್ ಕ್ರಾಂತಿ ನಡೆಸಿದ ಸುಂದರಿ ವಿರುದ್ಧ ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಇದೀಗ ಶರಣಾದ ಸುಂದರಿ ಸಹಿತ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಸುಂದರಿ ಕುಟುಂಬಕ್ಕೆ ಕುತ್ಲೂರಿನಲ್ಲಿ ಗದ್ದೆ, ಅಡಿಕೆ ತೋಟವಿದೆ. ವಸಂತ ಸೇರಿ ಸುಂದರಿಯ ಇಬ್ಬರು ಸಹೋದರರು ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಇನ್ನೋರ್ವ ಸಹೋದರ ಸುರೇಶ್ ಅವರ ಮೂಲ ಮನೆಯಲ್ಲಿದ್ದಾರೆ. ಇನ್ನೊಬ್ಬ ಸಹೋದರ ಹತ್ತಿರದಲ್ಲೇ ಮತ್ತೊಂದು ಮನೆ ಮಾಡಿಕೊಂಡಿದ್ದಾರೆ. ಭೂಗತ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಸುಂದರಿಯ ಪತ್ತೆಗೆ ಪೊಲೀಸ್ ಇಲಾಖೆ ಲುಕೌಟ್ ನೊಟೀಸ್ ಜಾರಿಗೊಳಿಸಿತ್ತು. ಅಲ್ಲದೆ ಸುಂದರಿಯನ್ನು ಸೆರೆ ಹಿಡಿಯಲು ಹರಸಾಹಸ ಪಡುತ್ತಿತ್ತು. ಆಕೆಯ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿತ್ತು. ಇದೀಗ ಸುಂದರಿ ತನ್ನ ಸಹಚರರೊಂದಿಗೆ ಶರಣಾಗಿದ್ದಾಳೆ. ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ರಾಜ್ಯ ಸರಕಾರ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿರುವ ಬೆನ್ನಲ್ಲಿಯೇ ನಟೋರಿಯಸ್ ನಕ್ಸಲ್ ನಾಯಕಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮುಂಡಗಾರು ಲತಾ, ಕುತ್ಲೂರಿನ ಸುಂದರಿ, ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ವನಜಾಕ್ಷಿ ಬಾಳೆಹೊಳೆ, ರಾಯಚೂರಿನ ಮಾರೆಪ್ಪ ಆರೋಲಿ ಅಲಿಯಾಸ್ ಜಯಣ್ಣ, ತಮಿಳುನಾಡಿನ ಕೆ. ವಸಂತ ಹಾಗೂ ಕೇರಳದ ಟಿ.ಎನ್. ಜೀಶ್ ಅವರು ಶರಣಾಗಿದ್ದಾರೆ. ನಕ್ಸಲ್ ಶರಣಾಗತಿ ಸಮಿತಿ ಮತ್ತು ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ನೇತೃತ್ವದಲ್ಲಿ ಶರಣಾಗತಿ ಪ್ರಕ್ರಿಯೆ ನಡೆದಿದೆ.

ಕುತ್ಲೂರಿನ ಸುಂದರಿ: ಕೊಲೆ, ದರೋಡೆ, ಬೆದರಿಕೆ ಸೇರಿದಂತೆ ೬೦ಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ನಕ್ಸಲ್ ನಾಯಕ ಕಬ್ಬಿನಾಲೆಯ ಪೀತಬೈಲುವಿನ ವಿಕ್ರಂ ಗೌಡನನ್ನು ಆತನ ಊರಿನಲ್ಲಿಯೇ ಖಾಕಿ ಪಡೆ ಬಲಿ ಪಡೆದಿರುವ ಬೆನ್ನಲ್ಲಿಯೇ ನಟೋರಿಯಸ್ ನಕ್ಸಲ್ ನಾಯಕಿ ಮುಂಡಗಾರು ಲತಾ ಮತ್ತು ವೇಣೂರು ಕುತ್ಲೂರಿನ ಸುಂದರಿ ನೇತೃತ್ವದ ತಂಡ ದಟ್ಟ ಕಾಡಿನ ಮೂಲಕ ಬೆಳ್ತಂಗಡಿಗೆ ಬಂದಿರುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಯ ಮಾಹಿತಿಯನ್ವಯ ಕೆಲವು ದಿನಗಳ ಹಿಂದೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರು, ನಾರಾವಿ ಮುಂತಾದ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಹೈ ಅಲರ್ಟ್ ಘೋಷಿಸಿತ್ತು. ಪಶ್ಚಿಮ ವಲಯ ಡಿಐಜಿ ಅಮಿತ್ ಸಿಂಗ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಮತ್ತು ಎಎನ್‌ಎಫ್‌ನ ಎಸ್‌ಪಿ ಜಿತೀಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಮತ್ತು ಆಂಟಿ ನಕ್ಸಲ್ ಫೋರ್ಸ್ ಬಿಗಿ ಪಹರೆ ಏರ್ಪಡಿಸಿತ್ತು. ವಿಕ್ರಂ ಗೌಡನ ಎನ್‌ಕೌಂಟರ್ ಬಳಿಕ ಮುಂಡಗಾರು ಲತಾ ನಕ್ಸಲ್ ತಂಡದ ನೇತೃತ್ವ ವಹಿಸಲಿದ್ದಾಳೆ ಎಂದು ಹೇಳಲಾಗುತ್ತಿದಾರೂ ಆಕೆ ಮತ್ತು ತಂಡದವರು ಶರಣಾಗಲು ಸಿದ್ಧತೆ ನಡೆಸಿದ್ದರು. ವಿಕ್ರಂ ಗೌಡನನ್ನು ಎನ್‌ಕೌಂಟರ್‌ನಲ್ಲಿ ಬಲಿ ಪಡೆದ ಬಳಿಕ ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್ ಮತ್ತು ಡಿಐಜಿ ಪ್ರಣಬ್ ಮೊಹಂತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ನೀಡಿದ ಎಚ್ಚರಿಕೆಗೆ ನಕ್ಸಲರು ಬೆದರಿದ್ದರು. ಶರಣಾಗದೇ ಇದ್ದರೆ ಕಾನೂನು ಕ್ರಮ ಜಾರಿಯಾಗುತ್ತದೆ ಎಂದು ಈ ಅಧಿಕಾರಿಗಳ ಖಡಕ್ ಎಚ್ಚರಿಕೆ ಬಳಿಕ ಸೈಲೆಂಟ್ ಆಗಿದ್ದ ಮುಂಡಗಾರು ಲತಾ ಮತ್ತು ಕುತ್ಲೂರಿನ ಸುಂದರಿ ನೇತೃತ್ವದ ನಕ್ಸಲರು ಶರಣಾಗಲು ನಿರ್ಧರಿಸಿದ್ದರು.

ಈ ಹಿಂದೆಯೂ ಹಲವು ನಕ್ಸಲರು ಶರಣಾಗಿದ್ದರು: ನಕ್ಸಲರ ಪೈಕಿ ನಟೋರಿಯಸ್ ಎಂದೇ ಬಣ್ಣಿಸಲ್ಪಡುತ್ತಿದ್ದ ವಿಕ್ರಂಗೌಡ ನೇತೃತ್ವದ ೬ ಮಂದಿ ಶರಣಾಗತಿಗೆ ಒಲವು ತೋರಿದ್ದಾರೆ ಎಂದು ಈ ಹಿಂದೆ ಹೇಳಲಾಗುತ್ತಿತ್ತಾದರೂ ಮತ್ತೆ ಅದೇ ವಿಕ್ರಂ ಗೌಡ ಬಣದ ನಕ್ಸಲರ ಹೆಜ್ಜೆ ಬೆಳ್ತಂಗಡಿ ಮತ್ತು ಕಾರ್ಕಳ ತಾಲೂಕಿನಲ್ಲಿ ಕಂಡು ಬರುತ್ತಿದೆ ಎಂದು ಪೊಲೀಸ್ ಇಲಾಖೆ ಹಾಗೂ ನಕ್ಸಲ್ ನಿಗ್ರಹ ಪಡೆ ಶಂಕೆ ವ್ಯಕ್ತಪಡಿಸಿತ್ತು. ಈ ಹಿಂದೆ ಸರಕಾರ ಬಿಡುಗಡೆ ಮಾಡಿದ ನಕ್ಸಲರ ಪತ್ತೆಯ ಸೂಚನಾ ಫಲಕದಲ್ಲಿ 22 ಮಂದಿಯ ಭಾವಚಿತ್ರಗಳಿದ್ದವು. ಅದರಲ್ಲಿ ಕೆಲವರು ಎನ್‌ಕೌಂಟರ್‌ಗೆ ಬಲಿಯಾಗಿದ್ದರೆ ಇನ್ನು ಕೆಲವರು ಶರಣಾಗಿದ್ದರು. ಕೇರಳ, ಝಾರ್ಖಂಡ್ ಮತ್ತು ಛತ್ತೀಸ್‌ಘಡದಲ್ಲಿ ಸರಕಾರಗಳು ನಕ್ಸಲರನ್ನು ನಿಗ್ರಹಿಸಲು ಭಾರೀ ಕಾರ್ಯಾಚರಣೆ ನಡೆಸುತ್ತಿರುವುದು ಹಾಗೂ ಕೇರಳದಲ್ಲಿ ನಕ್ಸಲ್ ಗುಂಪಿನ ಆಂತರಿಕ ಭಿನ್ನಾಭಿಪ್ರಾಯ, ನಾಗರಿಕರಿಂದ ಬೆಂಬಲ ಕುಸಿತ ಮುಂತಾದ ಕಾರಣದಿಂದ ಶರಣಾಗತಿಗೆ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ವಿಕ್ರಂ ಗೌಡ ಬಣದ ನಕ್ಸಲರು ಮತ್ತೆ ಆಕ್ಟಿವ್ ಆಗಿದ್ದಾರೆ ಎಂಬ ಸಂಶಯದಲ್ಲಿ ಕಾರ್ಯಾಚರಣೆ ಮುಂದುವರಿದಿತ್ತು. ರಾಜ್ಯದಲ್ಲಿ ಈವರೆಗೆ 14 ಮಂದಿ ನಕ್ಸಲರು ಶರಣಾಗಿದ್ದಾರೆ. ಅಂಥವರಿಗೆ ಸರಕಾರ ಪ್ಯಾಕೇಜ್ ಘೋಷಿಸಿದೆ. 2010ರಲ್ಲಿ ವೆಂಕಟೇಶ್, ಜಯಾ, ಸರೋಜಾ, ಮಲ್ಲಿಕಾ, 2014ರಲ್ಲಿ ಸಿರಿಮನೆ ನಾಗರಾಜ್, ನೂರ್ ಜಲ್ಪಿಕರ್, 2016ರಲ್ಲಿ ಭಾರತಿ, ಫಾತಿಮಾ, ಪದ್ಮನಾಭ್, ಪರಶುರಾಮ್, ೨೦೧೭ರಲ್ಲಿ ಕನ್ಯಾಕುಮಾರಿ, ಶಿವು, ಚೆನ್ನಮ್ಮ ಅವರು ಜಿಲ್ಲಾಡಳಿತದ ಮೂಲಕ ಶರಣಾಗಿದ್ದರು. ಮಲೆನಾಡು, ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂಚೂಣಿಯಲ್ಲಿದ್ದ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧನದ ಬಳಿಕ ಮಲೆನಾಡಿನಲ್ಲಿ ನಕ್ಸಲ್ ನೆಲೆಗೆ ಕಡಿವಾಣ ಬಿದ್ದಿತ್ತು. ಎನ್‌ಕೌಂಟರ್‌ಗೆ ಬಲಿಯಾಗಿದ್ದ ಹಾಜಿಮಾ, ಪಾರ್ವತಿ, ಸಾಕೇತ್‌ರಾಜನ್, ವಸಂತ ಗೌಡ ಸಾಲಿಗೆ ಸೇರಿದ ವಿಕ್ರಂ ಗೌಡನೂ ಸೇರಿದ ಬಳಿಕ ಆತನ ಸಹಚರರೂ ಶರಣಾಗಲು ಸಿದ್ಧವಾಗಿದ್ದರು.

ದಶಕಗಳ ಕಾಲ ನಕ್ಸಲ್ ತಂಡ ಮುನ್ನಡೆಸಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿರುವ ವಿಕ್ರಂ ಗೌಡ ಕ್ರಾಂತಿಕಾರಿ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆ ಕಳಸದ ಸಾವಿತ್ರಿ ಎಂಬಾಕೆಯನ್ನು ೨೦ ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದ. ಇವರು ಹಲವು ವರ್ಷಗಳ ಕಾಲ ನಕ್ಸಲ್ ಚಟುವಟಿಕೆಯಲ್ಲಿ ಒಟ್ಟಿಗೆ ತೊಡಗಿಸಿಕೊಂಡಿದ್ದರು. ನಂತರ ಸಾವಿತ್ರಿ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿ ನೇತೃತ್ವದ ಕಬಿನಿ ದಳಂ-೧ ಸೇರಿಕೊಂಡಿದ್ದಳು. ಇತ್ತೀಚೆಗೆ ಕೇರಳದ ವೈನಾಡು-ಕೋಝಿಕೋಡು ವಲಯದಲ್ಲಿ ಪೊಲೀಸ್ ಕಾರ್ಯಾಚರಣೆ ವೇಳೆ ಬಿ.ಜಿ. ಕೃಷ್ಣಮೂರ್ತಿಯೊಂದಿಗೆ ಸಿಕ್ಕಿಬಿದ್ದಳು. ಇದೀಗ ಸಾವಿತ್ರಿ ಮತ್ತು ಬಿ.ಜಿ. ಕೃಷ್ಣಮೂರ್ತಿ ಇಬ್ಬರೂ ಕೇರಳದ ಜೈಲಿನಲ್ಲಿದ್ದಾರೆ. ಕೇರಳ ಪೊಲೀಸರಿಂದ ಬಂಧಿತಳಾಗಿ ತೃಶೂರು ಜೈಲಿನಲ್ಲಿರುವ ನಕ್ಸಲ್ ಸಾವಿತ್ರಿಯನ್ನು ವೇಣೂರು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆಯಲು ಪೊಲೀಸರು ಮಾಡಿದ್ದ ಮನವಿಯನ್ನು ಪರಿಶೀಲನೆ ನಡೆಸಲು ಬೆಳ್ತಂಗಡಿ ನ್ಯಾಯಾಲಯಕ್ಕೆ ಹೈಕೋರ್ಟ್ ಇತ್ತೀಚೆಗೆ ಸೂಚನೆ ನೀಡಿತ್ತು.

ಕುತ್ಲೂರಿನ ಸುಂದರಿ, ಮುಂಡಗಾರು ಲತಾ ಪೊಲೀಸರ ಹಿಟ್‌ಲಿಸ್ಟ್‌ನಲ್ಲಿ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮುಂಡಗಾರುವಿನ ಲತಾ ಮತ್ತು ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರಿನ ಸುಂದರಿ ಹೆಸರು ಪೊಲೀಸರ ಹಿಟ್‌ಲಿಸ್ಟ್‌ನಲ್ಲಿದೆ. ೨೦೨೧ರಲ್ಲಿ ಬಿ.ಜಿ. ಕೃಷ್ಣಮೂರ್ತಿ ಹಾಗೂ ಪ್ರಭಾಳನ್ನು ಬಂಧಿಸಿದ ಬಳಿಕ ಮುಂಚೂಣಿಗೆ ಬಂದಿರುವ ಹೆಸರು ಮುಂಡಗಾರುನ ಲತಾ. ಕೊಪ್ಪ ತಾಲೂಕಿನ ಬುಕ್ಕಡಿ ಬೈಲಿನ ಮುಂಡಗಾರು ಲತಾಳನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಲೋಕಮ್ಮ ಅಲಿಯಾಸ್ ಶ್ಯಾಮಲ ಹೆಸರಿನಲ್ಲಿ ಮಲೆನಾಡಿನ ಭಾಗಗಳಲ್ಲಿ ಲತಾ ಗುರುತಿಸಿಕೊಂಡಿದ್ದಳು. ಪೊಲೀಸರು ರಿಲೀಸ್ ಮಾಡಿರುವ ಮೋಸ್ಟ್ ವಾಂಟೆಂಡ್ ಲಿಸ್ಟ್‌ನಲ್ಲಿ ಲತಾ ಕೂಡ ಒಬ್ಬಳು. ಇವಳ ಜಾಡು ಪತ್ತೆ ಮಾಡಿಕೊಟ್ಟವರಿಗೆ ಸರ್ಕಾರ ಐದು ಲಕ್ಷ ಬಹುಮಾನ ಘೋಷಿಸಿತ್ತು. ಲತಾ ಮಲೆನಾಡಿನಲ್ಲಿ ಬಂದೂಕು ಹೆಗಲಿಗೇರಿಸಿಕೊಂಡು ಕ್ರಾಂತಿಯ ಹಾದಿ ಹಿಡಿದಾಗ ಜನರು ಬೆಚ್ಚಿ ಬಿದ್ದಿದ್ದರು. ಪೊಲೀಸರು ಲತಾ ಬಗ್ಗೆ ಮೋಸ್ಟ್ ವಾಂಟೆಡ್ ಕರಪತ್ರ ಬಹಿರಂಗಗೊಳಿಸಿದ್ದರು. ಅಲ್ಲಿಂದ ಇಲ್ಲಿವರೆಗೂ ಭೂಗತವಾಗಿದ್ದ ಲತಾ ಈ ಹಿಂದೆ ಬಿ.ಜಿ.ಕೆ. ತಂಡದಲ್ಲಿ ಗುರುತಿಸಿಕೊಂಡಿದ್ದಳು. ಕಳೆದ ವರ್ಷ ಡಿಸೆಂಬರ್ ವೇಳೆಗೆ ಕೇರಳದ ಗಡಿಭಾಗದಲ್ಲಿ ನಕ್ಸಲರು ಅಡಗಿದ ತಂಗುದಾಣದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ಕ್ಯಾಂಪ್‌ನಲ್ಲಿ ಮುಂಡಗಾರು ಲತಾ ಕೂಡ ಇದ್ದಳು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಮುಂಡಗಾರು ಲತಾ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು. ಲತಾ ಸತ್ತಿದ್ದಾಳೆ ಎನ್ನುವ ಬ್ಯಾನರ್ ಹಾಕಲಾಗಿತ್ತು. ಆದರೆ ಫೈರಿಂಗ್ ಸಂದರ್ಭದಲ್ಲಿ ಮುಂಡಗಾರು ಲತಾ ತಪ್ಪಿಸಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಆಕೆ ಅಲ್ಲಿಂದ ತಪ್ಪಿಸಿಕೊಂಡು ಮಂಗಳೂರು ಕಡೆಗೆ ಹೊರಟಿದ್ದ ರೈಲು ಹತ್ತಿದ್ದಳು. ಹೀಗೆ ಮಂಗಳೂರು ರೈಲು ಹತ್ತಿದ್ದ ಲತಾ ನಂತರದಲ್ಲಿ ಎಲ್ಲಿಗೆ ಹೋದಳು ಎನ್ನುವ ಬಗ್ಗೆ ನಕ್ಸಲ್ ನಿಗ್ರಹ ಪಡೆ ತಂಡದವರಿಗಾಗಲಿ ಅಥವಾ ಪೊಲೀಸರಿಗಾಗಲಿ ಇಲ್ಲಿವರೆಗೆ ಯಾವುದೇ ಮಾಹಿತಿ ಇರಲಿಲ್ಲ. ನಕ್ಸಲ್ ನಾಯಕಿ ಮುಂಡಗಾರು ಲತಾ ಕೆಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಬಂದು ಹೋಗಿದ್ದು ಅಪರಿಚಿತರ ಮನೆಗಲ್ಲ. ಅವರ ಅತ್ತೆ ಮನೆಗೆ ಎಂದು ಪೊಲೀಸ್ ಇಲಾಖೆ ಮತ್ತು ನಕ್ಸಲ್ ನಿಗ್ರಹ ಪಡೆ ಮಾಹಿತಿ ಕಲೆ ಹಾಕಿತ್ತು. ಕಸ್ತೂರಿ ರಂಗನ್ ವಿರುದ್ಧ ಲತಾ ಗುಪ್ತ ಸಭೆ ನಡೆಸಿದ್ದಳು ಎಂದು ಇಲಾಖೆ ಮಾಹಿತಿ ಸಂಗ್ರಹಿಸಿತ್ತು.

ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರಿನ ಸುಂದರಿ ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದವಳು. ಬಡ ಕುಟುಂಬದ ಸುಂದರಿ ತನ್ನ ಹೋರಾಟದ ಮೂಲಕ ನಕ್ಸಲ್ ನಾಯಕರ ಸಂಪರ್ಕ ಪಡೆದು ಭೂಗತಳಾಗಿದ್ದಳು. ಆ ನಂತರ ನಕ್ಸಲ್ ಚುಟುವಟಿಕೆಯಲ್ಲಿ ಸಕ್ರಿಯವಾಗಿದ್ದಳು. ಅವಳ ಪತ್ತೆಗೆ ಪೊಲೀಸ್ ಇಲಾಖೆ ಲುಕೌಟ್ ನೊಟೀಸ್ ಜಾರಿಗೊಳಿಸಿತ್ತು. ಅಲ್ಲದೆ ಸುಂದರಿಯನ್ನು ಸೆರೆ ಹಿಡಿಯಲು ಹರಸಾಹಸ ಪಡುತ್ತಿತ್ತು.

ಸುದ್ದಿಯೊಂದಿಗೆ ಅಭಿಪ್ರಾಯ ಹಂಚಿಕೊಂಡ ಕುತ್ಲೂರಿನ ಸುಂದರಿಯ ಸಹೋದರ ಸುರೇಶ್ ಮತ್ತು ಅತ್ತಿಗೆ ಸವಿತಾ: ಕುತ್ಲೂರಿನ ಸುಂದರಿ ಅವರ ಸಹೋದರ ಸುರೇಶ್ ಹಾಗೂ ಅವರ ಅತ್ತಿಗೆ ಸವಿತಾ ಅವರ ಜೊತೆ ಸುದ್ದಿ ನ್ಯೂಸ್ ಸಂದರ್ಶನ ಮಾಡಿದೆ. ಅದರ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ. ಸುಂದರಿಯ ಸಹೋದರ ಸುರೇಶ್ ಅವರು ಸುಂದರಿ ನನಗೆ ಅಕ್ಕ, ಅವರು 2007ರಲ್ಲಿ ಮನೆ ಬಿಟ್ಟು ಹೋಗಿದ್ದರು. ಆಗ ಪ್ರಜಾಸತ್ತಾತ್ಮಕ ಹೋರಾಟ ಆಗುತ್ತಿತ್ತು. ನಾವೆಲ್ಲ ಕುತ್ಲೂರಿನಲ್ಲಿ ಒಗ್ಗೂಡಿ ಇಲ್ಲಿ ಮೊದಲು ರಾಷ್ಟ್ರೀಯ ಉದ್ಯಾನವನ ಅಂತ ಮಾಡಿದ್ದರು. ಆ ನಂತರ ನಮಗೆ ನೋಟಿಸ್ ಬಂತು. ನೀವು ಒಕ್ಕಲು ಎದ್ದು ಹೋಗಬೇಕು ಎಂದು ನೋಟಿಸ್ ನೀಡಿದ್ದರು. ಆಗ ನಾವು ಕುತ್ಲೂರು ಯುವ ಜನತೆ ಎಲ್ಲಾ ಟೀಂ ವರ್ಕ್ ಮಾಡಿ ನಾವು ಒಕ್ಕಲು ಎದ್ದು ಹೋಗಲ್ಲ ಎಂದು ಹೋರಾಟ ಮಾಡಿದ್ದೆವು. ಆಗ ಪ್ರತಿಭಟನೆ ಮಾಡಿದವರ ಮೆಲೆ ಕೇಸು ಹಾಕಲು ಶುರು ಮಾಡಿದರು. ಆಗ ಆನಂದ್, ವಸಂತ್, ಸುಂದರಿ ಅವರೆಲ್ಲಾ ಭೂಗತರಾಗಿ ಹೋಗಲು ಮೂಲ ಕಾರಣ ಆಯ್ತು. ಆ ನಂತರ ಯಾವತ್ತೂ ಭೇಟಿ ಆಗಿಲ್ಲ. ನಾನು ಕೆಲಸಕ್ಕೆ ಹೋಗುತ್ತಿದ್ದೆ. ಮನೆಯಲ್ಲಿ ಅಪ್ಪ ಅಮ್ಮ ಮಾತ್ರ ಇದ್ದರು. ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಕಿರುಕುಳ ಜಾಸ್ತಿ ಇತ್ತು. ಹಾಗಾಗಿ ನಾನು ಹೊರಗಡೆ ಹೋಗಿದ್ದೆ. ನಮಗೆ ಯಾರೂ ಸಪೋರ್ಟ್ ಕೊಡುವವರು ಇರಲಿಲ್ಲ ಎಂದು ತಿಳಿಸಿದ್ದಾರೆ. 2010ರಲ್ಲಿ ನನ್ನ ಸಹೋದರ ವಸಂತನ ಎನ್‌ಕೌಂಟರ್ ಆಯ್ತು. ಆಗ ನಾನು ಇಲ್ಲಿರಲಿಲ್ಲ. ನಂತರ ಬಂದು ಇದೇ ಮನೆಯಲ್ಲಿ ಅಂತ್ಯಕ್ರಿಯೆ ಮಾಡಿದ್ದೆವು. ಆ ನಂತರವೇ ನಕ್ಸಲ್ ಕಿರುಕುಳ ಜಾಸ್ತಿ ಆಗ್ತಾ ಹೋಯಿತು. ಇನ್ನು ಸ್ಥಳೀಯ ಯುವ ಜನರ ಮೇಲೆ ಕೇಸ್ ಮೇಲೆ ಕೇಸ್ ಹಾಕಿ ಚಿತ್ರ ಹಿಂಸೆ ಕೊಟ್ಟರು. ಅರೆಸ್ಟ್ ಮಾಡಿದರು. ವಿಠ್ಠಲ್ ಅರೆಸ್ಟ್ ಆದ ನಂತರ ನಮಗೆ ಸ್ವಲ್ಪ ಬಿಡುವು ಆಯ್ತು. ಹೊರಗಿನವರ ಸಪೋರ್ಟ್ ನಮಗೆ ಬಂತು. ಆ ನಂತರವೇ ರಿಲೀಫ್ ಸಿಕ್ತು ಎಂದು ಹೇಳಿದ ಸುರೇಶ್ ಅವರು ಚಿಕ್ಕಮಗಳೂರು, ಮಡಿಕೇರಿ ಭಾಗದಲ್ಲಿ ನಕ್ಸಲರ ಸದ್ದಾದಾಗ ಇಲ್ಲಿ ಪೊಲೀಸರು ಬಂದು ಇಲ್ಲಿ ತನಿಖೆಯನ್ನು ಕೈಗೊಳ್ಳುತ್ತಾರೆ. ಬಂದು ವಿಚಾರಣೆ ಮಾಡುತ್ತಾರೆ, ಈಗ ಅವರು ಫ್ರೆಂಡ್ಲಿಯಾಗಿ ಮಾತನಾಡಿ ಹೋಗುತ್ತಾರೆ. ಸುಂದರಿ ಅವರು ಓದಿದ್ದು ನಾಲ್ಕನೇ ಕ್ಲಾಸ್. ಅರಣ್ಯ ಇಲಾಖೆ ಕಿರುಕುಳ ಜಾಸ್ತಿ ಆದಾಗ, ಅವರನ್ನು ಪ್ರಶ್ನೆ ಮಾಡಿದವರ ಮೇಲೆ ಕೇಸ್ ಹಾಕಲು ಶುರುವಾಯ್ತು. ಒಬ್ಬೊಬ್ಬರೇ ಸಿಕ್ಕಿದಾಗ ಎಲ್ಲಿ ಹೋದರೂ ಕೂಡ ಬಿಡದೆ ಅವರನ್ನು ಟಾರ್ಗೆಟ್ ಮಾಡಿ ಅವರನ್ನು ಅರೆಸ್ಟ್ ಮಾಡಲು ಶುರು ಮಾಡಿದ್ದರು. ಆವಾಗ ವಸಂತ್ ಮೊದಲೇ ಭೂಗತರಾಗಿದ್ದರು.
ನಮಗೆ ಕಿರುಕುಳ ಹಾಗೇ ಇತ್ತು. ಅದೇ ಸಮಯದಲ್ಲಿ ಸುಂದರಿ ಅವರು ಹೋದರು. ಆ ನಂತರ ನಮಗೆ ಸುಂದರಿ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಇತ್ತೀಚೆಗೆ ನಕ್ಸಲ್ ಶರಣಾಗತಿ ಸಮಿತಿಯವರು ಬಂದು ನಮ್ಮಲ್ಲಿ ಮಾತನಾಡಿದ್ದಾರೆ. ನಮಗೆ ಅವಕಾಶ ಸಿಕ್ಕರೆ ಖಂಡಿತಾ ಸರೆಂಡರ್ ಮಾಡಿಸುವ ಅಂತ ಇತ್ತು ಎಂದು ಹೇಳಿದ್ದಾರೆ.

ಅವರು ಶರಣಾಗತಿ ಆದರೆ ಅದು ತುಂಬಾ ಒಳ್ಳೆಯ ಸುದ್ದಿ. ಸಂತಸ ಕೊಡುವ ಸುದ್ದಿ. ಆಗಿನ ವ್ಯವಸ್ಥೆಗೂ ಈಗಿನ ವ್ಯವಸ್ಥೆಗೂ ಹೋಲಿಸಿದಾಗ ಇದೇ ಸೂಕ್ತ ಎಂದು ಕಾಣುತ್ತದೆ. ಸುಂದರಿ ಅವರು ಖಂಡಿತಾ ಇಲ್ಲೇ ಇರಬಹುದು. ನಮ್ಮ ಜೊತೆನೇ ಇರಬಹುದು. ಯಾವ ಸಮಸ್ಯೆಯೂ ಇಲ್ಲ. ಅಕ್ಕನನ್ನು 17 ವರ್ಷದಿಂದ ತುಂಬಾ ಮಿಸ್ ಮಾಡಿಕೊಂಡಿದ್ದೇವೆ. ಅದೇ ರೀತಿ ತಮ್ಮ ಕೂಡ ಜೊತೆಯಲ್ಲಿಲ್ಲ. ಅವರು ವೈಯುಕ್ತಿಕವಾಗಿ ಏನೂ ಮಾಡಿಲ್ಲ. ಆವಾಗಿನ ಪರಿಸ್ಥಿತಿ ಹಾಗಿತ್ತು ಎಂದು ಸುರೇಶ್ ಹೇಳಿದ್ದಾರೆ.

ಆದಷ್ಟು ಬೇಗ ಶರಣಾಗಲಿ: ಸುರೇಶ್ ಅವರ ಪತ್ನಿ ಸವಿತಾ ಅವರು ಮಾತನಾಡಿ ಆದಷ್ಟು ಬೇಗ ಶರಣಾಗಲಿ ಅಂತ ಹೇಳುತ್ತೇವೆ. ಹೊರಗಡೆ ನಿಂತು ಹೋರಾಟ ಮಾಡುವುದಕ್ಕಿಂತ ಇಲ್ಲೇ ಬಂದು ನಮ್ಮ ಜೊತೆ ಸೇರಿ ಹೋರಾಟ ಮಾಡಿದರೆ ಚೆನ್ನಾಗಿರುತ್ತದೆ. ಅವರು ಶರಣಾಗತಿ ಆಗಿ ಮನೆಗೆ ಬಂದರೆ ಆತಂಕ ಏನೂ ಇಲ್ಲ, ನಮಗೆ ಖುಷಿ. ಆದಷ್ಟು ಬೇಗ ಅವರು ಬರಲಿ. ಅವರು ಇಲ್ಲಿ ಬಂದ ನಂತರ ಅವರನ್ನು ಮತ್ತೆ ಪ್ರಶ್ನೆ ಮಾಡಲು ಬರುತ್ತಾರೆ ಅನ್ನುವ ಆತಂಕ ಇದೆ. ಕಾಡಿನಿಂದ ಮನೆಗೆ ಬಂದ ನಂತರ ಮತ್ತೆ ಅವರಿಗೆ ಕಿರುಕುಳ ಕೊಡಬಹುದು ಅಂತ ಆಗುತ್ತೆ, ಇಲ್ಲಿಂದ ಹೋಗಿ ಅನ್ನುವ ಮಾತು ಬರಬಹುದು ಅನ್ನುವ ಭಯ ಇದೆ. ಪೊಲೀಸ್‌ನವರು ಬರುತ್ತಾರೆ ಅನ್ನುವ ಭಯ ಇತ್ತು. ಪ್ರತಿ ದಿನ ಭಯ ಪಡ್ಕೊಂಡೇ ಇದ್ದೀವಿ ನಾವು. ಅದಕ್ಕೆ ಅವರು ಆದಷ್ಟು ಬೇಗ ಶರಣಾಗಲಿ ಅಂತ ನಾವು ಹೇಳುವುದು ಎಂದು ಹೇಳಿದ್ದಾರೆ.

Exit mobile version