Site icon Suddi Belthangady

ಹವಾ ಎಬ್ಬಿಸಿದ ಸೆಕ್ಯುರಿಟಿ, ಹುಬ್ಬೇರಿಸಿದ ಜನ! – ಝಡ್+ ಸೆಕ್ಯುರಿಟಿಯಲ್ಲಿ ಬಂದ ಉಪರಾಷ್ಟ್ರಪತಿ – 28ಕ್ಕೂ ಅಧಿಕ ಕೇಂದ್ರದ ಅಧಿಕಾರಿಗಳು – 320ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ಸೆಕ್ಯುರಿಟಿ

ದಾಮೋದರ್ ದೊಂಡೋಲೆ
ಧರ್ಮಸ್ಥಳ: ಆಕಾಶ ಖಾಲಿ ಖಾಲಿ.. ರಸ್ತೆಯೂ ಖಾಲಿ ಖಾಲಿ.. ಜ.7ರ ಮಧ್ಯಾಹ್ನ ಧರ್ಮಸ್ಥಳ ಸಂಪೂರ್ಣ ಹೈ ಅಲರ್ಟ್. ಪ್ರತಿಯೊಬ್ಬರ ಪ್ರತಿ ಹೆಜ್ಜೆಯನ್ನೂ ಗಮನಿಸಲಾಗುತ್ತಿತ್ತು.. ಇದ್ದಕ್ಕಿದ್ದಂತೆ ಮಧ್ಯಾಹ್ನ ೧.೩೦ಕ್ಕೆ ಆಕಾಶದಲ್ಲಿ ಹೆಲಿಕಾಪ್ಟರ್‌ಗಳ ಸದ್ದು ಆರಂಭ. ಆ ಭದ್ರತಾ ವ್ಯವಸ್ಥೆ, ಸಿಬ್ಬಂದಿ, ಸಾಲುಸಾಲು ಬೆಂಗಾವಲು ವಾಹನಗಳನ್ನು ಕಂಡು ಜನ ಅಚ್ಚರಿಪಟ್ಟರು.

ಝಡ್+ ಸೆಕ್ಯುರಿಟಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಆಗಮನವಾಗುತ್ತಿದ್ದಂತೆ ೩ ಸೇನಾ ಹೆಲಿಕಾಪ್ಟರ್ ಗಳು ಲ್ಯಾಂಡ್ ಆದವು. ಒಂದರಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಮತ್ತೊಂದರಲ್ಲಿ ಪತ್ನಿ ಸುದೇಶ್ ಧನ್‌ಕರ್ ಹಾಗೂ ಮಂಗಳೂರಿನಲ್ಲಿ ಅವರನ್ನು ಕೂಡಿಕೊಂಡಿದ್ದ ಸಂಸದ ಬ್ರಿಜೇಶ್ ಚೌಟ ಜೊತೆಯಲ್ಲಿದ್ದರು. ಮತ್ತೆರಡು ಹೆಲಿಕಾಪ್ಟರ್‌ಗಳಲ್ಲಿ ಝಡ್+ ಶ್ರೇಣಿಯ ಸೆಕ್ಯುರಿಟಿ ಅಧಿಕಾರಿಗಳು, ವಿಶೇಷ ವೈದ್ಯರು, ಆಪ್ತ ಸಹಾಯಕರು, ಸಲಹೆಗಾರರು ಬಂದಿದ್ದರು. ಹೀಗೆ ಧರ್ಮಸ್ಥಳದಲ್ಲಿ ನೆಲಸ್ಪರ್ಶಿಸಿದ ಮೂರು ಹೆಲಿಕಾಪ್ಟರ್ ಗಳು ಭಾರೀ ಹವಾ ಎಬ್ಬಿಸಿದವು.

ಪ್ರತಿ ಹೆಜ್ಜೆಯಲ್ಲೂ ಟೈಟ್ ಸೆಕ್ಯುರಿಟಿ: ಧರ್ಮಸ್ಥಳದಲ್ಲಿ ಒಂದೆಡೆ ಎನ್‌ಎಸ್‌ಜಿ (ನ್ಯಾಷನಲ್ ಸೆಕುರಿಟಿ ಗಾರ್ಡ್) ಸಿಬ್ಬಂದಿ, ಮತ್ತೊಂದೆಡೆ ಪೊಲೀಸರ ಸರ್ಪಗಾವಲು. ಉಪರಾಷ್ಟ್ರಪತಿ ಸಾಗುವ ಹಾದಿಯುದ್ದಕ್ಕೂ ಭದ್ರತಾ ಅಧಿಕಾರಿಗಳು ಸುತ್ತುವರಿದಿದ್ದರು.

320ಕ್ಕೂ ಅಧಿಕ ಪೊಲೀಸ್: ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕ ಎನ್ ಯತೀಶ್ ಹಾಗೂ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ.ಎಸ್ ನೇತೃತ್ವದಲ್ಲಿ ಧರ್ಮಸ್ಥಳದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಒಟ್ಟು ೩೨೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಧರ್ಮಸ್ಥಳದಲ್ಲಿ ಭದ್ರತಾ ವ್ಯವಸ್ಥೆಗೆ ಬಂಟ್ವಾಳ ಉಪವಿಭಾಗ, ಪುತ್ತೂರು ಉಪವಿಭಾಗ, ಚಿಕ್ಕಮಗಳೂರು ಜಿಲ್ಲೆ, ಉಡುಪಿ ಜಿಲ್ಲೆ, ಉತ್ತರಕನ್ನಡ ಜಿಲ್ಲೆಯ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಬಂಟ್ವಾಳ, ಪುತ್ತೂರು, ಉಡುಪಿಯ ಮೂವರು ಡಿವೈಎಸ್‌ಪಿ, ಬಂಟ್ವಾಳದಿಂದ 4, ಉತ್ತರ ಕನ್ನಡದಿಂದ 5, ಉಡುಪಿ 3, ಪುತ್ತೂರಿನಿಂದ 1 ಸರ್ಕಲ್ ಇನ್ಸ್ ಪೆಕ್ಟರ್‌ಗಳನ್ನು ನಿಯೋಜಿಸಲಾಗಿತ್ತು. ಭದ್ರತೆಗಾಗಿ 21 ಪಿಎಸ್‌ಐ, 44 ಎಎಸ್‌ಐ, 195 ಕಾನ್‌ಸ್ಟೇಬಲ್, 39 ಮಹಿಳಾ ಕಾನ್‌ಸ್ಟೇಬಲ್, ೫ ಹೋಮ್ ಗಾರ್ಡ್ ಸಿಬ್ಬಂದಿ ಬಂದಿದ್ದರು. ಇದರಲ್ಲಿ ಬಂಟ್ವಾಳ ಉಪವಿಭಾಗದಿಂದ 118, ಪುತ್ತೂರು 76, ಚಿಕ್ಕಮಗಳೂರು 28, ಉಡುಪಿ 46, ಉತ್ತರ ಕನ್ನಡದಿಂದ 52 ಮಂದಿ ಬಂದಿದ್ದರು.

11 ಸೆಕ್ಟರ್ ಗಳಾಗಿ ವಿಭಜನೆ: 320ಕ್ಕೂ ಪೊಲೀಸ್ ಅಧಿಕಾರಿಗಳನ್ನು ಭದ್ರತೆಗಾಗಿ 11 ಸೆಕ್ಟರ್ ಗಳಾಗಿ ವಿಭಜಿಸಲಾಗಿತ್ತು. ಇದರಲ್ಲಿ ಧರ್ಮಸ್ಥಳ ಹೆಲಿಪ್ಯಾಡನ್ನು ಸೆಕ್ಟರ್ 1 ಎಂದು ಪರಿಗಣಿಸಿ ಅಲ್ಲಿಗೆ ಪುತ್ತೂರು ಡಿವೈಎಸ್‌ಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಯೂ ವಿಐಪಿ ಸ್ವಾಗತ ಮಾಡುವ ಸ್ಥಳ, ಹೆಲಿಪ್ಯಾಡ್ ಮೈದಾನದ ಸುತ್ತಲಿನ ಭದ್ರತೆ ಮತ್ತು ಹೆಲಿಪ್ಯಾಡ್ ಗೇಟ್ ಎಂದು ಮೂರು ವಿಭಾಗಗಳನ್ನಾಗಿ ಮಾಡಿ ವರ್ಗೀಕರಿಸಲಾಗಿತ್ತು. ಹೆಲಿಪ್ಯಾಡ್ ಸುತ್ತಲಿನ ಭದ್ರತೆಗಾಗಿ 19 ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿತ್ತು.

ಹೆಲಿಪ್ಯಾಡ್ ಟು ಕ್ಲಾಕ್ ಟವರ್ ಸೆಕ್ಟರ್ 2: ಉಪರಾಷ್ಟ್ರಪತಿ ಹೆಲಿಪ್ಯಾಡ್‌ನಲ್ಲಿ ಇಳಿದ ನಂತರ ದೇವಸ್ಥಾನದ ಮುಂಭಾಗದಲ್ಲಿರುವ ಗಡಿಯಾರದ ಟವರ್‌ವರೆಗೆ ಸಂಚರಿಸುವ ತನಕದ ಭದ್ರತಾ ವ್ಯವಸ್ಥೆಗೆ ಸೆಕ್ಟರ್-2 ಎಂದು ಗುರುತಿಸಲಾಗಿತ್ತು. ಹೆಲಿಪ್ಯಾಡ್ ಕ್ರಾಸ್, ಜಯಂಟ್ ವೀಲ್ ಮೈದಾನ, ಅಶೋಕ ನಗರ ಇಂಟರ್ ಲಾಕ್ ಮೈದಾನ ಸುತ್ತ ರಸ್ತೆಯ ಬದಿ, ಅಶೋಕನಗರ ಕಾಲೋನಿ ರಸ್ತೆ, ಅಶೋಕನಗರ ಮೈದಾನ ಜಂಕ್ಷನ್, ಶ್ರೀಮುಡಿ ಕಡೆಗೆ ಹೋಗುವ ರಸ್ತೆ, ಮಂಜೂಷ ಮ್ಯೂಸಿಯಂ, ವಸಂತ ಮಹಲ್ ಮುಂಭಾಗ, ಅಮೃತವರ್ಷಿಣಿ ಹಿಂದುಗಡೆ ಜಂಕ್ಷನ್, ಅಮೃತವರ್ಷಿಣಿ 2ನೇ ಪಾಕಿಂಗ್, ಅಮೃತವರ್ಷಿಣಿ ಕ್ರಾಸ್, ಕ್ಲಾಕ್ ಟವರ್ ಜಂಕ್ಷನ್ ರಸ್ತೆಯಲ್ಲಿ ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ೩೭ ಅಧಿಕಾರಿಗಳು, ಸಿಬ್ಬಂದಿಗಳ ನಿಯೋಜನೆಯಾಗಿತ್ತು. ಕ್ಲಾಕ್ ಟವರ್‌ನಿಂದ ಡಿಎಂಸಿವರೆಗೆ ಸೆಕ್ಟರ್ ೩: ಕ್ಲಾಕ್ ಟವರ್‌ನಿಂದ ಲಲಿತೋದ್ಯಾನ ಉದ್ಯಾನವನದ ಗೇಟ್ ಬಳಿ, ಬೀಡಿನ ಕೆಳಭಾಗ, ಗೇಟ್ ಹತ್ತಿರ, ದೇವಸ್ಥಾನದ ಮುಂಭಾಗ, ಪ್ರವಚನ ಮಂಟಪ, ಬೆಳ್ಳಿರಥ ಗೇಟ್, ವಿಐಪಿ ಗೇಟ್ ಬಳಿ, ರಥಬೀದಿ, ಕ್ಯೂ ಕಾಂಪ್ಲೆಕ್ಸ್ ಕ್ರಾಸ್ ಜಂಕ್ಷನ್, ಡಿಎಂಸಿ ಕ್ರಾಸ್ ರಸ್ತೆ, ಕ್ಯೂ ಕಾಂಪ್ಲೆಕ್ಸ್ ಕ್ರಾಸ್‌ನಲ್ಲಿ ಒಟ್ಟು ೩೫ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇವರ ಮಧ್ಯೆ ಸಿವಿಲ್ ಡ್ರೆಸ್‌ನಲ್ಲಿದ್ದ ಅಧಿಕಾರಿಗಳೂ ಇದ್ದರು.

ಸೆಕ್ಟರ್ 4, ಸೆಕ್ಟರ್ 5: ಡಿಎಂಸಿಯಿಂದ ಕ್ಯೂಕಾಂಪ್ಲೆಕ್ಸ್‌ವರೆಗೆ ಮತ್ತು ಡಿಎಂಸಿಯಿಂದ ಸನ್ನಿಧಿ ಗೆಸ್ಟ್‌ಹೌಸ್‌ನ ಭದ್ರತೆಗೆ ವಿಶೇಷ ತಂಡ ನಿಯೋಜಿಸಲಾಗಿತ್ತು. ಡಿಎಂಸಿಯಿಂದ ಸನ್ನಿಧಿವರೆಗೆ ಸೆಕ್ಟರ್ 4ರ ಅಡಿಯಲ್ಲಿ 20 ಪೊಲೀಸರನ್ನು ನಿಯೋಜಿಸಲಾಗಿತ್ತು. ಡಿಎಂಸಿಯಿಂದ ಕ್ಯೂ ಕಾಂಪ್ಲೆಕ್ಸ್ ವರೆಗಿನ ಭದ್ರತೆಯನ್ನು ಸೆಕ್ಟರ್ 5ರ ಅಡಿಯಲ್ಲಿ ಡಿಎಂಸಿ ಕಚೇರಿಯ ಮುಂಭಾಗ, ಮೇಲ್ಬಾಗ, ನೂತನ ಕ್ಯೂ ಕಾಂಪ್ಲೆಕ್ಸ್ ಕಟ್ಟಡದ ಮುಂಭಾಗ, ಹಿಂಭಾಗ, ಎಡಬದಿ, ಬಲಬದಿ, ಮುಖ್ಯದ್ವಾರ, ಒಳಭಾಗ, ಉದ್ಘಾಟನಾ ಸ್ಥಳ, ಅನ್ನಪೂರ್ಣ ಛತ್ರದ ಕ್ರಾಸ್ ರಸ್ತೆ, ರಥದ ಶೆಡ್ ಬಳಿ, ನಿರ್ಗಮನ ದ್ವಾರದ ಬಳಿ ಒಟ್ಟು ೫೭ ಪೊಲೀಸರನ್ನು ನಿಯೋಜಿಸಲಾಗಿತ್ತು.

ದೇವಸ್ಥಾನದ ಒಳಭಾಗ ಸೆಕ್ಟರ್ 6: ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಒಳಭಾಗದ ವಠಾರದಲ್ಲಿಯೂ ಬಿಗಿ ಪೊಲೀಸ್ ಭದ್ರತೆ ಇತ್ತು. ದೇವಳದ ಕಚೇರಿ ಆವರಣ, ಒಳಭಾಗ, ಬೀಡಿನ ಸುತ್ತಮುತ್ತ ೪೦ ಪೊಲೀಸರಿದ್ದರು. ಇಲ್ಲಿಯೂ ಕೆಲವರು ಸಾಮಾನ್ಯ ಉಡುಪಿನಲ್ಲಿದ್ದರು.

ಸೆಕ್ಟರ್ 7ರಲ್ಲಿ 48ಕ್ಕೂ ಹೆಚ್ಚು ಪೊಲೀಸರು: ಉಪರಾಷ್ಟ್ರಪತಿ ಬಂದು ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅಮೃತವರ್ಷಿಣಿ ಸಭಾಂಗಣ ಮತ್ತು ವಠಾರದಲ್ಲಿ ೪೮ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಬೆಂಗಾವಲು ವಾಹನ ಪಾಕಿಂಗ್, ವೇದಿಕೆಯ ಮುಂಭಾಗ, ಸಭಾಂಗಣದ ನಡುವಿನ ದಾರಿ, ಸಭಾಂಗಣದ ಎಲ್ಲಾ ಭಾಗಗಳಲ್ಲಿ ಭದ್ರತೆಯಿತ್ತು.

ಸೆಕ್ಟರ್ 8ರಿಂದ 11: ಧರ್ಮಸ್ಥಳದ ಹಳೇ ಜಯಂಟ್ ವೀಲ್ ಸ್ಥಳದಿಂದ ಬಾಹುಬಲಿ ಬೆಟ್ಟದವರೆಗೆ ಸೆಕ್ಟರ್ ೮ರಡಿಯಲ್ಲಿ ೧೦ ಪೊಲೀಸರು, ಅಣ್ಣಪ್ಪ ಬೆಟ್ಟದಿಂದ ಅಮೃತವರ್ಷಿಣಿವರೆಗೆ 10 ಪೊಲೀಸರನ್ನು ಸೆಕ್ಟರ್ 9ರಡಿಯಲ್ಲಿ ನಿಯೋಜಿಸಲಾಗಿತ್ತು. ಹೆಲಿಪ್ಯಾಡ್ ಕ್ರಾಸ್‌ನಿಂದ ಶರಾವತಿ ಜಂಕ್ಷನ್‌ನಿಂದ ಪಾಂಗಾಳದವರೆಗೆ ಸೆಕ್ಟರ್ 10ರಡಿಯಲ್ಲಿ 6 ಪೊಲೀಸರು ಮತ್ತು ಸೆಕ್ಟರ್ 11ರಡಿಯಲ್ಲಿರುವ ನೀರುಚಿಲುಮೆಯಿಂದ ಪುದುವೆಟ್ಟು ಕ್ರಾಸ್ ತನಕ ನಾಲ್ವರು ಪೊಲೀಸರನ್ನು ನಿಯೋಜಿಸಲಾಗಿತ್ತು.

3 ಆಂಬ್ಯುಲೆನ್ಸ್ 3 ಅಗ್ನಿಶಾಮಕದಳ ವಾಹನ: ಉಪರಾಷ್ಟ್ರಪತಿಯವರ ಆಗಮನದ ವೇಳೆ ಹೆಲಿಪ್ಯಾಡ್ ಸಮೀಪ 3 ಆಂಬ್ಯುಲೆನ್ಸ್ ಮತ್ತು 3 ಅಗ್ನಿಶಾಮಕದಳದ ವಾಹನಗಳನ್ನು ನಿಯೋಜಿಸಲಾಗಿತ್ತು. ಅಲ್ಲದೇ, ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಭಾನುವಾರ (ಜ.6) ಮೂರು ಹೆಲಿಕಾಪ್ಟರ್‌ಗಳು ಮತ್ತು ಅಧಿಕಾರಿಗಳ ಆಗಮನವಾಗಿತ್ತು. ಹೆಲಿಪ್ಯಾಡ್ ಸುತ್ತಮುತ್ತಲಿನ ಪರಿಸ್ಥಿತಿ ಪರಿಶೀಲಿಸಿ, 6 ಜನ ಸೇನಾ ಸಿಬ್ಬಂದಿ ಧರ್ಮಸ್ಥಳದಲ್ಲೇ ಗಸ್ತು ತಿರುಗುತ್ತಿದ್ದರು.

Exit mobile version