Site icon Suddi Belthangady

ನದಿಗೆ ಗೋಮಾಂಸದ ತ್ಯಾಜ್ಯ ಹಾಕಿ ಅಪವಿತ್ರಗೊಳಿಸಿದ ಪ್ರಕರಣ – ಕಕ್ಕಿಂಜೆಯಲ್ಲಿ ವಿ.ಹಿಂ.ಪ.-ಬಜರಂಗದಳ ಪ್ರತಿಭಟನೆ

ಬೆಳ್ತಂಗಡಿ: ಅಕ್ರಮ ಕಸಾಯಿಖಾನೆಗಳನ್ನು ನಿಲ್ಲಿಸದಿದ್ದರೆ ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ ನೇರ ಕಾರ್ಯಾಚರಣೆ ನಡೆಸಲಿದ್ದು ಸರಕಾರ ಮತ್ತು ಪೊಲೀಸ್ ಇಲಾಖೆ ಇದಕ್ಕೆ ನೇರ ಹೊಣೆಯಾಗಲಿದೆ ಎಂದು ಎಂದು ಬಜರಂಗದಳದ ಮುಖಂಡ ಪುನೀತ್ ಅತ್ತಾವರ ಎಚ್ಚರಿಸಿದ್ದಾರೆ.

ಮೃತ್ಯುಂಜಯ ನದಿಗೆ ಗೋಮಾಂಸ ತ್ಯಾಜ್ಯ ಹಾಕಿ ನದಿಯನ್ನು ಅಪವಿತ್ರಗೊಳಿಸಿದ ಪ್ರಕರಣವನ್ನು ಖಂಡಿಸಿ ಮತ್ತು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಚಾರ್ಮಾಡಿಯ ಕಕ್ಕಿಂಜೆಯಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಸೋಮವಾರ ನಡೆದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿಭಟನೆಗೆ ಪೊಲೀಸ್ ಅನುಮತಿ ಇಲ್ಲ ಎಂದು ಹೇಳಿದ್ದರು. ಆದರೆ ಗೋವಿನ ರಕ್ಷಣೆಗೆ ಪ್ರತಿಭಟನೆ ಮಾಡಲು ಯಾವುದೇ ದೊಣ್ಣೆ ನಾಯಕನ ಅನುಮತಿ ಅಗತ್ಯ ಇಲ್ಲ ಎಂದು ಹೇಳಿದ ಪುನೀತ್ ಅತ್ತಾವರ ಅವರು ನೇತ್ರಾವತಿ ನದಿ ನೀರು ಧರ್ಮಸ್ಥಳ ಮಂಜುನಾಥನ ಅಭಿಷೇಕಕ್ಕೆ ಬಳಕೆಯಾಗುತ್ತದೆ. ಹಿಂದೂಗಳ ಭಾವನೆಗೆ ಧಕ್ಕೆ ಮಾಡಲೆಂದೇ ಈ ಕೃತ್ಯ ಎಸಗಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನೂರಾರು ಅಕ್ರಮ ಕಸಾಯಿಖಾನೆಗಳು ಕಾರ್ಯ ನಿರ್ವಹಿಸುತ್ತಿದ್ದರೂ ಇಲಾಖೆ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇಂತಹ ವಿದ್ಯಮಾನಗಳನ್ನು ಎಂದಿಗೂ ಹಿಂದೂಗಳು ಸಹಿಸುವುದಿಲ್ಲ. ಅಕ್ರಮ ಕಸಾಯಿಖಾನೆಗಳನ್ನು ನಿಲ್ಲಿಸದಿದ್ದರೆ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ನೇರ ಕಾರ್ಯಾಚರಣೆಗೆ ಇಳಿಯಲಿದೆ. ಇದಕ್ಕೆ ಸರಕಾರ ಮತ್ತು ಪೊಲೀಸ್ ಇಲಾಖೆ ನೇರ ಹೊಣೆಯಾಗಲಿದೆ. ಗೋವುಗಳ ರಕ್ಷಣೆಗೆ ಹಿಂದೂ ಸಮಾಜ ಯಾವ ತ್ಯಾಗಕ್ಕೂ ಸಿದ್ಧವಿದೆ. ಇತ್ತೀಚೆಗೆ ಶಾಸಕ ಹನೀಶ್ ಪೂಂಜ ಅವರು ಅಧಿವೇಶನದಲ್ಲಿ ಆನೆಗಳ ಕುರಿತು ಮಾತನಾಡಿದಾಗ ಮಾನವೀಯತೆ ಬಗ್ಗೆ ತಿಳಿಸಿದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಗೋವುಗಳಿಗೆ ಬಾಳುವ ಹಕ್ಕಿದೆ ಎಂಬುದನ್ನು ತಿಳಿಯಬೇಕಿದೆ ಎಂದು ಪುನೀತ್ ಅತ್ತಾವರ ಹೇಳಿದರು.

ಜಾರ್ಮಾಡಿಯಿಂದ ಮಂಗಳೂರು ವರೆಗೆ ಗೋ ಮಾಂಸ ಮಾರಾಟ ಆಗುತ್ತಿದೆ. ನಾವು ಸಹಿಸಿದಷ್ಟು ಸಹಿಸಿದೆವು. ಹೋರಾಟ ಮಾಡಿದಷ್ಟು ಮಾಡಿದೆವು. ಆದರೆ ಇನ್ನು ಸಹಿಸಲಾಗದು ಎಂದು ಹೇಳಿದ ಅವರು ಕರ್ನಾಟಕದ ಸ್ಪೀಕರ್ ಯು.ಟಿ.ಖಾದರ್ ಗೋ ಹತ್ಯೆ ಮಾಡುವವರಿಗೆ ಬೆಂಬಲ ಕೊಡುತ್ತಿದ್ದಾರೆ ಎಂದರು. ಗೋ ಮಾತೆಯ ರಕ್ಷಣೆಗಾಗಿ ಹಿಂದೂ ಸಮಾಜ ಯಾವುದೇ ತ್ಯಾಗಕ್ಕೂ ಸಿದ್ಧ. ಗೋ ಮಾತೆಯ ಹತ್ಯೆಯ ಮೊದಲು ಜಿಹಾದಿಯ ಕೈ ನಡುಗಬೇಕು. ಧರ್ಮ ಯುದ್ಧ ಪ್ರಾರಂಭವಾಗಿದೆ. ಇದು ಗೋ ರಕ್ಷಕರು ಮತ್ತು ಗೋ ಭಕ್ಷಕರ ಮಧ್ಯೆಯ ಯುದ್ಧ. ಗೋ ಹತ್ಯೆ ಮಾಡುವವರ ಜೊತೆ ಕಕ್ಕಿಂಜೆಯ ಹಿಂದೂಗಳು ವ್ಯಾಪಾರ ಮಾಡಬೇಡಿ ಎಂದು ಅವರು ಕರೆ ಕೊಟ್ಟರು

ಹಿಂದೂಗಳ ಭಾವನೆಗೆ ಧಕ್ಕೆ ಬಂದರೂ ಪೊಲೀಸ್ ಇಲಾಖೆ ಕೈಕಟ್ಟಿ ಕೂರುವಂತಾಗಿದೆ-ನವೀನ್ ನೆರಿಯ: ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ ಗೋ ತಾಜ್ಯ ಕಂಡುಬಂದಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದೆವು. ನಮಗೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದೂಗಳ ಭಾವನೆಗೆ ಧಕ್ಕೆ ಬಂದರೂ ಪೊಲೀಸ್ ಇಲಾಖೆ ಕೈಕಟ್ಟಿ ಕೂರುವಂತಾಗಿದೆ. ಚಾರ್ಮಾಡಿ ಪ್ರಕರಣದಲ್ಲಿ ೫ಕ್ಕಿಂತ ಅಧಿಕ ಮಂದಿ ಭಾಗಿಯಾಗಿದ್ದರೂ ಇಬ್ಬರನ್ನು ಮಾತ್ರ ಪೊಲೀಸ್ ಇಲಾಖೆ ಬಂಧಿಸಿದೆ. ಉಳಿದವರನ್ನು ತಕ್ಷಣ ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಬೇಕು. ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಪೊಲೀಸ್ ಇಲಾಖೆಯನ್ನು ಕೈಕಟ್ಟಿ ಕುಳಿತಿರುವಂತೆ ಮಾಡಲಾಗಿದೆ ಎಂದು ಹೇಳಿದರು. ಶಾಸಕ ಹರೀಶ್ ಪೂಂಜ, ವಿ.ಹಿಂ.ಪ.-ಬಜರಂಗದಳ ತಾಲೂಕು ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ, ತಾಲೂಕು ಸಂಯೋಜಕ ಸಂತೋಷ್ ಅತ್ತಾಜೆ, ಗೋ ರಕ್ಷಕ ರಮೇಶ ಧರ್ಮಸ್ಥಳ ಮತ್ತಿತರರು ಉಪಸ್ಥಿತರಿದ್ದರು. ಬೆಳ್ತಂಗಡಿ ಪ್ರಖಂಡದ ಕಾರ್ಯದರ್ಶಿ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಅಖಿಲ್ ರೆಖ್ಯ ಸ್ವಾಗತಿಸಿದರು. ಪ್ರತಿಭಟನೆ ಬಳಿಕ ಪ್ರತಿಭಟನಾಕಾರರು ಚಾರ್ಮಾಡಿ ಗ್ರಾಮ ಪಂಚಾಯಕ್ ಮೂಲಕ ಮನವಿ ಸಲ್ಲಿಸಿದರು.

ಗೋವುಗಳಿಗೂ ಬದುಕುವ ಹಕ್ಕಿದೆ: ಪ್ರತಿಭಟನಾ ಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ಹಿಂದೂ ಸಮಾಜದ ಭಾವನೆಗಳನ್ನು ಅರ್ಥ ಮಾಡಿಕೊಂಡು ಗೋಹತ್ಯೆ ನಿಷೇಧ ಕಾಯಿದೆಯಲ್ಲಿರುವ ಕಾನೂನುಗಳನ್ನು ಜಾರಿಗೆ ತರಬೇಕು. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಭಯೋತ್ಪಾದನೆ, ಗೋ ಹತ್ಯೆ ಮೂಲಕ ಹಿಂದೂ ಸಮಾಜದ ಭಾವನೆಗಳಿಗೆ ಘಾಸಿ ಉಂಟು ಮಾಡುವ ಕೃತ್ಯಗಳಿಗೆ ಕಡಿವಾಣ ಬೀಳಬೇಕು. ಯೋಗಿ ಸರಕಾರ ಬುಲ್ಡೋಜರ್ ಮಾದರಿ ಕಾರ್ಯಾಚರಣೆ ಕೈಗೊಂಡಿರುವ ಕಾರಣ ಉತ್ತರ ಪ್ರದೇಶದಲ್ಲಿ ಅನೇಕ ಕೃತ್ಯಗಳು ಹತೋಟಿಗೆ ಬಂದಿವೆ. ಗೋವುಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಸ್ಪೀಕರ್ ಯು.ಟಿ. ಖಾದರ್ ಅರಿಯುವ ಅಗತ್ಯವಿದೆ ಎಂದು ಹೇಳಿದರು.

ಅಕ್ರಮ ಕಸಾಯಿಖಾನೆ ನಿಲ್ಲಿಸದೇ ಇದ್ದರೆ ವಿ.ಹಿಂ.ಪ, ಬಜರಂಗದಳದಿಂದ ನೇರ ಕಾರ್ಯಾಚರಣೆ: ಪುನೀತ್ ಅತ್ತಾವರ

ಹಿಂದೂಗಳ ಭಾವನೆಗೆ ಧಕ್ಕೆ ಬಂದರೂ ಪೊಲೀಸ್ ಇಲಾಖೆ ಕೈಕಟ್ಟಿ ಕೂರುವಂತಾಗಿದೆ: ನವೀನ್ ನೆರಿಯ

Exit mobile version