Site icon Suddi Belthangady

ಅಯ್ಯಪ್ಪ ಭಕ್ತರ ವಾವರ ಮಸೀದಿ ಭೇಟಿ ಸಮರ್ಥನೀಯವೇ? – ಪುಣ್ಯಕ್ಷೇತ್ರಗಳ ಬಳಿ ಅನ್ಯಧರ್ಮೀಯ ಆಚರಣೆಗಳನ್ನು ದೇವಸ್ವ ಮಂಡಳಿಯೇ ತುರುಕುವ ಮೂಲಕ ಹಿಂದೂ ಸಂಪ್ರದಾಯ, ನಂಬಿಕೆಗಳಿಗೆ ಘಾಸಿಯಾಗುತ್ತಿದೆ

ಶಬರಿಮಲೆ ಯಾತ್ರೆಗೆ ಈಗ ಹೋಗುವ ಸಮಯ. ಮಕರಸಂಕ್ರಾಂತಿಯಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಆಗುವ ಹೊತ್ತು. ಲಕ್ಷೋಪಲಕ್ಷ ಅಯ್ಯಪ್ಪ ವ್ರತಧಾರಿಗಳು ೪೮ ದಿನಗಳ ಮಂಡಲ ಕಠಿಣ ವ್ರತಾಚರಣೆ ಮಾಡಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡುವ ಪುಣ್ಯ ಸಂಚಯನ ಕಾರ್ಯ ನಡೆಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅಯ್ಯಪ್ಪ ಭಕ್ತರ ವಾವರ ಮಸೀದಿ ಭೇಟಿ ವಿಚಾರ ಚರ್ಚೆಯಾಗುತ್ತಲೇ ಇದೆ. ಹಾಗಂತ ವಿವಾದ ಹೊಸತೇನಲ್ಲ. ಆದರೆ ಅದು ಚರ್ಚೆಯಲ್ಲಿಯೇ ಮುಗಿದುಹೋಗುತ್ತಿತ್ತು. ಈ ಬಾರಿ ವಿವಾದ ಹೆಚ್ಚು ಸದ್ದು ಮಾಡಿದ್ದು ಯಕ್ಷಗಾನ ಮೇಳಗಳು ಶಬರಿ ಮಲೆ ಅಯ್ಯಪ್ಪ ಪ್ರಸಂಗದಲ್ಲಿ ವಿವಾದಕ್ಕೆ ಕಾರಣವಾದ ವಾವರ ಪಾತ್ರ ಕೈ ಬಿಟ್ಟಿರುವುದು. ಇದಕ್ಕೆ ಕಾರಣರಾಗಿರುವುದು ಬರೋಡದಲ್ಲಿ ಬಹುಕೋಟಿ ಉದ್ಯಮ ಹೊಂದಿರುವ ಗುರುವಾಯನಕರೆ ಮೂಲದ ಶಶಿಧರ ಶೆಟ್ಟಿ ಅವರು ಇತ್ತೀಚೆಗೆ ಅಯ್ಯಪ್ಪ ದೇವರ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಮಾಡಿದ ಭಾಷಣ.

ವಾವರ ಯಾರು? 48 ದಿನ ವ್ರತಾಚರಣೆ ಮಾಡಿ ಅನ್ಯಧರ್ಮೀಯ ವಾವರ ಮಸೀದಿಯ ದರ್ಶನ ಏಕೆ ಮಾಡಬೇಕು? ಅಲ್ಲಿ ಏಕೆ ತೆಂಗಿನಕಾಯಿ ಬಿಟ್ಟು ಬರಬೇಕು? ಕಾಳುಮೆಣಸು ಏಕೆ ಕೊಡಬೇಕು? ವಾವರನಿಗೂ ಅಯ್ಯಪ್ಪ ದೇವರಿಗೂ ಸಂಬಂಧವಿಲ್ಲ. ಶಬರಿಮಲೆಗೆ ಹೋಗುವ ಮುನ್ನ ವಾವರ ಮಸೀದಿಗೆ ಭೇಟಿ ನೀಡಬಾರದು. ನಮ್ಮ ಧರ್ಮವನ್ನು ಪ್ರೀತಿಸದವರ ಪ್ರಾರ್ಥನಾ ಸ್ಥಳದಲ್ಲಿ ನಾವ್ಯಾಕೆ ಆರಾಧಿಸಬೇಕು ಎಂದು ಪ್ರಶ್ನೆ ಮಾಡಿದ್ದರು. ಯಕ್ಷಗಾನದ ಮೇಳದವರು ಇತಿಹಾಸದಲ್ಲಿ ಯಾವುದೇ ಉಲ್ಲೇಖವಿಲ್ಲದ ವಾವರನನ್ನು ವಿಜೃಂಬಿಸುತ್ತಿದ್ದಾರೆ. ಇದನ್ನು ಕೈ ಬಿಡಬೇಕು ಎಂದು ಪಾವಂಜೆ ಮೇಳ ಸಹಿತ ಎಲ್ಲ ಮೇಳದ ಯಜಮಾನರಿಗೆ, ಕಲಾವಿದರಿಗೆ ಮನವಿ ಮಾಡಿದ್ದರು. ಅಯ್ಯಪ್ಪ ಶಿಬಿರಗಳಲ್ಲಿ ಅಯ್ಯಪ್ಪ ದೇವರು ಮತ್ತು ವಾವರನ ಯುದ್ಧ ಸನ್ನಿವೇಶದ ದೃಶ್ಯಗಳನ್ನು ಅಯ್ಯಪ್ಪ ವ್ರತಧಾರಿಗಳೇ ದರ್ಶನ ರೀತಿಯಲ್ಲಿ ಮಾಡುವುದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದರು. ಪರಿಣಾಮ ಮೊದಲನೇ ಬಾರಿಗೆ ಗೆಜ್ಜೆಗಿರಿ ಮೇಳ, ಇದಾದ ಬಳಿಕ ಸಸಿಹಿತ್ಲು ಭಗವತಿ ಮೇಳ, ಬೆಂಕಿನಾಥೇಶ್ವರ ಮೇಳ ಶಬರಿಮಲೆ ಅಯ್ಯಪ್ಪ ಪ್ರಸಂಗದಲ್ಲಿ ವಾವರ ಪಾತ್ರವನ್ನು ಕೈಬಿಟ್ಟಿವೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳ ಮತ್ತು ಕಿಶನ್ ಹೆಗ್ಡೆ ಸಂಚಾಲಕತ್ವದ 5 ಮೇಳಗಳಲ್ಲಿ ಒಂದೊಮ್ಮೆ ಶಬರಿಮಲೆ ಪ್ರಸಂಗ ಆಡಿದರೆ ಅದರಲ್ಲಿ ವಾವರನ ಪಾತ್ರ ಕೈ ಬಿಡುವುದಾಗಿ ಭರವಸೆ ನೀಡಿದ್ದರು. ಇದು ತುಳುನಾಡಿನಲ್ಲಿ ಸಂಚಲವನ್ನೇ ಸೃಷ್ಟಿಸಿದೆ.

ನಿಜವಾಗಿಯೂ ವಾವರ ಯಾರು ಎಂದು ಪ್ರಶ್ನೆ ಮಾಡಿದರೆ ಹತ್ತಾರು ದಂತ ಕಥೆಗಳಿವೆ. ಪುರಾಣ, ಧರ್ಮಗ್ರಂಥಗಳಲ್ಲಿ ಯಾವುದೇ ಉಲ್ಲೇಖ ಇಲ್ಲ. ಪೌರಾಣಿಕವಾಗಿ ನೋಡುವುದಾದರೆ ವಾವರ ಉಲ್ಲೇಖ ಇಲ್ಲವೇ ಇಲ್ಲ. ಭಸ್ಮಾಸುರ ಪ್ರಸಂಗದಲ್ಲಿ ಮೋಹಿನಿ ವೇಷ ಧರಿಸಿದ ವಿಷ್ಣು ಭಸ್ಮಾಸುರ ಅಂತ್ಯ ಮಾಡಿಸಿದ ಬಳಿಕ ಈ ಮೋಹಿನಿಯಲ್ಲಿ ಶಿವ ಅನುರಕ್ತನಾಗಿ ಹರಿಹರ ಮಿಲನದಲ್ಲಿ ಮಗ ಹುಟ್ಟುತ್ತಾನೆ. ಅವನೇ ಮಣಿಕಂಠ, ಅಯ್ಯಪ್ಪ. ಇನ್ನೊಂದು ಇತಿಹಾಸಕ್ಕೆ ಹತ್ತಿರ ಇರುವ ಪಂದಳ ರಾಜನ ಕಥೆ. ಪಂದಳ ರಾಜನಿಗೆ ಮಕ್ಕಳಿರುವುದಿಲ್ಲ. ನದಿ ತೀರದಲ್ಲಿ ಅನಾಥ ಮಗು ಸಿಗುತ್ತದೆ. ಅರಮನೆ ತಂದು ಆ ಮಗುವನ್ನು ಸಾಕುತ್ತಾನೆ. ಕಾಲ ಕ್ರಮೇಣ ಪಂದಳ ರಾಜ ದಂಪತಿಗೆ ಅವರದೇ ಮಗು ಆಗುತ್ತದೆ. ಆಗ ರಾಣಿಗೆ ತನ್ನ ರಕ್ತ ಹಂಚಿ ಹುಟ್ಟಿದ ಮಗನಿಗೆ ಪಟ್ಟ ಕಟ್ಟಬೇಕು ಎಂದು ಆಸೆಯಾಗುತ್ತದೆ. ಇದಕ್ಕೆ ಮಂತ್ರಿ ಒಗ್ಗರಣೆ ಹಾಕುತ್ತಾನೆ. ಆಗ ತಾಯಿ ತೀವ್ರ ಹೊಟ್ಟೆನೋವಿನ ನಾಟಕ ಆಡಿದ ಮಣಿಕಂಠನಲ್ಲಿ ಕಾಡಿಗೆ ಹೋಗಿ ಹುಲಿ ಹಾಲನ್ನು ತರಬೇಕು ಎಂದು ಹೇಳುತ್ತಾಳೆ. ಮಣಿಕಂಠ ಕಾಡಿಗೆ ಹೋಗಿ ಅಲ್ಲಿ ಮಹಿಷಿ ಎಂಬ ರಕ್ಕಸಿಯನ್ನು ವಧಿಸಿ, ಹುಲಿಯ ಹಾಲನ್ನು ಕರೆದು ನಾಡಿಗೆ ಬರುತ್ತಾನೆ. ಇದನ್ನು ನೋಡಿದ ತಾಯಿಗೆ ಇವ ದೈವಾಂಶ ಸಂಭೂತ ಎಂದು ಅರಿವಾಗಿ ಅಯ್ಯಪ್ಪ ಎಂದು ಉದ್ಘರಿಸುತ್ತಾಳೆ. ಇನ್ನೊಂದು ಜನಪದ ಕಥೆಯಲ್ಲಿ ವಾವರ್ ಎಂಬ ದರೋಡೆಕೋರ, ಕಾಡುಗಳ್ಳ ಏರಿಮಲೆ ಪ್ರದೇಶದ ಕಾಡಿನಲ್ಲಿ ಜನರನ್ನು ಲೂಟಿ ಮಾಡುತ್ತಿದ್ದ. ಅಯ್ಯಪ್ಪನ್ ಇವನನ್ನು ಹೋರಾಟದಲ್ಲಿ ಸೋಲಿಸಿದ. ಬಳಿಕ ಸ್ನೇಹಿತನಾಗಿ ಸ್ವೀಕರಿಸಿದ.

ಇನ್ನೂ ಹತ್ತಾರು ದಂತಕಥೆಗಳಿವೆ. ಕಟ್ಟು ಕಥೆಗಳಿವೆ. 1940ರಲ್ಲಿ ರಾಜಾ ಮಾಣಿಕ್ ಪಿಳ್ಳೈ ಎಂಬ ನಾಟಕ ರಚನೆಕಾರರು ಶಬರಿಮಲೆ ಕ್ಷೇತ್ರದ ಬಗ್ಗೆ ನಾಟಕ ಬರೆಯುವಂತೆ ಒತ್ತಡ ಬಂದಾಗ ಅಯ್ಯಪ್ಪ ಸ್ವಾಮಿ ಕುರಿತಾಗಿ ಇದ್ದ ಪೌರಾಣಿಕ ಮತ್ತು ಐತಿಹಾಸಿಕ ವಿಚಾರಗಳ ನಡುವೆ ಈ ಜನಪದ, ಕಥೆ, ದಂತಕತೆಗಳನ್ನು ಸೇರಿಸಿದ್ದರು. ನಾಟಕ ಕುತೂಹಲಕಾರಿಯಾಗಲು, ದೃಶ್ಯ ವೈಭವಕ್ಕೆ ವಾವರನನ್ನು ಕಡಲ್ಗಳ್ಳ, ಮುಸ್ಲಿಂ ವ್ಯಾಪಾರಿ ರೀತಿಯಲ್ಲಿ ತೋರಿಸಿದ್ದರು. ಬರ ಬರುತ್ತಾ ಈ ನಾಟಕ ಎಷ್ಟು ಪ್ರಸಿದ್ಧವಾಯಿತು ಎಂದರೆ ಪುರಾಣ, ಇತಿಹಾಸ, ದಂತಕಥೆ, ವದಂತಿ ಕಥೆಗಳನ್ನೆಲ್ಲ ಹಿಂದಿಕ್ಕಿ ಈ ನಾಟಕದಲ್ಲಿರುವ ವಿಚಾರವೇ ಸತ್ಯ ಎಂದು ಜನ ನಂಬಿದರು. ಶಬರಿಮಲೆಯ ಶಾಸ್ತಾ ವಿಗ್ರಹ ೩ನೇ ಶತಮಾನಕ್ಕೆ ಪೂರ್ವದ್ದು ಎಂದು ಪುರಾತತ್ವ ದಾಖಲೆಗಳಿವೆ. ಗುಡಿಯ ವಿಗ್ರಹವೇ ಅ? ಹಿಂದಿನದ್ದಾದರೆ ಅಯ್ಯಪ್ಪ ಅವತಾರ ಅದಕ್ಕೆ ಪೂರ್ವ ಎನ್ನುವುದು ಶತಃ ಸಿದ್ಧ. ಆಗ ಮುಸ್ಲಿಮರು ಇರಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ದಾಖಲೆಗಳ ಅಗತ್ಯ ಇಲ್ಲವೇ ಇಲ್ಲ.

ಈ ನಾಟಕಗಳಲ್ಲಿ, ಯಕ್ಷಗಾನಗಳಲ್ಲಿ ಪ್ರಚೋದನೆಗೆ ಒಳಗಾಗಿಯೋ ಆರ್ಥಿಕ ದೃಷ್ಟಿಕೋನದಿಂದಲೋ ವಾವರನ ಮಸೀದಿ ದರ್ಶನ ಮಾಡದಿದ್ದರೆ ಶಬರಿಮಲೆ ಯಾತ್ರೆ ಸಿದ್ಧಿಸುವುದಿಲ್ಲ ಎಂದು ಅಯ್ಯಪ್ಪ ದೇವರ ಪಾತ್ರಧಾರಿ ಬಾಯಿಯಲ್ಲಿ ಹೇಳಿಸಿ, ವಾವರ ಕಥೆ ನಂಬವದವರೂ ಅಯ್ಯಪ್ಪನ ಭಕ್ತಿಯಿದಾಗಿ, ಗುರುಸ್ವಾಮಿ ರೂಢಿಯಿಂದ ಪಳ್ಳಿ ದರ್ಶನ ಮಾಡುತ್ತಿದ್ದಾರೆ. ಶಬರಿಮಲೆಯಿಂದ 40 ಕಿ.ಮೀ ದೂರದಲ್ಲಿರುವ ನಿನಾರ್ ಮಸೀದಿ (ವಾವರ್ ಮಸೀದಿ)ಯ ಒಳಗೆ ಅಯ್ಯಪ್ಪ ವ್ರತಧಾರಿಗಳಿಗೆ ಹೋಗಲು ಬಿಡುವುದಿಲ್ಲ. ಹೊರಗಡೆಯೇ ಪ್ರದಕ್ಷಿಣೆ ಹಾಕಬೇಕು. ಬಹುತೇಕ ಭಕ್ತರು ವಾವರನ ಪಳ್ಳಿಯಲ್ಲಿ ತೆಂಗಿನಕಾಯಿ ಕೊಡುತ್ತಾರೆ, ಕಾಳುಮೆಣಸು ಹರಕೆ ಹಾಕುತ್ತಾರೆ, ಕೈ ಮುಗಿಯುತ್ತಾರೆ, ಉರುಳು ಸೇವೆ ಮಾಡುತ್ತಾರೆ. ಊದು ಬತ್ತಿ ಚುಚ್ಚುತ್ತಾರೆ. ಇದೆಲ್ಲ ಹಿಂದೂ ಆಚರಣೆಗಳು. ಇದಕ್ಕೆ ಸರಿಯಾಗಿ ಅಲ್ಲಿ ಮೂಲಸೌಲಭ್ಯಗಳನ್ನು ಮಸೀದಿ ಆಡಳಿತ ಮಂಡಳಿ ನೀಡುತ್ತದೆ. ಅಲ್ಲಿ ಐದು ಹೊತ್ತು ಮಸೀದಿ ಒಳಗೆ ನಮಾಜ್ ನಡೆಯುತ್ತದೆ.

2-3 ದಶಕದ ಹಿಂದೆ ವಾವರನ ಕ್ಷೇತ್ರ ಇನ್ನೊಂದು ಸೃಷ್ಟಿಯಾಗಿದೆ. ಶಬರಿಮಲೆ ಕ್ಷೇತ್ರದಲ್ಲಿಯೇ ವಾವರ ಹೆಸರಿನಲ್ಲಿ ಕಾಣಿಕೆ ಸ್ವೀಕರಿಸುವ, ಪ್ರಸಾದ ಕೊಡುವ ಗೋರಿ ರೀತಿಯ ಟೆಂಟ್ ಹಾಕಿದ ತಾತ್ಕಾಲಿಕ ಜಾಗ ಇದೆ. ಇಲ್ಲೂ ವಾವರ ಮಸೀದಿ ರೀತಿಯ ಆಚರಣೆಯನ್ನು ಹಿಂದುಗಳು ಮಾಡುತ್ತಾರೆ! ಆದರೆ ಮೂಲ ನಂಬಿಕೆ ಉಳಿಯಬೇಕು, ಮೂಢ ನಂಬಿಕೆ ಅಳಿಯಬೇಕು. ಇದಕ್ಕಿಂತಲೂ ಹೆಚ್ಚಾಗಿ ಅನ್ಯಧರ್ಮೀಯ ಕ್ಷೇತ್ರಗಳಲ್ಲಿ ಹಿಂದೂ ಸಂಪ್ರದಾಯ ಆಚರಣೆಯಿಂದ ಮುಂದೆ ಸಮಸ್ಯೆ ತಲೆ ತೋರಬಹುದು. ಕಾಣಿಕೆ ಸ್ವೀಕರಿಸುವುದು ಮುಸ್ಲಿಮರಲ್ಲಿ ನಿಷಿದ್ಧವಾದರೂ ಸದ್ಯಕ್ಕೆ ಕೋಟಿ, ಕೋಟಿ ಆದಾಯ ಬರುತ್ತಿರುವುದರಿಂದ ಆ ಸಮುದಾಯದವರು ಸುಮ್ಮನೆ ಉಳಿದಿರಬಹುದು. ಮುಂದೆ? ಹೀಗಾಗಿ ಶಾಂತಿ- ಭದ್ರತೆ ದೃಷ್ಟಿಯಿಂದ ಅಯ್ಯಪ್ಪ ವ್ರತಧಾರಿಗಳು ತಮ್ಮದಲ್ಲದ ಆಚರಣೆಯನ್ನು ಬಿಟ್ಟರೆ ಒಳ್ಳೆಯದು ಎಂಬ ಅನಿಸಿಕೆ ಕೇಳಿಬಂದಿದೆ.
ಇದಕ್ಕೆ ಎರಡೂ ಸಮಾಜದ ವಿದ್ವಾಂಸರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ರಹೀಂ ಉಚ್ಚಿಲ್ ಪ್ರಕಾರ ಅಯ್ಯಪ್ಪ ಮತ್ತು ವಾವರ ಸಂಬಂಧ ಎನ್ನುವುದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಇರುವಷ್ಟೇ ಆಗಿದೆ.
ಮಸೀದಿಯಲ್ಲಿ ನಮಾಜ್ ಬಿಟ್ಟರೆ ಏನೂ ನಡೆಯುವುದಿಲ್ಲ. ದರ್ಗಾದಲ್ಲಿ ಗತಿಸಿ ಹೋದ ಧಾರ್ಮಿಕ ಪುರುಷರ ಸಮಾಧಿ ಇರುತ್ತದೆ. ಇಸ್ಲಾಮ್ ನಲ್ಲಿ ಈ ವ್ಯತ್ಯಾಸ ಸ್ಪಷ್ಟವಾಗಿದೆ. ವಾವರ್ ಮುಸ್ಲಿಮ್ ಸಂತ ಆಗಿದ್ದರೆ ಇಸ್ಲಾಮ್‌ಗೆ ಬದ್ಧನಾಗಿದ್ದರೆ ಅಲ್ಲಾಹ್ ಹೊರತು ಇನ್ಯಾರಿಗೂ ಶರಣು ಹೋಗುವುದಿಲ್ಲ. ಇಸ್ಲಾಮ್‌ನಲ್ಲಿ ವ್ಯಕ್ತಿಪೂಜೆ, ಮೂರ್ತಿ ಪೂಜೆ ಇಲ್ಲ, ತೆಂಗಿನಕಾಯಿ ಕೊಡುವುದು, ಕಾಳುಮೆಣಸು ಕೊಡವುದು, ನೈವೇಧ್ಯ ಕೊಡುವ ಕ್ರಮ ಇಲ್ಲ.

ಆ ಮಸೀದಿಯಲ್ಲಿ ನಮಾಜ್ ಮಾತ್ರ ಮಾಡಬೇಕು ಎಂದು ವಾವರ್ ಹೇಳಿಕೆ ನೀಡಿದ್ದರೆ ವಾವರನಿಗೇ ಇಸ್ಲಾಮ್ ನಲ್ಲೂ ಗೌರವ ಇರುತ್ತಿತ್ತು. ಬದಲಾಗಿ ಇಲ್ಲಿಗೆ ಬನ್ನಿ, ಉರುಳು ಸೇವೆ ಮಾಡಿ, ನೈವೇಧ್ಯ ಕೊಡಿ, ಕಾಳು ಮೆಣಸು ಕೊಡಿ ಎಂದು ಹೇಳಿದರೆ ಅದು ಇಸ್ಲಾಮ್‌ಗೆ ವಿರುದ್ಧ. ಅದ್ದರಿದ ವಾವರಗೆ ಮುಸ್ಲಿಂ ಧರ್ಮದಲ್ಲಿ ಮಾನ್ಯತೆ ಇಲ್ಲ ಎಂದು ವಿಶ್ಲೇಷಿಸುತ್ತಾರೆ ರಹೀಂ. ಯಕ್ಷಗಾನದಲ್ಲಿ ದರೋಡೆಕೋರ ಎಂದು ತೋರಿಸುತ್ತಾರೆ, ಯಾವ ಧರ್ಮದಲ್ಲಿಯಾದ್ರೂ ದರೋಡೆಕೋರನಿಗೆ ಗೌರವ ಕೊಡುವ ಕ್ರಮ ಉಂಟಾ? ಈಗ ಶಬರಿಮಲೆಗೆ ಹೋಗುತ್ತಿರುವುದು ಹಿಂದುಗಳು, ಪದ್ಧತಿಯನ್ನು ಆಚರಿಸುವುದು ಹಿಂದುಗಳು. ಅವರೇ ಇದನ್ನು ನಿಲ್ಲಿಸುವ ಬಗ್ಗೆ ಚಿಂತಿಸಬೇಕು. ಮುಸ್ಲಿಮರು ದೇವಸ್ಥಾನಕ್ಕೆ ಬರುವುದಿಲ್ಲ, ನಾವ್ಯಾಕೆ ಮಸೀದಿಗೆ ಹೋಗಿ ಆರಾಧಿಸಬೇಕು ಎಂದು ಉದ್ಯಮಿ ಶಶಿಧರ ಶೆಟ್ರು ಹೇಳಿದ್ದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಅನಿಸಿಕೆ. ಏಕೆಂದರೆ ನಾನು ಮುಸ್ಲಿಮನಾಗಿ ಅಲ್ಲಾಹ್ ನನ್ನು ಆರಾಧಿಸುತ್ತೇನೆಯೇ ಹೊರತು ದೇವಸ್ಥಾನಕ್ಕೆ ಹೋಗಿ ದೇವರನ್ನು ಆರಾಧಿಸುವುದಿಲ್ಲ. ಆದರೆ ಗೌರವ ಖಂಡಿತವಾಗಿಯೂ ನೀಡುತ್ತೇನೆ.

ವಾವರ ಮಸೀದಿಗೆ ಭೇಟಿ ಕೊಡದೇ ಇದ್ದರೆ ಅಯ್ಯಪ್ಪ ಸ್ವಾಮಿ ದರ್ಶನ ಫಲಪ್ರದವಾಗುವುದಿಲ್ಲ ಎಂದು ಯಕ್ಷಗಾನದಲ್ಲಿ ಹೇಳುತ್ತಿರುವುದರಿಂದ ಇದರಿಂದ ಪ್ರಭಾವಿತರಾಗಿ ಹೆದರಿಕೆಯಿಂದಲೋ ಗೌರವದಿಂದಲೋ ಮನಸ್ಸಿಲ್ಲದಿದ್ದರೂ ಮಸೀದಿಗೆ ಭೇಟಿ ಕೊಡುತ್ತಾರೆ. ಅಯ್ಯಪ್ಪ ವ್ರತಧಾರಿಗಳು ಮಾಂಸಾಹಾರ ಮಾಡದೆ ಕಠಿಣ ವ್ರತಾಚರಣೆ ಮಾಡಿ ಅಲ್ಲಿ ಮಸೀದಿಯ ಮಾಂಸಾಹಾರಿ ಧರ್ಮಗುರುವಿನಿಂದ ಪ್ರಸಾದ ತೆಗೆದುಕೊಳ್ಳುವುದು ಎಷ್ಟು ಸರಿ ಎನ್ನುವುದು ರಹೀಮ್ ಉಚ್ಚಿಲ ವಾದ. ಕಠಿಣ ವ್ರತಾಚರಣೆ ಮಾಡಿ ಗೋರಿಗೆ ಅಡ್ಡಬೀಳುತ್ತಿರುವುದು ಮೈಲಿಗೆ ಆದಂತಲ್ಲವೇ? ಇದು ಇನ್ನುಮುಂದೆಯಾದರೂ ಬದಲಾವಣೆಯಾಗಬೇಕು ಎಂದು ಈ ಹಿಂದೆ ವಾವರ್ ಮಸೀದಿಗೆ ಭೇಟಿ ನೀಡಿ ಪ್ರದಕ್ಷಿಣೆ ಮಾಡಿ ಬಂದ ಅನೇಕರು ಅಭಿಪ್ರಾಯ ಪಡುತ್ತಾರೆ. ಅಯ್ಯಪ್ಪ ಸ್ವಾಮಿಗಳ ಕಾಣಿಕೆಯಿಂದ ದೊಡ್ಡ ಮಸೀದಿ ನಿರ್ಮಾಣ ಆಗಿದೆ. ಈಗ ಶಬರಿಮಲೆ ಕ್ಷೇತ್ರದಲ್ಲಿಯೂ ಎರಡು ದಶಕದ ಹಿಂದೆ ಟೆಂಟ್ ರೀತಿಯಲ್ಲಿ ವಾವರ ದರ್ಗಾ ನಿರ್ಮಾಣವಾಗಿದೆ. ಅಲ್ಲಿಯೂ ಕಾಣಿಕೆ ಸ್ವೀಕರಿಸುತ್ತಾರೆ. ನಾನೂ 46 ವರ್ಷಗಳಿಂದ ಶಬರಿಮಲೆ ಯಾತ್ರೆಗೆ ಹೋಗುತ್ತಿನೆ. ಹಿಂದೆ ಗುರುಸ್ವಾಮಿ ಹೇಳಿದ ರೀತಿಯಲ್ಲಿಯೇ ಹೋಗುತ್ತಿದ್ದೆ. ಇತ್ತೀಚಿನ ವರ್ಷಗಳಲ್ಲಿ ನೇರವಾಗಿ ಅಯ್ಯಪ್ಪನ ದರ್ಶನ ಮಾಡುತ್ತೇನೆ. ಮುಂದೆ ಮಸೀದಿಗೆ ಭೇಟಿ ಕೊಡುವ ವಿಚಾರದಲ್ಲಿ ಚಿಂತನೆ ನಡೆಯಬೇಕು, ಬದಲಾವಣೆ ತರಬೇಕು ಎನ್ನುವುದು ಧರ್ಮದರ್ಶಿ ತಾರನಾಥ ಶೆಟ್ಟಿ ಬೋಳಾರ್ ಅಭಿಪ್ರಾಯ. ಒಂದು ವೇಳೆ ವಾವರ ಮಸೀದಿ ಭೇಟಿ ಮಾಡುವುದು ಸರಿಯಲ್ಲ, ನಿಲ್ಲಿಸಿ ಎನ್ನುವ ಮಾತಿಗೆ ಬೆಲೆ ಸಿಕ್ಕರೆ ಮುಂದಿನ ದಿನಗಳಲ್ಲಿ ಬೊಬ್ಬರ್ಯ ದೈವಕ್ಕೆ (ಮುಸ್ಲಿಮ್ ಮೂಲ) ಅಗೇಲ್ ಹಾಕುವುದನ್ನು ನಿಲ್ಲಿಸಬೇಕು ಎಂಬ ಫರ್ಮಾನು ಬರಬಹುದು. ಬಪ್ಪನಾಡು ಕ್ಷೇತ್ರ ಮಹಾತ್ಮೆಯಲ್ಲಿ ಬಪ್ಪ ಬ್ಯಾರಿ ಪಾತ್ರವನ್ನು ಕೈ ಬಿಡಬೇಕು ಎಂಬ ಕರೆ ಕೊಡಬಹುದು. ಆಗ ಏನು ಮಾಡುವುದು ಎಂಬ ಪ್ರಶ್ನೆಗಳು ಏಳತೊಡಗಿವೆ. ಅದೇ ರೀತಿ ಗುರು ಸ್ವಾಮಿ ಹೇಳಿದ ಪರಂಪರೆಯನ್ನು ಯಾರೋ ಹೇಳಿದರು ಎಂದ ಮಾತ್ರಕ್ಕೆ ನಿರಾಕರಿಸಲು ಸಾಧ್ಯವೇ? ಎಲ್ಲರೂ ನಿಷಾಧ ಹೇರುತ್ತಲೇ ಹೋದರೆ ಹಿಂದೂ ಆಚರಣೆ ಗತಿ ಏನು ಎಂಬ ಅಕ್ಷೇಪಗಳೂ ಬಲವಾಗಿ ಕೇಳಿ ಬರುತ್ತಿವೆ.

ಇದಕ್ಕೂ ಪರಿಹಾರ ಇದೆ. ಹಿಂದೂ ಧರ್ಮದ ಆಚರಣೆಗಳು ಹಿಂದೂ ಧರ್ಮ, ಸಂಸ್ಕೃತಿಗೆ ಪೂರಕವಾಗಿಯೇ ಇರಬೇಕು. ಬೊಬ್ಬರ್ಯನಿಗೆ ಅಗೇಲ್ ಹಾಕುತ್ತಾರೆಯೇ ವಿನಃ ಮಸೀದಿಯೋ, ದರ್ಗಾವನ್ನು ನಿರ್ಮಿಸುವುದಿಲ್ಲ. ಬೊಬ್ಬರ್ಯನಿಗೆ ಹೆಚ್ಚೆಂದರೆ ದೈವದ ಗುಡಿ ಕಟ್ಟಬಹುದೇ ವಿನಃ. ಪಳ್ಳಿ ನಿರ್ಮಿಸಿ ನಮಾಜ್ ಮಾಡುವುದಿಲ್ಲ. ಹಾಗೆ ಮಾಡಿದರೆ ಬೊಬ್ಬರ್ಯನ ವಿಚಾರದಲ್ಲಿಯೂ ಚರ್ಚೆ ನಡೆಯಬಹುದು.
ಬಪ್ಪ ಬ್ಯಾರಿ ಪಾತ್ರದ ವಿಚಾರದಲ್ಲಿಯೂ ಚರ್ಚೆ ಶುರುವಾಗಿದೆ. ಇದು ಸೌಹಾರ್ದ ಮತ್ತು ಶಾಂತಿ ಸ್ಥಾಪನೆ ವಿಷಯದಡಿ ಬರುತ್ತದೆ. ಹಿಂದೊಮ್ಮೆ ಬಜಪೆ ಶಾರದೋತ್ಸವದಲ್ಲಿ ಬಪ್ಪ ಬ್ಯಾರಿಯು ದೇವಿಗೆ ನಮಸ್ಕರಿಸುವ ಪ್ರತಿಕೃತಿ ಇದ್ದ ಟ್ಯಾಬ್ಲೋ ನಿರ್ಮಿಸಿದ್ದಕ್ಕೆ ಮಂಗಳೂರೇ ಹೊತ್ತಿ ಉರಿದಿತ್ತು. ಕಂಡ ಕಂಡಲ್ಲಿ ಗುಂಡು, ಸಾವು ನೋವುಗಳು ಸಂಭವಿಸಿತ್ತು. ದೇವಿ ಟ್ಯಾಬ್ಲೊ ರಸ್ತೆಯಲ್ಲಿ ಅನಾಥವಾಗಿ ಕೆಲ ದಿನ ನಿಂತಿತ್ತು.
ಹೀಗೆ ಇನ್ನೊಂದು ಧರ್ಮದವರಿಗೆ ನೋವು ಆಗುವುದಾದರೆ ಸಮಾಜದ ಶಾಂತಿ ಕದಡುವುದಾದರೆ ಬಪ್ಪ ಬ್ಯಾರಿಯನ್ನು ಬಪ್ಪ ಸಾಹುಕಾರ್ ಮಾಡಿ ವೇದಲ್ಲಿಯೂ ಕೊಂಚ ಬದಲಾವಣೆ ಮಾಡಿ ಆಟ ಪ್ರದರ್ಶಿಸಬಹುದು ಎನ್ನುವ ಅಭಿಪ್ರಾಯ ಹಿರಿಯ ಕಲಾವಿದರಿಂದಲೂ ಬರುತ್ತಿದೆ.

ಇಲ್ಲಿಯೂ ಬಪ್ಪನ ಆಚರಣೆ ಹಿಂದೂ ಸಂಸ್ಕೃತಿಗೆ ಪೂರಕವಾಗಿಯೇ ಹಿಂದೂ ಆರಾಧನಾ ಪದ್ಧತಿಗೆ ಅನುಗುಣವಾಗಿಯೇ ಇರುವುದರಿಂದ ಸ್ವಾಮೀಜಿಗಳು ಇದಕ್ಕೆ ಆಕ್ಷೇಪ ಎತ್ತಿಲ್ಲ. ಬಪ್ಪ ಬ್ಯಾರಿಗೆ ಮಸೀದಿ ನಿರ್ಮಾಣಕ್ಕೆ ಹಿಂದುಗಳು ಹೊರಟರೆ ಸ್ವಾಮೀಜಿಗಳು, ಧರ್ಮದರ್ಶಿಗಳು, ಉದ್ಯಮಿಗಳು ಆಕ್ಷೇಪ ಮಾಡಬಹುದೋ ಏನೋ? ಏರಿಮಲೆಯ ಮಸೀದಿ ಇರಬಹುದು, ಇತ್ತೀಚೆಗೆ ಶಬರಿಮಲೆ ಕ್ಷೇತ್ರದಲ್ಲಿಯೇ ನಿರ್ಮಾಣವಾಗಿರುವ 10*10 ಅಡಿ ಜಾಗದ ತಾತ್ಕಾಲಿಕ ಗುಡಿ ಇರಬಹುದು. ಇದು ಸೌಹಾರ್ದ ಕ್ಷೇತ್ರ ಎಂದು ಪರಿಗಣಿಸಬಹುದಲ್ಲವೇ ಎಂದು ಬುದ್ಧಿಜೀವಿಗಳು ಪ್ರಗತಿಪರರು, ತಿಳಿವಳಿಕೆ ಇಲ್ಲದ ಕೆಲವು ಹಿಂದೂ ಭಕ್ತರೂ ವಾದಿಸುತ್ತಿದ್ದಾರೆ.
ಸೌಹಾರ್ದ ಎನ್ನುವುದನ್ನು ಹಿಂದುಗಳು ಮಸೀದಿಗೆ ಪ್ರದಕ್ಷಿಣೆ ಹಾಕಿಯೋ, ಮಸೀದಿ ಒಳಗೆ ದೇವರ ಪೂಜೆ ಮಾಡಿಯೋ, ಮುಸ್ಲಿಮರು ದೇವಸ್ಥಾನದ ಒಳಗೆ ಬಂದು ನಮಾಜ್ ಮಾಡಿಯೋ ತೋರಿಸಬೇಕಿಲ್ಲ. ಕಷ್ಟ ಕಾಲದಲ್ಲಿ ಪರಸ್ಪರ ನೆರವಾಗುವ ಮೂಲಕ, ರಕ್ತದಾನದಿಂದ ಜೀವದಾನ ಮಾಡುವ ಮೂಲಕ, ಅಪಘಾತ ಸಂದರ್ಭ ತಕ್ಷಣ ರಕ್ಷಿಸುವ ಮೂಲಕ ಮಾಡಬಹುದು. ಮಾಡುತ್ತಿರುವುದರಿಂದಲೇ ಈ ನಾಡು ಸೌಹಾರ್ದ ನೆಲೆವೀಡಾಗಿದೆ. ಇದನ್ನು ಇನ್ನು ಹೆಚ್ಚಿಸುವ ಮೂಲಕ ಮಾನವೀಯತೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಬುದು.

ಪುಣ್ಯಕ್ಷೇತ್ರಗಳ ಬಳಿ ವಿನಾಕಾರಣ ಇಂಥ ಅನ್ಯಧರ್ಮೀಯ ಆಚರಣೆಗಳನ್ನು ದೇವಸ್ವ ಮಂಡಳಿಯೇ ತುರುಕುವ ಮೂಲಕ ಹಿಂದೂ ಸಂಪ್ರದಾಯ ನಂಬಿಕೆಗಳಿಗೆ ಘಾಸಿ ಮಾಡುತ್ತಿವೆ. ಬೇಲಿ ಹೊಲ ಮೇಯ್ದ ಹಾಗೆ ಕೇರಳ ಸರಕಾರ ಅನಿಷ್ಟಗಳನ್ನು ತುರುಕುವ ಕೆಲಸ ಮಾಡುತ್ತಿದೆ. ಮಸೀದಿಯ ಬಳಿ ಪ್ರದಕ್ಷಿಣೆ ಹಾಕವುದು, ಹಿಂದೂ ಆರಾಧನೆ ಪದ್ಧತಿ ಆಚರಿಸುವುದು ಮುಂದೊಂದು ದಿನ ಕಲಹ, ಘರ್ಷಣೆಗೂ ಕಾರಣ ಆಗಬಹುದು. ಅದೇ ರೀತಿ ಶಬರಿಮಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣಗೊಂಡ ತಾತ್ಕಾಲಿಕ ವಾವರ ಟೆಂಟ್! ಮುಂದೆ ಮಸೀದಿಯೂ ಆಗಬಹುದು. ಮತ್ತಷ್ಟು ವಿವಾದಗಳಿಗೆ ಕಾರಣವಾಗಬಹುದು. ವಾವರ ವಂಶಜರು ಎಂದು ಹೇಳಿಕೊಳ್ಳುವವರು ಟೆಂಟ್ ಸಾಕ್ಷಿ ತೋರಿಸಿ ಪುಣ್ಯಕ್ಷೇತ್ರವನ್ನೇ ವಕ್ಫ್‌ಗೆ ಸೇರಿದ್ದು ಹೇಳಿದರೂ ಅಚ್ಚರಿ ಇಲ್ಲ. ಈಗಿನ ವಕ್ಫ್ ಕಾನೂನು( ತಿದ್ದುಪಡಿ ಆಗದ) ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಸಮಾಜದ ಶಾಂತಿ, ಸೌಹಾರ್ದಕ್ಕೆ ಭಂಗ ತರಬಹುದಾದ ವಿಚಾರಗಳನ್ನು ಮತ್ತು ಹಿಂದೂ ಆಚರಣೆ ಒಳಗಡೆ ಇರದ ಇತ್ತೀಚೆಗೆ ಬಂದ ರೂಢಿಯನ್ನು ಕೈ ಬಿಡುವುದು ಎಲ್ಲರಿಗೂ ಕ್ಷೇಮ.

Exit mobile version