Site icon Suddi Belthangady

ಅಳದಂಗಡಿ: ಸೋಮನಾಥೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ – ಧಾರ್ಮಿಕ ಸಭೆಯಲ್ಲಿ ಡಾ. ಹೆಗ್ಗಡೆ

ಅಳದಂಗಡಿ: ದೇವತಾಕಾರ್ಯ, ಉತ್ಸವ, ಅನ್ನದಾಸೋಹದಿಂದ ಭಕ್ತರು ತೃಪ್ತಿಯಾದರೆ ದೇವರೂ ಸಂತೃಪ್ತಿ ಹೊಂದಿದಂತೆ. ಭಕ್ತಿ, ಶ್ರದ್ಧೆ, ಏಕಾಗ್ರತೆ, ನಿಷ್ಠೆ ಮುಖ್ಯ ಎಂದು ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಶ್ರೀ ಸೋಮನಾಥೇಶ್ವರೀ ದೇವಿಗೆ ನಡೆಯುತ್ತಿರುವ ಅಷ್ಟಬಂಧ-ಬಹ್ಮಕಲಶೋತ್ಸವದ 3 ನೇ ದಿನ ಜ. 10 ರಂದು ಭೇಟಿ ನೀಡಿ, ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವದಿಸಿದರು.

ದೋಷಗಳನ್ನು ಪರಿಹರಿಸುವುದಕ್ಕೊಸ್ಕರ ಬ್ರಹ್ಮಕಲಶದಂತಹ ವಿಧಾನಗಳನ್ನು ನಡೆಸಲಾಗುತ್ತದೆ. ಉತ್ತರಪ್ರದೇಶದ ಪ್ರಯಾಗದಲ್ಲಿ ಕುಂಭ ಮೇಳ ಸಂಪನ್ನಗೊಳ್ಳಲಿದೆ. ಅದೇ ರೀತಿ ಅಳದಂಗಡಿಯಲ್ಲಿನ ಶ್ರೀ ಸೋಮನಾಥೇಶ್ವರೀ ದೇವಿಯು ಕುಂಭ ರೂಪದಲ್ಲಿದ್ದಾಳೆ. ಇದೊಂದು ಸುಯೋಗ. ದೇವಾಲಯದೊಳಗಿನ ಹಾಗೂ ನಮ್ಮೊಳಗಿನ ಓಜಸ್ಸು, ತೇಜಸ್ಸು ಪರಿಪಕ್ವವಾಗಲು ವಿಶೇಷ ಪ್ರಯತ್ನ ಇದಾಗಿದೆ. ದೇವರಿಗೆ ಕಿಂಚಿತ್ ಕೊಟ್ಟವನೂ ಪ್ರಿಯನಾಗುತ್ತಾನೆ.

ಉತ್ಸವಾದಿಗಳಿಂದ ಭಕ್ತರು ಸಂತೋಷಗೊಂಡರೆ ದೇವರು ಸಂತೃಪ್ತಿಗೊಂಡಂತೆ ಎಂದ ಡಿ. ಹೆಗ್ಗಡೆ ಪುರೋಹಿತರು ದೇವಾಲಯದೊಳಗೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ರಾಜ್ಯದ 16,000 ಕ್ಕೂ ಹೆಚ್ಚು ದೇವಾಲಯಗಳ ಹೊರಗೆ ಸ್ವಚ್ಛತಾ ಕಾರ್ಯವನ್ನು ನೆರವೇರಿಸುತ್ತಿರುವುದನ್ನು ಶ್ಲಾಘಿಸಿದರು.

ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಅನುವಂಶಿಕ ಆಡಳಿತ ಮೊಕ್ತೇಸರ ಮತ್ತು ತಿಮ್ಮಣ್ಣರಸ ಪದ್ಮಪ್ರಸಾದ ಅಜಿಲ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ವೇದಿಕೆಯಲ್ಲಿದ್ದರು. ಫದಾನಿಗಳಾದ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಎಕ್ಷಲ್ ಕಾಲೇಜು ಅಧ್ಯಕ್ಷ ಸುಮಂತ ಕುಮಾರ್ ಜೈನ್, ಉದ್ಯಮಿ ಪ್ರವೀಣ ಕುಮಾರ್ ಇಂದ್ರ, ಶಶಿಧರ ಡೋಂಗ್ರೇ, ಜಯದೀಪ್ ದೇವಾಡಿಗ, ಪ್ರಶಾಂತ ಪಾರೆಂಕಿ, ಲಿಂಬಯ ದೇವಾಡಿಗ, ದೇವೇಂದ್ರ ಹೆಗ್ಡೆ ಕೊಕ್ರಾಡಿ ಹಾಗೂ ಅಜಿಲ ನಡಾವಳಿ ಎಂಬ ಪುಸ್ತಕ ಬರೆದ ಮುಂಜುನಾಥ ಭಟ್ ಅಂತರರನ್ನು ಸಮ್ಮಾನಿಸಿದರು.

ದೇವಳದ ವತಿಯಿಂದ ಹಾಗೂ ಎಸ್. ಕೆ. ಡಿ. ಆರ್. ಡಿ. ಪಿ. ಅಳದಂಗಡಿ ವಲಯದ ವತಿಯಿಂದ ಹೆಗ್ಗಡೆಯವರನ್ನು ಗೌರವಿಸಲಾಯಿತು. ಸಮಿತಿ ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ರಾತ್ರಿ ಕೃಷ್ಣ ಮೆಲೋಡಿಸ್ ಸವಣಾಲುರವರಿಂದ ರಸಮಂಜರಿ ಹಾಗೂ ವೇಣೂರಿನ ಐಸಿರಿ ಕಲಾವಿದರಿಂದ ನಾಟಕ ಪ್ರದರ್ಶನ ನಡೆಯಿತು.

ಬೆಳಿಗ್ಗೆ ದೇವಳದೊಳಗೆ ಶಾಂತಿ ಹೋಮಗಳು, ಕಲಶಾಭೀಷೇಕ, ಅಷ್ಟಬಂಧ ಪ್ರಕ್ರಿಯೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಮಂಟಪ ಸಂಸ್ಕಾರ, ಮಂಡಲ ರಚನೆ, ಬಲಿ ಬಿಂಭಾಧಿವಾಸ, ಅಧಿವಾಸ ಹೋಮ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು.

ಬ್ರಹ್ಮಕಲಶ: ದೇವಳದೊಳಗೆ ಬೆಳಿಗ್ಗೆ ಪುಣ್ಯಾಹ, ಗಣಪತಿ ಹೋಮ, ದುರ್ಗಾಹೋಮ, ಪೂರ್ವಾಹ್ನ 9.02 ರ ಕುಂಭ ಲಗ್ನ ಸುಮಹೂರ್ತದಲ್ಲಿ ದ್ರವ್ಯಮಿಳಿತ ಬ್ರಹ್ಮಕುಂಭಾಭಿಷೇಕ, ಮಹಾನ್ಯಾಸ, ಪ್ರಸನ್ನ ಪೂಜೆ, ಅವಸ್ರುತ ಬಲಿ, ಮಹಾಪೂಜೆ ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ಸಂಜೆ ಶ್ರೀ ದೇವರ ಉತ್ಸವ ಸಂಪನ್ನಗೊಳ್ಳಲಿದೆ. ಪ್ರಧಾನ ಸಂಚಾಲಕ ಶಿವಪ್ರಸಾದ ಅಜಿಲ ವಂದಿಸಿದರು

Exit mobile version