Site icon Suddi Belthangady

ತಾಲೂಕು ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆಯ ಸಭೆ – ಪ್ರಾಮಾಣಿಕ ಜನಸೇವೆಗಾಗಿ ಸಹಕಾರ ಸಂಘಗಳು ಕಟಿಬದ್ಧರಾಗಬೇಕು

ಬೆಳ್ತಂಗಡಿ: ತಾಲೂಕಿನ ಕ್ರೆಡಿಟ್, ವಿವಿಧೋದ್ಧೇಶ, ಮಹಿಳಾ ಹಾಗೂ ಇತರ ಸಹಕಾರ ಸಂಘಗಳ ಅಭಿವೃದ್ದಿಯ ಉದ್ದೇಶವನ್ನು ಇಟ್ಟುಕೊಂಡು, ಸದಸ್ಯರಿಗೆ ಪ್ರಾಮಾಣಿಕ ಸೇವೆಗಳನ್ನು ನೀಡುವ ಬಗ್ಗೆ, ಇತ್ತೀಚಿಗೆ ನಡೆಯುತ್ತಿರುವ ಅಪಪ್ರಚಾರ ಮತ್ತು ಅವ್ಯವಹಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ನೀತಿ ನಿಯಮಗಳನ್ನು ರೂಪಿಸುವ ಹಾಗೂ ಸಹಕಾರ ಸಂಘಕ್ಕೆ ಮಾರಕವಾಗುವ ಸರಕಾರದ ನೀತಿ ನಿಯಮಗಳ ಬಗ್ಗೆ ಒಟ್ಟಾಗಿ ಕಾನೂನು ಹೋರಾಟ ಮಾಡುವ ಮೂಲ ಉದ್ದೇಶವನ್ನಿಟ್ಟುಕೊಂಡು ಬೆಳ್ತಂಗಡಿ ತಾಲೂಕಿನ ಕ್ರೆಡಿಟ್, ವಿವಿಧೋದ್ಧೇಶ, ಮಹಿಳಾ ಹಾಗೂ ಇತರ ಸಹಕಾರ ಸಂಘಗಳ ಒಟ್ಟುಗೂಡುವಿಕೆಯಲ್ಲಿ ಭವಿಷ್ಯದಲ್ಲಿ ಭದ್ರ ಸಹಕಾರ ಸಂಘದ ಬೆಳವಣಿಗೆಗ ಪೂರಕವಾದ ನಿಯಮಗಳನ್ನು ಜಾರಿಗೊಳಿಸಬೇಕೆನ್ನುವ ಸದುದ್ದೇಶವನ್ನು ಇಟ್ಟುಕೊಂಡು ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಸಭೆ ಜ. 10 ರಂದು ವಿವಿಧೋದ್ದೇಶ ಸಹಕಾರರಂದು ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಸ್. ಜಯರಾಮ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಉಪಸ್ಥಿತಿಯಲ್ಲಿ ನಡೆಯಿತು.

ಎಸ್. ಜಯರಾಮ್ ಶೆಟ್ಟಿ ಮಾತನಾಡಿ ಸಹಕಾರ ಸಂಘಕ್ಕೆ ಅಪಕೀರ್ತಿ ಬರದ ರೀತಿಯಲ್ಲಿ ಅಧ್ಯಕ್ಷರುಗಳು ಮತ್ತು ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಜವಬ್ದಾರಿಯುತವಾಗಿ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು. ಸಹಕಾರಿಗಳ ನಡುವೆ ಸಹಕಾರ ಅತ್ಯುತ್ತಮವಾಗಿದ್ದಲ್ಲಿ ಸಂಘದ ಬೆಳವಣಿಗೆಗೆ ಪೂರಕ ವಾತಾವರಣವನ್ನು ಸೃಷ್ಟಿಮಾಡಲು ಸಾಧ್ಯವಾಗುತ್ತದೆ.

ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗದೇ ಸಂಘದ ಹಿತದೃಷ್ಟಿಯಿಂದ ಅತ್ಯುತ್ತಮವಾದ ನಿರ್ಧಾರಗಳನ್ನು ಆಡಳಿತ ಮಂಡಳಿಯು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಹಿತರಕ್ಷಣಾ ವೇದಿಕೆಯ ಉಪಾಧ್ಯಾಕ್ಷ ಜಯಕೀರ್ತಿಜೈನ್ ಮಾತನಾಡಿ ನಕಲಿ ಚಿನ್ನಾಭರಣಗಳ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಸೂಕ್ತ ನಿಯಮಾವಳಿಗಳನ್ನು ಜಾರಿಗೊಳಿಸುವ ಬಗ್ಗೆ ಮಾಹಿತಿಗಳನ್ನು ನೀಡಿದರು. ತಾಲೂಕಿನ ಇತರ ಸಹಕಾರ ಸಂಘಗಳನ್ನು ಸದಸ್ಯರನ್ನಾಗಿ ಸೇರಿಸುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಸರಕಾರದ ನಿಯಮಾವಳಿಗಳು ಹಾಗೂ ಇತ್ತೀಚಿಗೆ ಕೆಲವೊಂದು ಸಹಕಾರ ಸಂಘಗಳಲ್ಲಿ ಅವ್ಯವಹಾರಗಳು ಬೆಳಕಿಗೆ ಬರುತ್ತಿದ್ದು ಈ ಬಗ್ಗೆ ವಹಿಸಬೇಕಾದ ಸೂಕ್ತ ಎಚ್ಚರಿಕೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವಿಶೇಷಾಧಿಕಾರಿ ಯಂ. ಮೋನಪ್ಪ ಪೂಜಾರಿ ಕಂಡೆತ್ಯಾರು ಮಾತನಾಡಿ ಅವ್ಯವಹಾರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಂಘದ ಸದಸ್ಯರಿಗೆ ಪ್ರಾಮಾಣಿಕ ಸೇವೆಯೊಂದಿಗೆ ಉತ್ತಮ ಗುಣಮಟ್ಟದ ಲೆಕ್ಕಪರಿಶೋಧನೆ ಹಾಗೂ ಆಂತರಿಕ ಲೆಕ್ಕ ಪರಿಶೋಧನೆಯ ಬಗ್ಗೆ ಸಭೆಯ ಗಮನಸೆಳೆದರು.

ಸಭೆಯಲ್ಲಿ ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್, ಗೌರವ ಸಲಹೆಗಾರ ಕ್ಯಾಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಹೆನ್ರಿ ಲೋಬೋ, ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್, ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವಿಶೇಷಾಧಿಕಾರಿ ಯಂ. ಮೋನಪ್ಪ ಪೂಜಾರಿ ಕಂಡೆತ್ಯಾರು, ಸದಸ್ಯ ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎ. ಜೆ., ವರ್ತಕ ಬಂದು ಸಹಕಾರ ಸಂಘ ಮಡಂತ್ಯಾರು ಇದರ ನಿರ್ದೇಶಕ ತುಳಸಿ ದಾಸ್ ಪೈ, ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ, ಹಿತರಕ್ಷಣಾ ವೇದಿಕೆಯ ಜೊತೆ ಕಾರ್ಯದರ್ಶಿ ಸುಜಯ್ ಶೆಟ್ಟಿ, ವಿಕಾಸ ವಿವಿಧೋದ್ದೇಶ ಸಹಕಾರ ಸಂಘ, ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘ, ನಾಗರಿಕ ವಿವಿಧೋದ್ಧೇಶ ಸಹಕಾರ ಸಂಘ, ಜನಾರ್ಧನಸ್ವಾಮಿ ಕ್ರಡಿಟ್ ಕೋ-ಆಪರೇಟಿವ್ ಸೊಸೈಟಿ, ವರ್ತಕರ ಸಹಕಾರ ಸಂಘ ಮಡಂತ್ಯಾರು, ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ, ಟೈಲರ್ಸ್ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Exit mobile version