Site icon Suddi Belthangady

ಜೆ. ಸಿ. ಐ ಬೆಳ್ತಂಗಡಿ ಮಂಜುಶ್ರೀಯ ನೂತನ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಮತ್ತು ತಂಡದ ಪದಪ್ರದಾನ ಸಮಾರಂಭ

ಬೆಳ್ತಂಗಡಿ: ಜೆ. ಸಿ. ಐ ಮಂಜುಶ್ರೀಯ ಪದ ಪ್ರಧಾನ ಸಮಾರಂಭ ಜ. 6 ರಂದು ಜೆ.ಸಿ ಭವನ ಬೆಳ್ತಂಗಡಿಯಲ್ಲಿ ನಡೆಯಿತು. ಸಭಾಧ್ಯಕ್ಷತೆ ವಹಿಸಿಕೊಂಡಿದ್ದ 2024 ರ ಅಧ್ಯಕ್ಷ ಜೆ. ಸಿ ರಂಜಿತ್ ಎಚ್. ಡಿ. ಅವರು ತನ್ನ ವರ್ಷದ ವರದಿಯನ್ನು ಮಂಡಿಸಿ ತನ್ನ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ಪೂರ್ವ ಅಧ್ಯಕ್ಷರು ಹಾಗೂ ಸದಸ್ಯರು, ಜೇಸಿಯೇತರ ಬಂಧುಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

2023ರ ಅಧ್ಯಕ್ಷ 2024ರಲ್ಲಿ ನಿಕಟ ಪೂರ್ವಅಧ್ಯಕ್ಷರಾಗಿ ಜೆ. ಸಿ ಶಂಕರ್ ರಾವ್ ಘಟಕಕ್ಕೆ ನೀಡಿದ ಸಹಕಾರ ಮತ್ತು ವಲಯದ ಉಪಾಧ್ಯಕ್ಷರಾಗಿ ವಲಯದಲ್ಲಿ ನಡೆಸಿರುವ ಕಾರ್ಯಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನು ತಿಳಿಸಿದ ಪೂರ್ವಧ್ಯಕ್ಷ ಜೆ. ಸಿ ಕಿರಣ್ ಕುಮಾರ್ ಶೆಟ್ಟಿ ಪೂರ್ವಧ್ಯಕ್ಷರ ಸಾಲಿಗೆ ಸೇರಿಸಿಕೊಂಡರು.

ನಂತರ ಗಣ್ಯರು ಮತ್ತು ಜೇಸಿ, ಜೇಸಿಯೇತರರ ಸಮ್ಮುಖದಲ್ಲಿ ಮುಂದಿನ ಚುನಾಯಿತ ಅಧ್ಯಕ್ಷರಾದಂತಹ ಜೆಸಿ ಆಶಾಲತಾ ಪ್ರಶಾಂತ್ ಇವರಿಗೆ ಪ್ರಮಾಣವಚನ ಬೋಧಿಸಿ ಕಾಲರ್ ಮತ್ತು ಅಧಿಕಾರ ದಂಡ ‘ಗ್ಯಾವೆಲ್’ ನೀಡುವ ಮುಖಾಂತರ ಅಧಿಕಾರ ಹಸ್ತಾಂತರಿಸಿದರು.

ಸಭೆಯ ದ್ವಿತೀಯಾರ್ಧ ಭಾಗದ ಸಭಾಧ್ಯಕ್ಷತೆ ವಹಿಸಿದ ಆಶಾಲತಾ ಪ್ರಶಾಂತ್ ಸಭೆಯನ್ನು ಉದ್ದೇಶಿಸಿ, ತನ್ನ ಬೆಳವಣಿಗೆಗೆ ಸಹಕರಿಸಿದ ಪೂರ್ವ ಅಧ್ಯಕ್ಷರು ಸದಸ್ಯರನ್ನು ಸ್ಮರಿಸಿ ಧನ್ಯವಾದ ಸಲ್ಲಿಸಿದರು. ಅದೇ ರೀತಿ ಈ ವರ್ಷ ಘಟಕದಲ್ಲಿ ಮತ್ತು ಬೆಳ್ತಂಗಡಿ ಪರಿಸರದಲ್ಲಿ ನಡೆಸಬೇಕೆಂದುಕೊಂಡ ವ್ಯಕ್ತಿತ್ವ ವಿಕಸನ ಹಾಗೂ ಸಮಾಜಮುಖಿ ಕಾರ್ಯ ಚಟುವಟಿಕೆಗಳ ಕ್ರಿಯಾಯೋಜನೆಯನ್ನು ಸಭೆಯ ಮುಂದೆ ಪ್ರಸ್ತುತಪಡಿಸಿದರು. ಯಾವುದೇ ಸ್ಥಾನಮಾನಗಳು ಸುಮ್ಮನೆ ಕುಳಿತರೆ ಸಿಗುವುದಿಲ್ಲ, ಯಾರು ಕರೆದು ಕೊಡುವುದಿಲ್ಲ, ತನ್ನನ್ನು ತಾನು ತೊಡಗಿಸಿಕೊಂಡಾಗ ಮಾತ್ರ ಆ ಸ್ಥಾನಮಾನ ನಮಗೆ ದೊರಕುವುದು. ನಾನು ಕೂಡ ಒಬ್ಬಳೇ ಮಹಿಳೆ ಎಂದು ಮುಜುಗರ ಪಟ್ಟಿದ್ದರೆ ಈ ಹಂತಕ್ಕೆ ತಲುಪುವ ಮಾತೇ ಇರಲಿಲ್ಲ. ನನ್ನ ಕೊಡಗು ತೊಡಗಿಸುವಿಕೆ ಈ ಹಂತಕ್ಕೆ ತಂದು ನಿಲ್ಲಿಸಿದೆ ಅದೇ ರೀತಿ ತನಗೆ ಸಹಕರಿಸುತ್ತಿರುವ ಪತಿ ಹಾಗೂ ಕುಟುಂಬದವರನ್ನು ಸ್ಮರಿಸಿದರು. ಘಟಕ ಆಡಳಿತ ಮಂಡಳಿಯ 20 ಜನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಲಯ ಅಧ್ಯಕ್ಷ ಜೆ. ಸಿ ಅಭಿಲಾಶ್ ಬಿ. ಎ ನೂತನ 4 ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

2025 ರ ಹೊಸ ಜೆ. ಸಿ ವರ್ಷವನ್ನು ಪೂರ್ವಾಧ್ಯಕ್ಷರುಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿದ್ದ ಮುಖ್ಯ ಅತಿಥಿಗಳು ಮುಂದಿನ ವರ್ಷದ ಕ್ರಿಯಾಯೋಜನೆಯನ್ನು ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಲಯ ಅಧ್ಯಕ್ಷ ಜೆ. ಸಿ ಅಭಿಲಾಶ್ ಬಿ.ಎ. ಅವರು ಜೆ. ಸಿ. ಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷರು ಸದಸ್ಯರ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿ, ಶಿಸ್ತಿನ ಘಟಕ ಬೆಳ್ತಂಗಡಿ ಆಗಿದ್ದು ಈ ವರ್ಷ ವಲಯದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಒಬ್ಬ ಮಹಿಳಾ ಅಧ್ಯಕ್ಷರಾಗಿ ತನ್ನ ಸೃಜನಶೀಲತೆಯಿಂದ ಸದಸ್ಯರೆಲ್ಲರ ಮನ ಗೆದ್ದು ಈ ಘಟಕದಲ್ಲಿ ಸಾಧನೆ ಮಾಡಲಿದ್ದಾರೆ ಎಂದು ಶುಭ ಹಾರೈಸಿದರು.

ಮುಖ್ಯ ಅಭ್ಯಾಗತರಾಗಿ ಆಗಮಿಸಿರುವಂತಹ ಜೆ.ಸಿ.ಐ ಭಾರತದ ಫೌಂಡೇಶನ್ ಡೈರೆಕ್ಟರ್ ಅಲನ್ ರೋಹನ್ ವಾಜ್ ಘಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಬೆಳ್ತಂಗಡಿ ಘಟಕದ ನಾಮ ನಿರ್ದೇಶನದಂತೆ ಕಳೆದ ವರ್ಷ ಜೆ. ಸಿ. ಐ ಭಾರತದಿಂದ 1 ವರ್ಷದ ಸ್ಕಾಲರ್ ಶಿಪ್ ಗೆ ಆಯ್ಕೆಯಾದ ಬಳೆಂಜದ ವಿದ್ಯಾರ್ಥಿನಿ ಬಗ್ಗೆ ಪ್ರಸ್ತಾಪಿಸಿ ಜೆ.ಸಿ.ಐ ಭಾರತ ಅದೆಷ್ಟೋ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೆ. ಸಿ. ಐ ಫೌಂಡೇಶನ್ ನಿಂದ ವಿದ್ಯಾರ್ಥಿವೇತನ ದೊರಕುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಗೆ ದೊರಕುವಂತೆ ಮಾಡುವುದು ಈ ಘಟಕದ ಕರ್ತವ್ಯವಾಗಿದೆ.

ಮುಂದೆಯೂ ಈ ಘಟಕಕ್ಕೆ ಹೆಚ್ಚಿನ ವಿದ್ಯಾರ್ಥಿ ವೇತನ ಬರುವಲ್ಲಿ ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು. ಜೆ.ಸಿ.ಐ ಭಾರತದ ಆಡಳಿತ ಸಮಿತಿ ಸದಸ್ಯ ಎರ್ಮಾಳ್ ಸುಕುಮಾರ್ ಸಭೆಯನ್ನುದ್ದೇಶಿಸಿ ಜೆ.ಸಿ ಬೆಳ್ತಂಗಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಪೋಷಕರು ಮತ್ತು ಘಟಕದ ಪೂರ್ವ ಅಧ್ಯಕ್ಷರು ತಮ್ಮ ಮಕ್ಕಳನ್ನು ಜೆ.ಸಿ ಆಂದೋಲನಕ್ಕೆ ಕರೆತಂದಲ್ಲಿ ಮಕ್ಕಳಲ್ಲಿ ವಿಶೇಷ ನಾಯಕತ್ವ ಗುಣ ಅದಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಬಲ್ಲದು, ಜೊತೆಗೆ ಜೇಸಿ ಸಂಸ್ಥೆ ಕೂಡ ದೊಡ್ಡದಾಗಿ ಬೆಳೆಯಬಲ್ಲದು ಎಂದು ಅಭಿಪ್ರಾಯಪಟ್ಟರು. ಹಿಂದಿನ ಅಧ್ಯಕ್ಷರ ಸಾಧನೆ ಮತ್ತು ಮುಂಬರುವ ಅಧ್ಯಕ್ಷರ ಕ್ರಿಯಾ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ನೂತನ ತಂಡದ ಪದ ಪ್ರಧಾನ ಸಮಾರಂಭಕ್ಕೆ ಊರಿನ ಗಣ್ಯರು ನೆರೆಯ ಜೇಸಿ ಘಟಕದ ಬಂಧುಗಳು ಘಟಕದ ಪೂರ್ವ ಅಧ್ಯಕ್ಷರುಗಳು ಸದಸ್ಯರುಗಳು ಸಾಕ್ಷಿಯಾದರು.
ಜೆ. ಸಿ ಚಿದಾನಂದ ಇಡ್ಯಾ ವೇದಿಕೆ ಆಹ್ವಾನದೊಂದಿಗೆ ಜೆ. ಸಿ ದೀಕ್ಷಾ ಗಣೇಶ್ ಜೇಸಿ ವಾಣಿ ಉದ್ಘೋಷಿಸಿದರು. ಪದಾಧಿಕಾರಿಗಳಾದ ಚಂದ್ರಹಾಸ ಬಳಂಜ, ರಜತ್ ಮೂರ್ತಜೆ, ರಾಮಕೃಷ್ಣ ಶರ್ಮ, ಪೃಥ್ವಿರಾಜ್ ಜೈನ್ ಅತಿಥಿಗಳ ಪರಿಚಯ ವಾಚಿಸಿದರು. ಕಾರ್ಯದರ್ಶಿ ಜೇಸಿ ಶೈಲೇಶ್ ಕೆ. ಧನ್ಯವಾದ ಸಮರ್ಪಿಸಿದರು. ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಸಭೆಯನ್ನು ಭೋಜನಕೂಟಕ್ಕೆ ಮುಂದೂಡಿದರು.

Exit mobile version