Site icon Suddi Belthangady

ಹರೀಶ್ ಕುಮಾರ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷತೆಗೆ ರಾಜೀನಾಮೆ ನೀಡಿಲ್ಲ, ಯಾರೋ ಮಾಡುತ್ತಿರುವ ಪಿತೂರಿ – ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಾಯಕರು

ಬೆಳ್ತಂಗಡಿ: ದ. ಕ. ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ. ಹರೀಶ್‌ಕುಮಾರ್ ರಾಜಕೀಯ ನಿವೃತ್ತಿ ಘೋಷಿಸುತ್ತಾರೆ ಎಂಬ ಶೀರ್ಷಿಕೆಯನ್ನು ಹಾಕಿ ಯಾರೊ ಕಿಡಿಗೇಡಿಗಳು ಸುಳ್ಳು ಸುದ್ದಿಯನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವುದು ವಿಷಾದನಿಯ ಇದು ಸತ್ಯಕ್ಕೆ ದೂರವಾಗಿದ್ದು, ಯಾವುದೇ ರೀತಿಯಲ್ಲಿ ರಾಜಕೀಯ ನಿವೃತ್ತಿಯನ್ನು ಘೋಷಿಸಿಲ್ಲ. ಇದು ಯಾರೋ ಸ್ವ ಹಿಡಿತಕ್ಕಾಗಿ ಯಾರನ್ನೋ ಬಳಸಿಕೊಂಡು ಮಾಡುತ್ತಿರುವ ಪಿತ್ತೂರಿ ಇದನ್ನು ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸುತ್ತೇವೆ. ಈ ರೀತಿ ಸುಳ್ಳು ಸುದ್ದಿಯನ್ನು ಹರಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆ.ಪಿ.ಸಿ.ಸಿ ಸದಸ್ಯ ಕೇಶವ ಪಿ. ಬೆಳಾಲು ಹೇಳಿದರು.

ಅವರು ಜ. 8 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಕಾಂಗ್ರೆಸ್ ಅತ್ಯಂತ ನಿಷ್ಟಿಷ್ಟ ಸ್ಥಿತಿಗೆ ತಲುಪಿದಾಗ ಹರೀಶ್ ಕುಮಾರ್ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಮತ್ತೆ ಮೊದಲಿನಂತೆ ವಿಜೃಂಭಿಸಲು ಪಣತೊಟ್ಟವರು. ಪಕ್ಷದ ಕೆಲಸವನ್ನು ಚಾಚು ತಪ್ಪದೇ ಬಹಳ ನಿಷ್ಠೆಯಿಂದ ಮಾಡಿದವರು. ಪಕ್ಷ ವಹಿಸಿಕೊಟ್ಟಂತ ಎಲ್ಲ ಜವಾಬ್ದಾರಿಗಳನ್ನು ಪ್ರೀತಿಯಿಂದ ನಿಭಾಯಿಸಿ ಅದನ್ನು ಕರ್ತವ್ಯವೆಂದು ನಂಬಿ ಬದುಕಿದವರು.

1978 ರ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಇಂದಿರಾ ಗಾಂಧಿ ಸ್ಪರ್ಧಿಸಿದಾಗ ಜೀವ ಪಣಕ್ಕಿಟ್ಟು ಕೆಲಸ ಮಾಡಿದವರು, ಕಾಂಗ್ರೆಸ್ ಪಕ್ಷದ ನಿಷ್ಠವಂತ ಕಾರ್ಯಕರ್ತರಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಅವರ ಸೇವೆಯನ್ನು ಗುರುತಿಸಿ ಹೈ ಕಮಾಂಡ್ ಜಿಲ್ಲಾಧ್ಯಕ್ಷನಾಗಿ ನೇಮಿಸಿ 7 ವರ್ಷಗಳು ಕಳೆದಿವೆ.

ಜಿಲ್ಲೆಯಲ್ಲಿ ಕೂಡ ಪಕ್ಷ ನಿಷ್ಠೆಯಿಂದ ಕೆಲಸವನ್ನು ಮಾಡಿಕೊಂಡು ಬಂದವರು. ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿ ಈಗಾಗಲೇ 2 ವರ್ಷ ಕಳೆದಿದ್ದರು, ಅವರ ಸೇವೆಯನ್ನು ಗುರುತಿಸಿ ಪಕ್ಷದ ಹೈಕಮಾಂಡ್ ಇನ್ನೂ ಕೂಡ ಅವರನ್ನು ಅಧ್ಯಕ್ಷರಾಗಿ ಮುಂದುವರಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರವಾಗಿದೆ.

ಅಚಲ ಪಕ್ಷ ನಿಷ್ಠೆಯ ಕೆ. ಹರೀಶ್ ಕುಮಾರ್ ರವರ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಯಾರು ಈ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೋ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ ಸದಸ್ಯ ಮೋಹನ್ ಶೆಟ್ಟಿಗಾರ್, ಡಿ.ಸಿ.ಸಿ ಉಪಾಧ್ಯಕ್ಷ ಬಿ. ಎಂ.ಹಮೀದ್, ಕೆ. ಶೈಲೇಶ್ ಕುಮಾ‌ರ್ ಕುರ್ತೋಡಿ, ಬಿ. ಎ. ಹಮೀದ್ ಉಜಿರೆ, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ. ಜಗದೀಶ್, ಪ್ರವೀಣ್ ವಿ. ಜಿ ನಡ,
ಪ್ರಭಾಕರ್ ಶಾಂತಿಗೋಡ್, ಅಬ್ದುಲ್ ರಹಿಮಾನ್ ಪಡಿಪು, ಸಲೀಂ ಗುರುವಾಯನಕೆರೆ, ಅಭಿನಂದನ್ ಹರೀಶ್ ಕುಮಾರ್ ಉಪಸ್ಥಿತರಿದ್ದರು.

Exit mobile version