Site icon Suddi Belthangady

ಜ. 12: ಸಂಸ್ಕಾರ ಭಾರತಿ ವತಿಯಿಂದ ತಾಲೂಕಿನ ಸಾವಿರದ ಸಾಧನಕರು ಮನೆ ಮನದ ಸನ್ಮಾನಕ್ಕೆ ಚಾಲನೆ – ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಸಂಸ್ಕಾರ ಭಾರತೀ ಮಂಗಳೂರು, ಬೆಳ್ತಂಗಡಿ ತಾಲೂಕು ವತಿಯಿಂದ ತಾಲೂಕಿನ ಅಸಂಖ್ಯಾತ ಸಾಧಕರ ತವರೂರು. ವಿವಿಧ ಕ್ಷೇತ್ರಗಳಲ್ಲಿ ಮೌನಕ್ರಾಂತಿ ಸಾಧಿಸುತ್ತ, ಸದ್ದಿಲ್ಲದೇ ಸುದ್ದಿ ಮಾಡುತ್ತಿರುವ ಶ್ರೇಷ್ಠ ಸಾಧಕರ ಸಾವಿರದ ಸಾಧಕರು ಮನೆಮನದ ಸಮ್ಮಾನ ಕಾರ್ಯಕ್ರಮಕ್ಕೆ ಜ. 12 ರಂದು ಮುಂಡಾಜೆ ಪರಶುರಾಮ ದೇವಸ್ಥಾನದಲ್ಲಿ ಚಾಲನೆ ನೀಡಲಾಗುವುದು ಎಂದು ಸಂಸ್ಕಾರ ಭಾರತಿ ತಾಲೂಕು ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು.

ಅವರು ಜ. 8 ರಂದು ಸುವರ್ಣ ಆರ್ಕೆಡ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿ ಗ್ರಾಮದ ಸಾಧಕ ಬಂಧುಗಳ ಮನೆಗೆ ಭೇಟಿ ನೀಡಿ “ಬೆಳ್ತಂಗಡಿಯ ಬೆಳಕು ” ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಇದರ ಉದ್ಘಾಟನಾ ಸಮಾರಂಭ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಚಾಲನೆ ನೀಡಲಾಗುವುದು.

ರಾ. ಸ್ವ. ಸೇ. ಸಂಘದ ತಾಲೂಕು ಸಂಪರ್ಕ ಪ್ರಮುಖ್ ಶಿವಪ್ರಸಾದ್ ಸುರ್ಯ ಉದ್ಘಾಟಿಸಲಿದ್ದಾರೆ. ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಗೋಖಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮುಂದೆ ತಾಲೂಕಿನ 81 ಗ್ರಾಮಗಳಿಗೂ ಭೇಟಿ ನೀಡಿ ಸಾಧಕನ್ನು ಗುರುತಿಸಿ ಅವರ ಮನೆಗೆ ಭೇಟಿ ನೀಡಿ ಸನ್ಮಾನ ಮಾಡಲಾಗುವುದು. ಎಲ್ಲಾ ಗ್ರಾಮದ ಸಾಧಕರ ಸನ್ಮಾನ ನಡೆದ ನಂತರ ಬೆಳ್ತಂಗಡಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಈ ಸಂದರ್ಭದಲ್ಲಿ ಸನ್ಮಾನ ಗೈದ ಸಾಧಕರ ಪರಿಚಯವನ್ನು ಒಳಗೊಂಡ ಸಂಚಿಕೆ ಹೊರ ತರಲಾಗುವುದು ಎಂದು ಹೇಳಿದರು. ಪ್ರಥಮ ಬಾರಿಗೆ ಮುಂಡಾಜೆಯ 17 ಮಂದಿ ಸಾಧಕರಾದ ಮೇಜರ್ ಜನರಲ್ ಎಂ. ವಿ. ಭಟ್, ಯಮುನಾ, ಅಪ್ಪಿ ನಾಯ್ಕ, ಸೇಸಮ್ಮ, ಅಡೂರು ವೆಂಕಟ್ರಾಯ, ಬಾಬು ಗೌಡ, ವಿಜಯಮ್ಮ, ಶ್ರೀಧರ ಭೀಡೆ, ನೇಮು ಶೆಟ್ಟಿ, ಅನಂತ ಭಟ್ ಮಚ್ಚಿಮಲೆ, ಕೊರಗಪ್ಪ ನಾಯ್ಕ, ಚಂದ್ರ ಮೋಹನ್ ಮರಾಟೆ, ಅಗರಿ ರಾಮಣ್ಣ ಶೆಟ್ಟಿ, ಗಣೇಶ್ ಬಂಗೇರ, ಕಜೆ ವೆಂಕಟೇಶ್ ಭಟ್, ಸಚಿನ್ ಭೀಡೆ, ಕೀರ್ತನಾ ಕಲಾ ತಂಡ, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಇವರನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕಾರ್ಯದರ್ಶಿ ಅಶೋಕ್ ಗುಂಡ್ಯಡ್ಕ, ಕೊರಗಪ್ಪ ನಾಯ್ಕ ಮುಂಡಾಜೆ, ಕೀರ್ತನಾ ಕಲಾ ತಂಡದ ಸದಾನಂದ ಬಿ. ಮುಂಡಾಜೆ ಉಪಸ್ಥಿತರಿದ್ದರು.

Exit mobile version