ಉಜಿರೆ: ಮೂಳೆ ಸಾಂದ್ರತೆ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸಂಭವನೀಯ ಅಪಾಯವನ್ನು ತಡೆಗಟ್ಟಬಹುದು ಎಂದು ಉಜಿರೆ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ಡಾ. ಗೋಪಾಲಕೃಷ್ಣ ಬೆನಕ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರವನ್ನು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು. ಮೂಳೆ ಸಾಂದ್ರತೆ ಪರೀಕ್ಷೆಯನ್ನು ಮೂಳೆ ಖನಿಜಾಂಶ ಮತ್ತು ಸಾಂದ್ರತೆಯನ್ನು ಅಳೆಯಲು ಬಳಸಲಾಗುತ್ತದೆ.
ಮೂಳೆ ಸಾಂದ್ರತೆಯ ಪರೀಕ್ಷೆಯನ್ನು ಮುಖ್ಯವಾಗಿ ತೆಳುವಾದ, ದುರ್ಬಲ ಮೂಳೆಗಳು ಮತ್ತು ಕಡಿಮೆ ಮೂಳೆ ದ್ರವ್ಯರಾಶಿಯ ಸಮಸ್ಯೆಯನ್ನು ನೋಡಲು ಮಾಡಲಾಗುತ್ತದೆ. ಈ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಬೇಗ ಚಿಕಿತ್ಸೆ ನೀಡಬೇಕು. ಆರಂಭಿಕ ಚಿಕಿತ್ಸೆಯು ಮೂಳೆ ಮುರಿತಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಎಲುಬು ಮತ್ತು ಕೀಲು ಶಸ್ತ್ರಚಕಿತ್ಸಾ ತಜ್ಞ ಡಾ. ರೋಹಿತ್ ಜಿ. ಭಟ್ ತಿಳಿಸಿದರು.
ಡಾ. ಅಂಕಿತಾ ಜಿ. ಭಟ್ ಪ್ರಾರ್ಥಿಸಿ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್. ಜಿ. ಭಟ್ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ದೇವಸ್ಯ ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯ ಸಿಬ್ಭಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಈ ಶಿಬಿರದಲ್ಲಿ ಸುಮಾರು 120 ಜನ ಪಾಲ್ಗೊಂಡು ತಮ್ಮ ಮೂಳೆ ತಪಾಸಣೆ ಮಾಡಿಸಿಕೊಂಡು ಸೂಕ್ತ ಸಲಹೆ ಸೂಚನೆಗಳನ್ನು ಪಡೆದರು. ಡಾ. ಭಾರತಿ ಜಿ. ಕೆ ವಂದಿಸಿದರು.