Site icon Suddi Belthangady

ಜ. 14: ಬೆಳ್ತಂಗಡಿಯಲ್ಲಿ ಲಯನ್ಸ್ ಯಕ್ಷೋತ್ಸವ

ಬೆಳ್ತಂಗಡಿ: ಸಾರ್ಥಕ ಸೇವೆಯ 50 ಸಂವತ್ಸರಗಳನ್ನು ಪೂರೈಸಿ ಸುವರ್ಣ ಸಂಭ್ರಮವನ್ನು ಆಚರಿಸಿಕೊಂಡ ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಬೆಳ್ತಂಗಡಿ ತನ್ನ ಸೇವಾ ಚಟುವಟಿಕೆಯ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡು ಮುನ್ನಡೆಯುತ್ತಿದೆ. ಗತಕಾಲದಲ್ಲಿ ಅಳದಂಗಡಿ ಕಂಬಳೋತ್ಸವದ ಮೂಲಕ ಜನಸಾಮಾನ್ಯರ ಮನೆ ಮಾತಾಗಿದ್ದ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಖ್ಯಾತಿಯನ್ನು ಲಯನ್ಸ್ ಯಕ್ಷೋತ್ಸವದ ಮೂಲಕ ನೂತನ ಪಥದತ್ತ ಕೊಂಡೊಯ್ಯುವ ಹೆಜ್ಜೆಯನ್ನಿಟ್ಟಿದೆ.

ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್‌ನ ವತಿಯಿಂದ ಜ.14 ರಂದು ಲಯನ್ಸ್ ಯಕ್ಷೋತ್ಸವ ಕಾರ್ಯಕ್ರಮ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಧರ್ಮಸ್ಥಳ ಮೇಳದವರಿಂದ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಲಿದೆ ಎಂದು ಲಯನ್ಸ್ ಅಧ್ಯಕ್ಷ ಲ. ದೇವದಾಸ್ ಶೆಟ್ಟಿ ಹಿಬರೋಡಿ ತಿಳಿಸಿದ್ದಾರೆ.

ಬೆಳಗ್ಗೆ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 7 ರಿಂದ 12 ರವರೆಗೆ ಯಕ್ಷಗಾನ ಪ್ರದರ್ಶನದ ಜೊತೆಗೆ 14 ಬಗೆಯ ವಿಶೇಷ ಖಾದ್ಯಗಳ ಸವಿ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ ಕಳಕಳಿಯ ಸೇವೆ ಒಂದೆಡೆಯಾದರೆ ಯಕ್ಷಗಾನ ಕ್ಷೇತ್ರದ ಹಿಮ್ಮೆಳ, ಮುಮ್ಮೇಳ ಮತ್ತು ನೇಪಥ್ಯದಲ್ಲಿ 15 ವರ್ಷಗಳಿಗೂ ಮಿಗಿಲಾದ ಸೇವೆ ಸಲ್ಲಿಸಿದ 20 ಕಲಾವಿದರಿಗೆ ಸನ್ಮಾನ ನಡೆಯಲಿದೆ.

Exit mobile version