Site icon Suddi Belthangady

ಬಸ್ ದರ ಹೆಚ್ಚಳ ಖಂಡಿಸಿ ಬೆಳ್ತಂಗಡಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ

ಬೆಳ್ತಂಗಡಿ: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ರೀತಿಯ ಸಾರಿಗೆ ಬಸ್‌ಗಳ ದರ 15% ಹೆಚ್ಚಳ ಮಾಡಿದ ಕಾಂಗ್ರೆಸ್ ಸರ್ಕಾರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಜ.6ರಂದು ಸೋಮವಾರ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ನವಾಝ್ ಕಟ್ಟೆ ಹೊಸ ವರ್ಷದ ಸಂಭ್ರಮದಲ್ಲಿರುವ ರಾಜ್ಯದ ಜನರ ಮೇಲೆ ಸಿದ್ದರಾಮಯ್ಯ ಸರ್ಕಾರದ ವಕ್ರದೃಷ್ಟಿ ಬಿದ್ದಿದೆ. ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿಗಳು ಬಕಾಸುರನಂತೆ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುತ್ತಿದ್ದು, ಬೆಲೆ ಏರಿಕೆ ಎಂಬ ಅಸ್ತ್ರವನ್ನು ಪದೇ ಪದೇ ಜನಸಾಮಾನ್ಯರ ಮೇಲೆ ಪ್ರಯೋಗಿಸಲಾಗುತ್ತಿದೆ. ಈಗ ಬಸ್ ದರವನ್ನು ಶೇ.15% ರಷ್ಟು ಏರಿಸಿದೆ. ಮಹಿಳೆಯರಿಗೆ ಫ್ರೀ ಬಸ್ ಘೋಷಿಸಿ ಅದರ ನಷ್ಟವನ್ನು, ಪುರುಷ ಪ್ರಯಾಣಿಕರಿಂದ ವಸೂಲಿ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಇಳಿದಿರುವುದು ನಾಚಿಕೆಗೇಡು ಎಂದರು.

ಬಸ್ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಬಸ್ ಪ್ರಯಾಣಿಕರ ಮೇಲೆ ನಡೆಸುತ್ತಿರುವ ಸುಳಿಗೆ ವಿರುದ್ಧ ಕರಪತ್ರ ಹಂಚಲಾಯಿತು. ಪ್ರತಿಭಟನಾಕರಾರು ಸರ್ಕಾರದ ಜನ ವಿರೋಧಿ ಕಾರ್ಯದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಕೋಶಾಧಿಕಾರಿ ಸ್ವಾಲಿ ಮದ್ದಡ್ಕ, ಉಜಿರೆ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಆಲಿ, ವೇಣೂರು ಬ್ಲಾಕ್ ಅಧ್ಯಕ್ಷ ಅಶ್ರಫ್ ಬದ್ಯಾರು, ಕ್ಷೇತ್ರ ಸಮಿತಿ ಸದಸ್ಯರಾದ ಅಶ್ರಫ್ ಕಟ್ಟೆ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ನಾಗರೀಕರು ಪಾಲ್ಗೊಂಡಿದ್ದರು.

Exit mobile version