Site icon Suddi Belthangady

ನಲಿಕೆ, ಪರವ, ಪಂಬದ ಸಮುದಾಯದವರನ್ನು ಹೊರತು ಪಡಿಸಿ ಇತರರು ದೈವ ನರ್ತನ ನಡೆಸುವ ವಿವಾದ – ಗುಳಿಗ ದೈವದ ನೇಮ ಕಟ್ಟದಂತೆ, ಉತ್ಸವದಲ್ಲಿ ಭಾಗವಹಿಸದಂತೆ ನಲಿಕೆ ಸಮುದಾಯದವರಿಗೆ ಕೋರ್ಟ್ ನಿರ್ಬಂಧ – ಕಳಿಯ ಗ್ರಾಮದ ಮೂಡಾಯಿಪಲ್ಕೆ ಪರಪ್ಪು ಉದ್ಭವ ಆದಿಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಯಶಸ್ವಿ

ಬೆಳ್ತಂಗಡಿ: ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕಳಿಯ ಗ್ರಾಮದ ಮೂಡಾಯಿಪಲ್ಕೆಯ ಪರಪ್ಪು ಉದ್ಭವ ಆದಿಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ಡಿ. ೨೮ರಿಂದ ೩೦ರವರೆಗೆ 7ನೇ ವರ್ಷದ ವಾರ್ಷಿಕ ಉತ್ಸವ ಯಶಸ್ವಿಯಾಗಿ ನಡೆದಿದೆ. ನಲಿಕೆ, ಪರವ ಅಥವಾ ಪಂಬದ ಸಮುದಾಯದವರನ್ನು ಹೊರತು ಪಡಿಸಿ ಇತರರು ದೈವದ ನರ್ತನ ಸೇವೆ ಮಾಡಬಾರದು ಎಂಬ ನಿಯಮ ಇದ್ದರೂ ಮೊಗೇರ ಸಮುದಾಯದ ವ್ಯಕ್ತಿ ಉದ್ಭವ ಆದಿಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ಗುಳಿಗ ದೈವದ ನರ್ತನ ಸೇವೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಕಳೆದ ವರ್ಷ ವಿವಾದ ಉಂಟಾಗಿತ್ತು. ಈ ವರ್ಷವೂ ಈ ವಿವಾದ ಮುಂದುವರಿಯುವ ಸಾಧ್ಯತೆಗಳಿದ್ದ ಹಿನ್ನೆಲೆಯಲ್ಲಿ ಉದ್ಭವ ಆದಿ ಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ನರ್ತನ ಸೇವೆ ಮಾಡುವವರು ಬೆಳ್ತಂಗಡಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಮೋಗೇರ ಸಮುದಾಯದವರ ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯ ಈ ಉತ್ಸವದಲ್ಲಿ ನಲಿಕೆ ಸಮುದಾಯದವರು ಗುಳಿಗ ದೈವದ ನೇಮ ಕಟ್ಟದಂತೆ ಹಾಗೂ ಉತ್ಸವದಲ್ಲಿ ಭಾಗವಹಿಸದಂತೆ ತಾತ್ಕಾಲಿಕ ನಿಬಂಧಕಾಜ್ಞೆ ನೀಡಿತ್ತು. ಇದರಿಂದಾಗಿ ಶ್ರೀ ಕ್ಷೇತ್ರದಲ್ಲಿ ಸುಸೂತ್ರವಾಗಿ ವಾರ್ಷಿಕ ಉತ್ಸವ ನಡೆದಿದೆ. ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ, ಗಣಹೋಮ, ಭಜನೆ ಕಾರ್ಯಕ್ರಮ, ಭಕ್ತಿ ರಸಮಂಜರಿ ಹಾಗೂ ದೈವಗಳಿಗೆ ಪರ್ವ, ದೈವೋತ್ಸವ ಸಹಿತ ಹಲವು ಕಾರ್ಯಕ್ರಮಗಳು ಪೂರಕ ವಿಧಿ ವಿಧಾನಗಳೊಂದಿಗೆ ಕ್ಷೇತ್ರದಲ್ಲಿ ನಡೆದಿದೆ.

ಕಳೆದ ವರ್ಷ ವಿವಾದ ಉಂಟಾಗಿತ್ತು: ಕಳೆದ ವರ್ಷ ಕ್ಷೇತ್ರದಲ್ಲಿ ದೈವೋತ್ಸವ ನಡೆಯುತ್ತಿದ್ದ ಸಂದರ್ಭ ನಲಿಕೆ, ಪರವ ಅಥವಾ ಪಂಬದ ಸಮುದಾಯದವರನ್ನು ಹೊರತು ಪಡಿಸಿ ಇತರರರು ನರ್ತನ ಸೇವೆ ಮಾಡುವಂತಿಲ್ಲ. ಆದರೆ ಇಲ್ಲಿ ಮೊಗೇರ ಸಮುದಾಯದವರು ನರ್ತನ ಸೇವೆ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಉದ್ದೇಶಪೂರ್ವಕವಾಗಿ ಕೆಲವರು ಅಕ್ರಮವಾಗಿ ಪ್ರವೇಶಿಸಿ ತಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂದು ಗದ್ದಲ ಎಬ್ಬಿಸಿ ಸಾರ್ವಜನಿಕವಾಗಿ ಅವಮಾನಿಸಿ ಅಹಿತಕರ ಘಟನೆ ನಡೆದಿತ್ತು ಎಂದು ಆರೋಪ ಕೇಳಿ ಬಂದಿತ್ತು. ಕೆಲವು ವ್ಯಕ್ತಿಗಳಿಂದ ಉಂಟಾದ ಈ ಅಹಿತಕರ ಘಟನೆ ಮತ್ತು ಅಪಪ್ರಚಾರದಿಂದ ನಮ್ಮ ಕ್ಷೇತ್ರದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿದ್ದರಿಂದ ಮಾನಸಿಕವಾಗಿ ನೊಂದ ನಾವು ಯಾವುದೇ ವ್ಯಕ್ತಿಗಳು ಈ ಕ್ಷೇತ್ರಕ್ಕೆ ಬಂದು ಅಹಿತಕರ ಘಟನೆ ನಡೆಸದಂತೆ, ಶಾಂತಿ ಕದಡದಂತೆ ಮತ್ತು ಅಕ್ರಮವಾಗಿ ಕ್ಷೇತ್ರಕ್ಕೆ ಪ್ರವೇಶಿಸದಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿಕೊಂಡ ಪರಿಣಾಮ ಬೆಳ್ತಂಗಡಿ ನ್ಯಾಯಾಲಯ ಈ ಬಗ್ಗೆ ನಿರ್ಬಂಧಕಾಜ್ಞೆ ನೀಡಿದೆ ಎಂದು ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ರುಕ್ಮಯ್ಯ ಎಂ.ರವರು ಟ್ರಸ್ಟ್ ಕೋಶಾಧಿಕಾರಿ ರೇಖಾ ಮತ್ತು ಕಾನೂನು ಸಲಹೆಗಾರ ಉದಯ ಬಿ.ಕೆ. ಅವರ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದರು. ನ್ಯಾಯಾಲಯದ ಆದೇಶದಂತೆ ಈ ಬಾರಿ ಯಾರೂ ಕಾರ್ಯಕ್ರಮಕ್ಕೆ ಆಕ್ಷೇಪ ಎತ್ತದ ಪರಿಣಾಮ ಉತ್ಸವ ಯಶಸ್ವಿಯಾಗಿ ನಡೆದಿದೆ.

ಮುಂದಿನ ತೀರ್ಮಾನ ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ -ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷರು: ಕಳಿಯ ಗ್ರಾಮದ ಮೂಡಾಯಿಪಲ್ಕೆ ಎಂಬಲ್ಲಿರುವ ಉದ್ಭವ ಶ್ರೀ ಆದಿಲಿಂಗೇಶ್ವರ ಪುಣ್ಯ ಕ್ಷೇತ್ರದಲ್ಲಿ ಜರಗುವ ಏಳನೇ ವರ್ಷದ ವಾರ್ಷಿಕ ಉತ್ಸವದಲ್ಲಿ ನಲಿಕೆಯ ಸಮುದಾಯದವರು ಗುಳಿಗ ದೈವದ ನೇಮವನ್ನು ಕಟ್ಟದಂತೆ ಹಾಗೂ ಭಾಗವಹಿಸದಂತೆ ತಾತ್ಕಾಲಿಕ ನಿಬಂಧಕಾಜ್ಞೆ ತರಲಾಗಿದೆ. ಆದ್ದರಿಂದ ನಾವು ಭಾಗವಹಿಸುವುದಿಲ್ಲ. ಮುಂದಿನ ತೀರ್ಮಾನ ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ ಎಂದು ಬೆಳ್ತಂಗಡಿಯ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಭಾಕರ್ ಶಾಂತಿಕೋಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ನಡೆಯುವ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಅವರು ಆದಿ ಪುರಾತನ ಕಾಲದಿಂದಲೂ ನಮ್ಮ ಗುರುಹಿರಿಯರ ಕಾಲದಿಂದಲೂ ಈ ತುಳುನಾಡು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆರಾಧನ ಕ್ಷೇತ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಭೂತಾರಾಧನೆ. ಈ ಭೂತಾರಾಧನೆ ನರ್ತನ ಮೂರು ಜನಾಂಗದ ಕುಲಕಸುಬು ಆಗಿರುತ್ತದೆ. ನಲಿಕೆ, ಪರವ, ಪಂಬದ ಈ ಮೂರು ಸಮುದಾಯಗಳು ಬಹಳ ಭಕ್ತಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ರ್ತನ ಸೇವೆಯನ್ನು ಇಂದಿನವರೆಗೂ ನಡೆಸಿಕೊಂಡು ಬಂದಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ತುಳುನಾಡಿನ ದೈವಗಳಿಗೆ ಅಪಮಾನ, ಅವಮಾನ ಹಾಗೂ ದಬ್ಬಾಳಿಕೆಗಳು ನಿರಂತರ ಹೆಚ್ಚುತ್ತಿದ್ದು ಸಾಮಾಜಿಕ ಜಾಲತಾಣದಿಂದ ಅತೀ ಹೆಚ್ಚು ನಮ್ಮ ತುಳುನಾಡಿನ ಆರಾಧಕರಿಗೂ, ನರ್ತಕರಿಗೂ ತುಂಬಾ ನೋವುಂಟು ಮಾಡುವ ಸನ್ನಿವೇಶಗಳು ಉದ್ಭವಿಸಿರುತ್ತದೆ ಎಂದು ಹೇಳಿದ್ದರು.

ನಲಿಕೆ ಸಮುದಾಯದವರು ಮಾತ್ರ ನೇಮ ಕಟ್ಟುವುದು: ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಮೂಡಾಯಿಪಲ್ಕೆ ಎಂಬಲ್ಲಿ ಉದ್ಭವ ಶ್ರೀ ಆದಿಲಿಂಗೇಶ್ವರ ಕ್ಷೇತ್ರದಲ್ಲಿ ದೇವರಿಗೂ ಹಾಗೂ ದೈವಗಳಿಗೆ ಪೂಜಾ ವಿಧಿವಿಧಾನಗಳನ್ನು ಮಾಡಿ, ರಾತ್ರಿ ಅವರು ನಂಬುವ ದೈವಗಳಿಗೆ ಪರ್ವ ಸೇವೆ ಹಾಗೂ ನೇಮೋತ್ಸವ ಕಳೆದ ರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ನೇಮೋತ್ಸವದಲ್ಲಿ 9 ದೈವಗಳು ಇದ್ದು ಅದರಲ್ಲಿ ಗುಳಿಗ ದೈವಕ್ಕೆ ಮಾತ್ರ ನೇಮೋತ್ಸವ ನಡೆಸಿಕೊಂಡು ಬರುತ್ತಿದ್ದು, ಉಳಿದ ದೈವಗಳಿಗೆ ಪರ್ವಸೇವೆ, ಅಗೇಲು ಸೇವೆ ಮಾತ್ರ ನಡೆಸುತ್ತಾರೆ. ಗುಳಿಗ ದೈವದ ಕೋಲವನ್ನು ಪುರಾತನ ಕಾಲದಿಂದಲೂ ಒಂದೇ ಸಮುದಾಯ ಅದು ನಲಿಕೆ ಸಮುದಾಯ ಮಾತ್ರ ನೇಮ ಕಟ್ಟುವುದು. ಗುಳಿಗ ದೈವದ ಆರಾಧಕರು ಎಲ್ಲಾ ಜಾತಿ, ಸಮುದಾಯಗಳಲ್ಲೂ ಇದ್ದಾರೆ. ಪ್ರಸ್ತುತ ಗುಳಿಗ ದೈವವನ್ನು ನಾವು ನಲಿಕೆ ಸಮುದಾಯದವರು ಮಾತ್ರ ನೇಮ ಕಟ್ಟುವುದು. ಈ ಬಗ್ಗೆ ನಾವು ಶ್ರೀ ಉದ್ಭವ ಆದಿಲಿಂಗೇಶ್ವರ ಇದರ ಗುರಿಕಾರರು, ಅಧ್ಯಕ್ಷರೂ ಆದ ರುಕ್ಕಯ್ಯ ಎಂ. ಹಾಗೂ ಅವರ ಮಗ ಚಿತ್ತರಂಜನ್ ಹಾಗೂ ಮನೆಯವರೊಂದಿಗೆ ಚರ್ಚಿಸಿ ತೀರ್ಮಾನಿಸಿದಂತೆ ಕಳೆದ ಸಲ ನೇಮೋತ್ಸವವನ್ನು ಅವರು ತಮ್ಮ ಸ್ವಇಚ್ಛೆಯಿಂದ ನಿಲ್ಲಿಸುತ್ತೇವೆ ಎಂದು ನಮ್ಮ ನಲಿಕೆ ಸಂಘದ ಸಮುದಾಯ ಭವನದ ಅಂಗಳದಲ್ಲಿ ಆರಾಧಿಸಿಕೊಂಡು ಬಂದಿರುವ ಶ್ರೀ ಗುಳಿಗ ದೈವದ ಸನ್ನಿಧಿಯಲ್ಲಿ ತಪ್ಪೊಪ್ಪಿಕೊಂಡು ದೈವದ ಹೆಸರಲ್ಲಿ ತಪ್ಪು ಕಾಣಿಕೆ ಹಾಕಿರುತ್ತಾರೆ. ಪ್ರಸ್ತುತ ಈ ಗುಳಿಗ ದೈವವನ್ನು ಮೊಗೇರ ಸಮುದಾಯದ ರುಕ್ಮಯ್ಯ ಮತ್ತು ಅವರ ಮಗ ಚಿತ್ತರಂಜನ್ ಹಾಗೂ ಮನೆಯವರು ಗುಳಿಗ ದೈವಕ್ಕೆ ಅಪಮಾನ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದ ಎಸ್. ಪ್ರಭಾಕರ್ ಅವರು ಬೆಳ್ತಂಗಡಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ತಾತ್ಕಾಲಿಕ ನಿಬಂಧಕಾಜ್ಞೆಯಂತೆ ನಾವು ನಲಿಕೆ ಸಮುದಾಯದ ನರ್ತಕರು ಹಾಗೂ ಸಮಾಜ ಬಾಂಧವರು ಸದ್ರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಮುಂದಿನ ತೀರ್ಮಾನವು ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿದೆ. ನಾವು ಪುರಾತನ ಕಾಲದಿಂದ ಮಾಡುತ್ತಿದ್ದ ನರ್ತನದ ಬಗ್ಗೆ ಇತಿಹಾಸದಲ್ಲಿ ದಾಖಲಾದ ದಾಖಲೆ ಪತ್ರಗಳನ್ನು ನ್ಯಾಯಾಲಯಕ್ಕೆ ನೀಡಲಿದ್ದೇವೆ ಎಂದು ತಿಳಿಸಿದ್ದರು. ದೈವಾರಾಧನ ಸಮಿತಿ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಜನಾರ್ದನ ಬುಡೋಳಿ, ಬೆಳ್ತಂಗಡಿ ನಲಿಕೆಯವರ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ಕೆ. , ಸದಸ್ಯರಾದ ವಿನಯ್ ಕುಮಾರ್, ರಾಮು ಶಿಶಿಲ ಮತ್ತು ದೈವನರ್ತಕ ಕೊರಗಪ್ಪ ಪಂಡಿತ್ ಉಪಸ್ಥಿತರಿದ್ದರು.

Exit mobile version