Site icon Suddi Belthangady

ಜಿಲ್ಲಾ ಕಬಡ್ಡಿ ಅಸೋಸಿಯೇಷನ್‌ಗೆ ಆಡಳಿತಾಧಿಕಾರಿಯನ್ನು ನೇಮಿಸಬೇಕು – ಕಬಡ್ಡಿಗೆ ರಾಕೇಶ್ ಮಲ್ಲಿಯ ಕೊಡುಗೆ ಏನು?: ಹರೀಶ್ ಪೂಂಜ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಬಡ್ಡಿ ಆಟಗಾರರ ಹಿತಾಸಕ್ತಿಯಿಂದ ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿzನೆ. ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನಿಂದ ಕಬಡ್ಡಿ ಆಟಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಹಲವು ಆರೋಪಗಳನ್ನು ಎದುರಿಸುತ್ತಿರುವ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ಗೆ ರಾಜ್ಯ ಸರಕಾರ ತಕ್ಷಣ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಶಾಸಕ ಹರೀಶ್ ಪೂಂಜ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಈ ಒತ್ತಾಯ ಮಾಡಿದ್ದಾರೆ.

ದ.ಕ. ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ವಿರುದ್ಧ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸಹಕಾರ ಇಲಾಖೆಯಡಿ ತನಿಖೆ ನಡೆಸಿ ಜನವರಿ ೨೦೨೩ರಲ್ಲಿ ವರದಿ ನೀಡಲಾಗಿದೆ. ಆ ವರದಿಯ ಆಧಾರದಲ್ಲಿ ಆಡಳಿತಾಧಿಕಾರಿ ನೇಮಕಕ್ಕೆ ಸೂಚಿಸಲಾಗಿದೆ. ಆದರೆ ಸಹಕಾರ ಇಲಾಖೆ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದೆ. ಕೂಡಲೇ ಕ್ರಮ ಕೈಗೊಳ್ಳುವುದಾಗಿ ಸಹಕಾರ ಸಚಿವರು ಭರವಸೆ ನೀಡಿದ್ದರು. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಜಿಲ್ಲೆಯ ಕಬಡ್ಡಿ ಆಟಗಾರರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರವೇ ಆಡಳಿತಾಧಿಕಾರಿ ನೇಮಿಸಿ ಕಬಡ್ಡಿ ಆಟಗಾರರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ ಶಾಸಕ ಹರೀಶ್ ಪೂಂಜ ಅವರು ದ.ಕ. ಕಬಡ್ಡಿ ಅಸೋಸಿಯೇಷನ್‌ಗೆ ರಾಕೇಶ್ ಮಲ್ಲಿ ೨೦೦೯ರಲ್ಲಿ ಉಪಾಧ್ಯಕ್ಷರಾಗಿದ್ದಾರೆ.

ಆದರೆ ಅವರು ಸದಸ್ಯರಾದದ್ದು ೨೦೧೨ರಲ್ಲಿ ಎಂದು ದಾಖಲೆಗಳು ತೋರಿಸುತ್ತವೆ. ಅವರು ಸದಸ್ಯರಾಗದೆ ಕಾನೂನು ಬಾಹಿರವಾಗಿ ಉಪಾಧ್ಯಕ್ಷರಾಗಿದ್ದಾರೆ. 2012ರಿಂದ 2024ರ ಇಲ್ಲಿವರೆಗೆ ನಿರಂತರ ಅವರು ಅಧ್ಯಕ್ಷರಾಗಿದ್ದಾರೆ. ಕಬಡ್ಡಿಗೆ ರಾಕೇಶ್ ಮಲ್ಲಿಯ ಕೊಡುಗೆ ಏನು ಎಂದು ಅವರೇ ತಿಳಿಸಲಿ ಎಂದು ಹೇಳಿದರು. ದ.ಕ. ಕಬಡ್ಡಿ ಅಸೋಸಿಯೇಷನ್ ಕಬಡ್ಡಿ ಆಟಗಾರರಿಗೆ ಯಾವುದೇ ಪ್ರೋತ್ಸಾಹ ನೀಡದ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪಿಸಿ ವಿನಃ ಅವಮಾನಿಸಿಲ್ಲ. ಇಲ್ಲಿ ಪ್ರತಿಭಾನ್ವಿತರಿಗೆ ಅವಕಾಶ ಸಿಗುತ್ತಿಲ್ಲ. ರಾಜ್ಯ, ರಾಷ್ಟ್ರ ಮಟ್ಟದ ಆಟಗಾರರಿದ್ದರೂ ಕೋಚ್‌ಗಳು ಮಂಗಳೂರು ವಿ.ವಿ.ಯಲ್ಲಿ ಪದಕ ಗೆದ್ದ ಕಬಡ್ಡಿ ಆಟಗಾರರು ಇದ್ದರೂ ಅವರಿಗೆ ಅವಕಾಶ ನೀಡುತ್ತಿಲ್ಲ. ದ.ಕ. ಜಿಲ್ಲೆಯ ಕಬಡ್ಡಿ ಆಟಗಾರರು ಮುಂದೆಯಾದರೂ ರಾಜ್ಯ, ದೇಶವನ್ನು ಪ್ರತಿನಿಧಿಸುವ ಉದ್ದೇಶದಿಂದ ಈ ಆಗ್ರಹ ಮಾಡುತ್ತಿರುವುದಾಗಿ ಹರೀಶ್ ಪೂಂಜ ಹೇಳಿದರು. ದ.ಕ. ಕಬಡ್ಡಿ ಅಮೆಚೂರ್ ಅಸೋಸಿಯೇಷನ್‌ಗೆ ಇದುವರೆಗೆ ಸ್ವಂತ ಕಟ್ಟಡ ಇಲ್ಲ, ಕಾರ್ಯದರ್ಶಿಯ ಮನೆ ಹೆಸರಿನ ವಿಳಾಸ ಇದೆ. ಕಬಡ್ಡಿ ಆಟಗಾರರಿಗೆ ಕನಿಷ್ಠ ಆರೋಗ್ಯ ವಿಮೆಯನ್ನೂ ಮಾಡಿಸಿಲ್ಲ. ಎಬಿಸಿ ಮಾದರಿಯಲ್ಲಿ ಪಂದ್ಯ ನಡೆಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪೂಂಜ ಆರೋಪಿಸಿದರು.

ನಾನು ಕೂಡ ಕಬಡ್ಡಿ ಆಟಗಾರ: ಪೂಂಜ
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಬಡ್ಡಿ ಕ್ರೀಡಾಂಗಣ ನಿರ್ಮಾಣಕ್ಕೆ ಅಂದಿನ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ವೇದವ್ಯಾಸ ಕಾಮತ್ ಅವರ ಪ್ರಯತ್ನ ಕಾರಣ. ನಾನು ಕೂಡ ವಿ.ವಿ. ಕಬಡ್ಡಿ ಆಟಗಾರನಾಗಿದ್ದು ಈಗಲೂ ಕಬಡ್ಡಿ ಪ್ರೋತ್ಸಾಹಕನಾಗಿದ್ದೇನೆ. ಆಯಾ ಜಿಲ್ಲೆಗಳ ಕಬಡ್ಡಿ ಅಮೆಚೂರ್‌ಗೆ ನೀಡಿದ ಮ್ಯಾಟ್‌ನ್ನು ಈ ಜಿಲ್ಲೆಯಲ್ಲಿ ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇಲಾಖೆಯಿಂದ ಬಾಡಿಗೆ ನೆಲೆಯಲ್ಲಿ ಮ್ಯಾಟ್ ನೀಡಲಾಗುತ್ತಿದೆ. ಇದು ಕಬಡ್ಡಿ ಪಟುಗಳಿಗೆ ಮಾಡುವ ಅನ್ಯಾಯ ಎಂದು ರಾಜ್ಯ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಹರೀಶ್ ಪೂಂಜ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Exit mobile version