Site icon Suddi Belthangady

ಶಬರಿಮಲೆಗೆ ಹೋಗುವವರು ಪಳ್ಳಿಗೆ ಯಾಕೆ ಹೋಗುವುದು? – ನಮ್ಮ ಧರ್ಮವನ್ನು ಪ್ರೀತಿಸದವರನ್ನು ನಾವು ಯಾಕೆ ಪ್ರೀತಿಸಬೇಕುವಾವರ ಯಾರು? – ಬ್ಯಾರಿ ನಮ್ಮೊಟ್ಟಿಗೆ ಬಂದು ಏನು ಯುದ್ಧ ಮಾಡುವುದು?

ಬೆಳ್ತಂಗಡಿ: ಗುರುವಾಯನಕೆರೆಯಲ್ಲಿರುವ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಡಿ.23ರಿಂದ 25ರವರೆಗೆ ನಡೆದ ಬ್ರಹ್ಮಕಲಶಾಭಿಷೇಕ ಮತ್ತು ೩೮ನೇ ವರ್ಷದ ದೀಪೋತ್ಸವ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಬರೋಡ ಅವರು ಅಯ್ಯಪ್ಪ ಸ್ವಾಮಿ ಮತ್ತು ವಾವರನ ಕುರಿತು ಹೇಳಿರುವ ಮಾತುಗಳು ಇದೀಗ ಭಾರೀ ಸಂಚಲನ ಸೃಷ್ಠಿಸಿದೆ.

ಸಾಮರಸ್ಯ ಮತ್ತು ಸೌಹಾರ್ದತೆಗೆ ಸಾಕ್ಷಿಯಾಗಿರುವ ಅಯ್ಯಪ್ಪ ಸ್ವಾಮಿ ಮತ್ತು ವಾವರನ ಬಗ್ಗೆ ಶಶಿಧರ ಶೆಟ್ಟಿ ಅವರು ಹೇಳಿರುವ ಮಾತು ತುಳುನಾಡಿನಾದ್ಯಂತ ಪರ ವಿರೋಧ ಅಭಿಪ್ರಾಯಕ್ಕೆ ಅವಕಾಶ ಒದಗಿಸಿದೆ. ಮಾತ್ರವಲ್ಲದೆ ವಿವಿಧ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ನಾಸ್ತಿಕರು ಮತ್ತು ಆಸ್ತಿಕರ ನಡುವಿನ ಚರ್ಚೆಗೂ ಇದು ಅವಕಾಶ ಕಲ್ಪಿಸಿದೆ. ಸದಾ ಸೈಲೆಂಟ್ ಆಗಿಯೇ ಕಾಣುವ ಶಶಿಧರ ಶೆಟ್ಟಿ ಅವರು ಅಗ್ರೆಸ್ಸಿವ್ ಆಗಿ ಹಿಂದುತ್ವದ ಬಗ್ಗೆ ಮಾತನಾಡಿರುವುದು ಬಹುತೇಕರಿಗೆ ಅಚ್ಚರಿ ಮೂಡಿಸಿದೆ. ಅಲ್ಲದೆ ಇವರ ಹೇಳಿಕೆ ಅಯ್ಯಪ್ಪ ಭಕ್ತರ ನಂಬಿಕೆಯ ಒಂದು ಮಗ್ಗುಲನ್ನು ಬದಲಾಯಿಸುವ ಸಾಧ್ಯತೆ ಕಂಡು ಬಂದಿದೆ.
ಪರಮಪವಿತ್ರ ಶಬರಿಮಲೆಯ ನಂಬಿಕೆಯ ವಿಚಾರದ ಬಗ್ಗೆ ತೀಕ್ಷ್ಣವಾಗಿ ಮಾತನಾಡಿರುವ ಶಶಿಧರ ಶೆಟ್ಟಿ ಅವರು 48 ದಿನ ವ್ರತ ಮಾಡಿಕೊಂಡು ನಾವು ಮೊದಲು ಪಳ್ಳಿಗೆ ಯಾಕೆ ಹೋಗಬೇಕು ಎಂದು ಪ್ರಶ್ನಿಸುವ ಮೂಲಕ ಇದ್ದಕ್ಕಿಂದ್ದಂತೆಯೇ ಕಟ್ಟರ್ ಹಿಂದುತ್ವವಾದಿಯಾಗಿ ಗೋಚರಿಸಲಾರಂಭಿಸಿದ್ದಾರೆ. ಹಿಂದೂ ಸಂಘಟನೆಗಳ ಫಯರ್‌ಬ್ರಾಂಡ್ ನಾಯಕರಾಗಿರುವ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಜಗದೀಶ್ ಕಾರಂತ, ಪ್ರಮೋದ್ ಮುತಾಲಿಕ್‌ರಂತಹ ಘಟಾನುಘಟಿಗಳೂ ಹೇಳದ ವಿಚಾರವನ್ನು ಶಶಿಧರ ಶೆಟ್ಟಿ ಖಡಕ್ ಆಗಿ ಹೇಳಿದ್ದಾರೆ. ಯಾರು ನಮ್ಮ ಧರ್ಮವನ್ನು ಪ್ರೀತಿಸುವುದಿಲ್ಲವೋ ಅವರ ಧರ್ಮವನ್ನು ನಾವು ಯಾಕೆ ಪ್ರೀತಿಸಬೇಕು ಎಂದು ಶಶಿಧರ ಶೆಟ್ಟಿ ಕೇಳಿದ್ದಾರೆ. ವಾವರ ಯಾರು? ಬ್ಯಾರಿ ನಮ್ಮೊಟ್ಟಿಗೆ ಬಂದು ಏನು ಯುದ್ಧ ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ರಾಜಕೀಯ ಪ್ರವೇಶಿಸಲು ಅವರು ವೇದಿಕೆ ಸಿದ್ಧಪಡಿಸುತ್ತಿದ್ದಾರೆಯೇ ಎಂದೂ ಕುತೂಹಲ ಮೂಡಿಸಿದೆ.

ಶಶಿಧರ ಶೆಟ್ಟಿ ಸಭೆಯಲ್ಲಿ ಹೇಳಿರುವುದು: ಧಾರ್ಮಿಕ ಸಭೆಯ ಭಾಷಣದಲ್ಲಿ ಶಶಿಧರ ಶೆಟ್ಟಿ ಅವರು ಇಲ್ಲಿ ನಡೆಯುತ್ತಿರುವುದು ಬ್ರಹ್ಮಕಲಶ ಅಭಿಷೇಕ ಅಲ್ಲ. ಅದು ಬ್ರಹ್ಮಕಲಶ ಸಂಪ್ರೋಕ್ಷಣೆ. ದೇವರ ಮೂರ್ತಿ ಇದ್ದಲ್ಲಿ ಮಾತ್ರ ಬ್ರಹ್ಮಕಲಶ ಅಭಿಷೇಕ ಎಂದು ಹೇಳುವ ಮೂಲಕ ಭಾರೀ ಚರ್ಚೆಗೆ ನಾಂದಿ ಹಾಡಿದ್ದರು. ಆ ನಂತರ ಅಯ್ಯಪ್ಪ ಸ್ವಾಮಿ ಮತ್ತು ವಾವರನ ಕುರಿತು ಮಾತನಾಡಿ ಮತ್ತೊಂದು ಚರ್ಚೆಗೆ ಮುಹೂರ್ತ ಇರಿಸಿದ್ದರು. ನಾವು ಶಬರಿಮಲೆಗೆ ಹೋದವರು ಪಳ್ಳಿಗೆ ಯಾಕೆ ಹೋಗಬೇಕು, ವಾವರ ಯಾರು ಅಂತ ಕೇಳಿದರೆ ನನಗೆ ಉತ್ತರ ಕೊಡುವವರು ಬೇಕು. ವಾವರ ಯಾರು. ಒಬ್ಬ ಮುಸ್ಲಿಂ ವ್ಯಕ್ತಿಗೆ ನಾವು ಇರುಮುಡಿ ಹೊತ್ತುಕೊಂಡು ಹೋಗಿ ೪೮ ದಿನ ವ್ರತ ಮಾಡಿಕೊಂಡು ಮೊದಲು ಪಳ್ಳಿಗೆ ಯಾಕೆ ಹೋಗಬೇಕು. ಪಳ್ಳಿಗೆ ಹೋಗುವ ಸಂದರ್ಭ ಯಾಕೆ ಬೇಕು? ಅಲ್ಲಿ ಹೋಗಿ ಏನು ಸಾಧನೆ ಮಾಡಿದ್ದೀರಿ? ಇಲ್ಲಿರುವಂತಹ ಅನೇಕ ವ್ರತಧಾರಿಗಳು ಪಳ್ಳಿಗೆ ಹೋಗದೆ ದರ್ಶನ ಮಾಡಿಕೊಂಡು ಬಂದಿದ್ದೀರಿ. ನಾನು ಹೋಗಿಲ್ಲ. ದೇವರು ನನಗೆ ತುಂಬಾ ಒಳ್ಳೆಯ ದರ್ಶನ ಕೊಟ್ಟಿದ್ದಾರೆ. ಅಂತಹದ್ದು ಏನೂ ಆಗಿಲ್ಲ. ತಾವು ತೆಗೆದುಕೊಂಡು ಹೋದ ಕಾಳುಮೆಣಸನ್ನು ಪಳ್ಳಿಗೆ ಹೋಗಿ ಕೊಡುತ್ತೀರಿ. ಅದಕ್ಕೆ ಒಳ್ಳೆಯ ರೇಟ್ ಇದೆ. ಅದರಿಂದ ಕೋಟಿಗಟ್ಟಲೆ ದುಡ್ಡು ಅಗುತ್ತದೆ. ಯಾಕೆ ನಾವು ಅಲ್ಲಿ ಹೋಗಿ ತೆಂಗಿನಕಾಯಿ ಬಿಟ್ಟು ಬರಬೇಕು. ಯಾರು ನಮ್ಮ ಧರ್ಮವನ್ನು ಪ್ರೀತಿಸುವುದಿಲ್ಲವೋ ಅವರ ಧರ್ಮವನ್ನು ನಾವು ಯಾಕೆ ಪ್ರೀತಿಸಬೇಕು? ಪಂಪಾದಿಂದ ನೇರವಾಗಿ ಶಬರಿಮಲೆಗೆ ಹೋಗಲು ದಾರಿ ಇರಬೇಕಾದರೆ ಪಳ್ಳಿಗೆ ಯಾಕೆ ಹೋಗಬೇಕು? ಯಾರಾದರೂ ಒಬ್ಬರು ವ್ರತಧಾರಿ ಬಂದು ಹೇಳಲಿ ವಾವರಸ್ವಾಮಿಯಿಂದ ನಮಗೆ ಒಳ್ಳೆಯದಾಗಿದೆ ಎಂದು. ನಾವೇ ನಮ್ಮ ಮಕ್ಕಳನ್ನು ತಪ್ಪು ದಾರಿಗೆ ಎಳೆದುಕೊಂಡು ಹೋದರೆ ಮತ್ತೆ ನಮ್ಮ ಮುಂದಿನ ಮಕ್ಕಳು ಅಲ್ಲಿಗೆ ಹೋಗುತ್ತಾರೆ ಎಂದು ಹೇಳಿದ ಶಶಿಧರ ಶೆಟ್ಟಿಯವರು ಇನ್ನು ಯಕ್ಷಗಾನದವರು ಇದ್ದಾರೆ. ಅವರಿಗೆ ಯಾರು ಕಥೆ ಹೇಳಿದ್ದಾರೋ ದೇವರಿಗೆ ಗೊತ್ತು. ನಮಗೂ ಅವರಿಗೂ ಇತಿಹಾಸ ಬೇರೆ ಬೇರೆ ಇದೆ. ನಮ್ಮ ಅಯ್ಯಪ್ಪ ಸ್ವಾಮಿ ಕಥೆ ಯಾವಾಗ ಬಂದಿದ್ದು, ಇವರಿಗೆ ಅಬ್ಬುಶೇಖ್ ಕೂಡ ಬರುತ್ತಾನೆ, ವಾವರ ಕೂಡ ಬರುತ್ತಾನೆ. ಯಾರು ವಾವರ? ಸಾಕ್ಷಾತ್ ತಾಯಿಗೆ ಮಗನಿಗೋಸ್ಕರ ಅಯ್ಯಪ್ಪ ಸ್ವಾಮಿಯನ್ನು ಕಾಡಿಗೆ ಕಳುಹಿಸಿಕೊಟ್ಟಾಗ ವ್ಯಾಘ್ರನೇ ಅವರ ಜೊತೆಗೆ ಬಂದಾಗ ಆಗ ಹೆಸರು ಬಂದಿದ್ದು ಸ್ವಾಮಿಯೇ ಶರಣಂ ಅಯ್ಯಪ್ಪ. ಅವರಿಗೆ ವಾವರನಿಂದ ನಮಗೆ ತೊಂದರೆ ಆಗಲು ಸಾಧ್ಯ ಇದೆಯಾ? ವಾವರನ ಪೂಜೆ ಯಾಕೆ ಮಾಡಬೇಕು? ಮತ್ತೆ ನಾವು ಹಿಂದುತ್ವದ ಮಹತ್ವವನ್ನು ಏನು ಮಾತನಾಡುವುದು? ಇಲ್ಲಿ ಬಹಳ ಅದ್ಭುತವಾದ ಕಾರ್ಯಕ್ರಮ ಆಗುತ್ತಿದೆ. ಇದರ ಬಗ್ಗೆ ಎರಡು ಮಾತಿಲ್ಲ. ದೇವರ ಆಭರಣ ಬರುವಾಗ ರಕ್ಷಣೆಗೆ ಗರುಡ ಬರುತ್ತಾನೆ. ಇದಕ್ಕಿಂತ ಇನ್ನೇನು ಬೇಕು? ಆದರೂ ಮಸೀದಿಗೆ ಹೋಗುತ್ತೀರಲ್ಲಾ? ಇದು ಯಾವ ರೀತಿಯ ಆಚರಣೆ ನಮ್ಮದು ಎಂದು ಪ್ರಶ್ನಿಸಿದ್ದಾರೆ.

ಇನ್ನು ಪಾವಂಜೆ ಮೇಳಕ್ಕೆ ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ. ಬಹಳ ಒಳ್ಳೆಯ ಮೇಳವನ್ನು ಮಾಡಿಕೊಂಡು ಬರುತ್ತಿದೆ. ಆದರೆ ಇನ್ನು ಮುಂದೆ ಶಬರಿಮಲೆ ಪ್ರಸಂಗ ನೀವು ಮಾಡಿದರೆ ಅದರಲ್ಲಿ ವಾವರನ ಟಾಪಿಕ್ ಬರಬಾರದು. ಅಯ್ಯಪ್ಪ ಸ್ವಾಮಿಯಿಂದ ಪ್ರೇರಣೆ ಆದ ಅನೇಕ ವಿಷಯಗಳು ಇವೆ. ಅವುಗಳನ್ನು ತೋರಿಸಿ. ಕಾಲು ಬಾರದವನಿಗೆ ಕಾಲು ಬಂದದ್ದು. ಕಣ್ಣು ಕಾಣದವನಿಗೆ ಕಣ್ಣು ಬಂದಿದೆ. ಅದನ್ನು ತೋರಿಸಿ. ವಾವರನನ್ನು ತೋರಿಸುವ ಬದಲು ನಾವರಕ್ಕೆ ಹೋಗಿ ಅಲ್ಲಿರುವ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗಿ ಬನ್ನಿ. ಅದು ಬಿಟ್ಟು ಈ ಮುಸ್ಲಿಂರ ಓಲೈಕೆ ನಾವು ಯಾಕೆ ಮಾಡಬೇಕು? ನಾವು ಇದರ ಬಗ್ಗೆ ಈಗ ಮಾತನಾಡಿಲ್ಲ ಅಂದರೆ ಮುಂದೆ ಯಾವಾಗ ಮಾತನಾಡುವುದು? ಒಂದು ಪ್ರತೀತಿ ಇದೆ. ನಾವುಗಳು ಹಿಂದೂಗಳಾಗಿದ್ದರೆ ನಮ್ಮಲ್ಲಿ ಸ್ವಲ್ಪವಾದರೂ ಹಿಂದುತ್ವ ಇದ್ದರೆ ನಾಳೆಯಿಂದ ಇಲ್ಲಿ ಅಯ್ಯಪ್ಪ ಸ್ವಾಮಿಗೂ ವಾವರನಿಗೂ ಯುದ್ಧ ಆಗುತ್ತದೆ ಎಂದು. ಬ್ಯಾರಿ ನಮ್ಮೊಟ್ಟಿಗೆ ಬಂದು ಏನು ಯುದ್ಧ ಮಾಡುವುದು? ಏನು ಯುದ್ಧ ಆಗುವುದು? ವಾವರ ಅಯ್ಯಪ್ಪನ ಗೆಳೆಯ ಅಂತಾರೆ. ಹಾಗಾದರೆ ಅವರು ಹಿಂದುತ್ವವನ್ನು ಒಪ್ಪಿಕೊಳ್ಳಲಿ. ಮಸೀದಿಗೆ ಹೋಗಿ ನಮ್ಮವರು ಪೂಜೆ ಮಾಡಬೇಕಲ್ಲಾ. ಅದು ಆಗ್ತಾ ಇಲ್ಲ. ಮುಸ್ಲಿಂನ ಮೈಮೇಲೆ ದೇವರು ಬರುತ್ತಾರಾ? ಯಾಕೆ ನಮ್ಮಲ್ಲಿ ಈ ತಪ್ಪು ಕಲ್ಪನೆ. ಇದೆಲ್ಲಾ ಸುಳ್ಳು ಕಲ್ಪನೆ. ಇದು ಆಗಬಾರದು. ವಾವರ ಇಲ್ಲವೇ ಇಲ್ಲ. ಹಿಂದುತ್ವದ ಬಗ್ಗೆ ಅರಿವಿದ್ದರೆ ಇದು ಬದಲಾವಣೆ ಆಗಬೇಕು ಎಂದು ಹೇಳುವ ಮೂಲಕ ಶಶಿಧರ ಶೆಟ್ಟಿ ಅವರು ಈಗ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ.

Exit mobile version