Site icon Suddi Belthangady

2024: ಬೆಳ್ತಂಗಡಿಯಲ್ಲಿ ಏನೇನಾಯ್ತು ಗೊತ್ತೇ…?

2024ರಲ್ಲಿ ಬೆಳ್ತಂಗಡಿ ಹತ್ತು ಹಲವು ಮಹತ್ತರ ಘಟನೆಗಳಿಗೆ ಸಾಕ್ಷಿಯಾಗಿದೆ. ಅವುಗಳಲ್ಲಿ ಕೆಲ ಘಟನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಓದುಗರ ಮುಂದಿಡುತ್ತಿದ್ದೇವೆ. ಬೆಳ್ತಂಗಡಿಯ ರಾಜಕೀಯ ಹುಲಿ ಎಂದೇ ಖ್ಯಾತಿಯಾಗಿದ್ದ ಮತ್ತು ಅಧಿಕ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ವಸಂತ ಬಂಗೇರ ಅವರು ಮೇ 8 ರಂದು ನಿಧನರಾದರು. ಒಟ್ಟು 5 ಬಾರಿ ಶಾಸಕರಾಗಿದ್ದ ಅವರು, ತಾಲೂಕಿನ ನೆಚ್ಚಿನ ನಾಯಕನಾಗಿ ಗುರುತಿಸಿಕೊಂಡಿದ್ದರು. ಬಂಗೇರರಂತಹ ದಿಟ್ಟ ನಾಯಕನ ನಿಧನ ರಾಜಕೀಯ ಕ್ಷೇತ್ರಕ್ಕಾದ ದೊಡ್ಡ ನಷ್ಟ ಎಂದು ಪಕ್ಷಾತೀತವಾಗಿ ಅನೇಕರು ಒಪ್ಪಿಕೊಳ್ಳುವುದೇ ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಚೌಟ ಗೆಲುವು: ಮೂರು ಅವಧಿಗೆ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಬದಲಿಗೆ ಬಿಜೆಪಿ ಟಿಕೆಟ್ ಪಡೆದ ಕ್ಯಾ. ಬ್ರಿಜೇಶ್ ಚೌಟ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದರು. ಕಾಂಗ್ರೆಸ್‌ನ ಪದ್ಮರಾಜ್ ಪೂಜಾರಿ ವಿರುದ್ಧ 149208 ಮತಗಳ ಅಂತರದಲ್ಲಿ ಅವರು ವಿಜಯಮಾಲೆ ಧರಿಸಿದ್ದರು. ಬೆಳ್ತಂಗಡಿಯಲ್ಲಿ ಚಲಾವಣೆಯಾದ 189288 ಮತಗಳಲ್ಲಿ ಬೃಜೇಶ್ ಚೌಟ 101408 ಮತ ಪಡೆದಿದ್ದರು. ಪದ್ಮರಾಜ್‌ಗೆ 78101 ಮತಗಳು ಬಂದಿದ್ದವು. ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಬೃಜೇಶ್ ಚೌಟ, ಈಗಾಗಲೇ ಹಲವು ವಿಷಯಗಳ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿ ಗಮನಸೆಳೆದಿದ್ದಾರೆ.

1. ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಹಲವು ವರ್ಷಗಳಿಂದ ವರದಿಗಾರರಾಗಿದ್ದ ಪಿ.ಎಚ್.ಈಶ್ವರ್ (59) ಅಲ್ಪಕಾಲದ ಅಸೌಖ್ಯದಿಂದ 2024ರ ಜನವರಿ ತಿಂಗಳಲ್ಲಿ ನಿಧನ ರಾದರು. ಸುಮಾರು 25ವರ್ಷಕ್ಕಿಂತಲೂ ಹೆಚ್ಚು ವರ್ಷ ಸುದ್ದಿ ಪ್ರಸರಣ ವಿಭಾಗದಲ್ಲೂ ಕೆಲಸ ಮಾಡಿದ್ದ ಅವರು, ಟೈಲರಿಂಗ್ ಕೆಲಸ ಮಾಡುತ್ತಾ, ಧಾರ್ಮಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು.

2. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿಯಾಗಿದ್ದ, ಭಾರತೀಯ ಸೇನೆಯಲ್ಲಿ ಯೋಧರಾಗಿದ್ದ ಏಕನಾಥ್ ಶೆಟ್ಟಿ ಸಹಿತ 29 ಯೋಧರು ಪ್ರಯಾಣಿಸುತ್ತಿದ್ದ ವಾಯುಸೇನೆಯ ವಿಮಾನ ನಿಗೂಢವಾಗಿ ನಾಪತ್ತೆಯಾದ 8 ವರ್ಷಗಳ ಬಳಿಕ ಸಮದ್ರದ ಆಳದಲ್ಲಿ ಜನವರಿ ತಿಂಗಳಲ್ಲಿ ಪತ್ತೆಯಾಗಿತ್ತು. 2016ರ ಜುಲೈ 22ರಂದು ಚೆನ್ನೈನ ತಾಂಬರಂ ವಾಯುನೆಲೆಯಿಂದ ಅಂಡಮಾನ್ ಪೋರ್ಟ್‌ಬ್ಲೇರ್‌ಗೆ ವಿಮಾನ ಪ್ರಯಾಣಿಸುತ್ತಿದ್ದ ವೇಳೆ ನಾಪತ್ತೆಯಾಗಿತ್ತು.

3. ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ತಾಲೂಕಿದ ನೂರಾರು ಮಂದಿ ಅಯೋಧ್ಯೆಗೆ ತೆರಳಿದ್ದರೂ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತಾಲೂಕಿನಾದ್ಯಂತ ಅಂದು ರಾಮ-ನಾಮ ಮೊಳಗಿತ್ತು. ಈಗಾಗಲೇ ತಾಲೂಕಿನ ಸಾವಿರಾರು ಮಂದಿ ಅಯೋಧ್ಯೆಗೆ ತೆರಳಿ, ರಾಮನ ದರ್ಶನ ಮಾಡಿ ಬಂದಿದ್ದಾರೆ.

4. ಸುಳ್ಯದಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮ ಜನವರಿ ತಿಂಗಳಲ್ಲಿ ನಡೆದಿದ್ದಾಗ ಬೆಳ್ತಂಗಡಿಯ ಮೊಗ್ರು ನಿವಾಸಿ, ಮಾಜಿ ಸೈನಿಕ ಚಂದಪ್ಪ ಡಿಎಸ್ ದಯಾಮರಣಕ್ಕೆ ಅನುಮತಿ ಕೇಳಿದ್ದ ಘಟನೆ ನಡೆದಿತ್ತು. ನಿವೃತ್ತ ಸೈನಿಕರಿಗೆ ನೀಡಲಾಗುವ ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದ ನನಗೆ ಕಣಿಯೂರು ಗ್ರಾಮದಲ್ಲಿ ಜಾಗ ನೀಡಲು ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದ್ದರೂ ಕೆಲ ಖಾಸಗಿ ವ್ಯಕ್ತಿಗಳು ಮತ್ತು ಸರ್ಕಾರದ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಚಂದಪ್ಪ ದೂರಿದ್ದರು.

5. ವೇಣೂರು ವ್ಯಾಪ್ತಿಯ ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಸಮೀಪದ ಕಡ್ಯಾರ್ ಎಂಬಲ್ಲಿ ಜ.28ರಂದು ಸಾಲಿಡ್ ಫೈರ್ ವರ್ಕ್ಸ್ ಸುಡುಮದ್ದು ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಕುಕ್ಕೇಡಿಯ ಕುಚ್ಚೋಡಿ ನಿವಾಸಿ ಸಯ್ಯದ್ ಬಶೀರ್ ಎಂಬವರಿಗೆ ಈ ಸುಡುಮದ್ದು ತಯಾರಿಕಾ ಘಟಕ ಸೇರಿತ್ತು.

6. ಖ್ಯಾತ ಸಾಹಿತಿ, ಭಾಷಾ ತಜ್ಞ, ಅಂಕಣಕಾರ, ಬೆಳ್ತಂಗಡಿಯ ಹೆಮ್ಮೆಯಾಗಿದ್ದ ಕೆ.ಟಿ. ಗಟ್ಟಿ ಅವರು ಫೆ.19ರಂದು ನಿಧನರಾಗಿದ್ದರು. ಹಲವು ಕೃತಿಗಳ ಕತೃ ಆಗಿದ್ದ ಕೆಟಿ ಗಟ್ಟಿಯವರು ಕನ್ನಡ ಸಾಹಿತ್ಯ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದರು. ಈ ಮೂಲಕ ಬೆಳ್ತಂಗಡಿ ತಾಲೂಕನ್ನೂ ಪ್ರಸಿದ್ಧಗೊಳಿಸಿದವರಲ್ಲಿ ಪ್ರಮುಖರಾಗಿದ್ದರು.

7. 12 ವರ್ಷಗಳಿಗೊಮ್ಮೆ ನಡೆಯುವ ವೇಣೂರು ಮಹಾಮಸ್ತಕಾಭಿಷೇಕ ಫೆ.22ರಂದು ಆರಂಭಗೊಂಡು ಮಾ.1 ರಂದು ಸಂಪನ್ನಗೊಂಡಿತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಗಟ್ಟಲೆ ಭಕ್ತರು ವೇಣೂರಿಗೆ ಬಂದು ಐತಿಹಾಸಿಕ ಮಸ್ತಕಾಭಿಷೇಕಕ್ಕೆ ಸಾಕ್ಷಿಯಾಗಿದ್ದರು.

8. ಕಳೆಂಜ ಗ್ರಾಮದಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಸರ್ವೇ ಇಲಾಖೆಗಳು ನಡೆಸಿದ ಸರ್ವೇ ಆಧರಿಸಿ ಅರಣ್ಯ ಇಲಾಖೆ ತಯಾರಿಸಿದ 94 ಒತ್ತುವರಿದಾರರ ಪಟ್ಟಿಯನ್ನು ಮುಂದಿಟ್ಟುಕೊಂಡು ಸುದ್ದಿ ಬಿಡುಗಡೆ ಪತ್ರಿಕೆ ಪ್ರಕಟಿಸಿದ್ದ ಜನಪರ ನಿಲುವಿನ ಎಕ್ಸ್‌ಕ್ಲೂಸಿವ್ ವರದಿ ಬಳಿಕ ಶಾಸಕ ಹರೀಶ್ ಪೂಂಜ ತುರ್ತು ಸಭೆ ಕರೆದಿದ್ದರು. ಜನರ ಹಕ್ಕುಗಳಿಗಾಗಿ ಕೊನೆ ಉಸಿರು ಇರುವವರೆಗೂ ಹೋರಾಟಕ್ಕೆ ಸಿದ್ಧ , ಅದಕ್ಕಾಗಿ ಸುಪ್ರೀಂಕೋರ್ಟ್‌ವರೆಗೆ ಹೋಗಲೂ ಸಿದ್ಧ ಎಂದು ಪೂಂಜ ಘೋಷಿಸಿದ್ದರು. ಸುದ್ದಿ ಬಿಡುಗಡೆ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪೂಂಜರಿಂದ ಪತ್ರಿಕೆ ಬಹಿಷ್ಕರಿಸಲು ಕರೆ. ನಂತರ ಇದನ್ನು ಖಂಡಿಸಿ ಮಂಗಳೂರಿನಲ್ಲಿ ಸುದ್ದಿ ಬಳಗದಿಂದ ಪತ್ರಿಕಾಗೋಷ್ಠಿ.

9. ನಿಧಿಯ ಚಿನ್ನವನ್ನು ನೀಡುವುದಾಗಿ ಹೇಳಿದ್ದನ್ನು ನಂಬಿ ಕೊಟ್ಟಿದ್ದ ರೂ. 6 ಲಕ್ಷ ಹಣ ವಾಪಸ್ ಕೇಳಿದ್ದಕ್ಕೆ ಬೆಳ್ತಂಗಡಿಯ ಮೂವರು ತುಮಕೂರಿನಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದರು. ಮಾ. 22ರಂದು ತುಮಕೂರಿನ ಕುಚ್ಚಂಗಿಯಲ್ಲಿ ಬೆಂಕಿಗಾಹುತಿಯಾಗಿದ್ದ ಕಾರಿನಲ್ಲಿ ಇಸಾಕ್ ಮದ್ದಡ್ಕ, ಸಾಹುಲ್ ಹಮೀದ್ ಕುಂಟಿನಿ, ಸಿದ್ದಿಕ್ ಶಿರ್ಲಾಲು ಸೇರಿ ಮೂವರ ಶವ ಪತ್ತೆಯಾಗಿತ್ತು.

10. ಸಂತೆಕಟ್ಟೆ ಬಳಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವಿಜಯಾ ಬ್ಯಾಂಕ್ ಅಧಿಕಾರಿ ಶೇಖರ ಬಂಗೇರ ಹೆರಾಜೆ (72) ಸಾವನ್ನಪ್ಪಿದ ಘಟನೆ ಮಾರ್ಚ್ 28ರಂದು ನಡೆಯಿತು. ಬ್ಯಾಂಕ್ ಮಾಜಿ ಉದ್ಯೋಗಿಯಾಗಿದ್ದ ಬಂಗೇರ ಅವರು, ಲಾಯಿಲದ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

11. ಪಿಯುಸಿ ಫಲಿತಾಂಶದಲ್ಲಿ ತಾಲೂಕಿನ 7 ಕಾಲೇಜುಗಳಿಂದ ಶೇ.100 ಸಾಧನೆ. ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಅವರ ಪುತ್ರ ಆಕರ್ಷ್ ವಿಜ್ಞಾನ ವಿಭಾಗದಲ್ಲಿ 594 ಅಂಕ ಗಳಿಸಿ ರಾಜ್ಯದಲ್ಲಿ 5 ನೇ ಸ್ಥಾನ ಪಡೆದಿದ್ದರು.

12. ಸುಮಾರು 8 ಶತಮಾನಗಳ ಇತಿಹಾಸ ಹೊಂದಿರುವ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲಿ ಏ.೮ರಿಂದ ಆರಂಭಗೊಂಡು ಏ.17 ರ ತನಕ ವೈಭವದ ಬ್ರಹ್ಮಕಲಶೋತ್ಸವ ನಡೆಯಿತು.

13. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮೇ 1 ರಂದು ಸಂಭ್ರಮದಿಂದ ನಡೆಯಿತು. ಮುಖ್ಯ ಅತಿಥಿಯಾಗಿ ಹಿರಿಯ ಚಿತ್ರನಟ ದೊಡ್ಡಣ್ಣ ಅವರು ಪಾಲ್ಗೊಂಡಿದ್ದರು. 123 ಜೋಡಿಗಳು ಸಂಜೆ 6.45ರ ಗೋಧೂಳಿ ಲಗ್ನ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

14.ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಪಿ. ಶಶಿರಾಜ್ ಶೆಟ್ಟಿ ಅವರನ್ನು ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದಡಿ ಪೊಲೀಸರು ಬಂಧಿಸಿದ್ದನ್ನು ವಿರೋಧಿಸಿ ಮೇ 16ರಂದು ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮತ್ತು ಮೇ. 18ರಂದು ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಹರೀಶ್ ಪೂಂಜ ಪ್ರತಿಭಟನೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಕೆ ಒಡ್ಡಿದ ಆರೋಪದಡಿ ಹರೀಶ್ ಪೂಂಜ ಮತ್ತು ಇತರರ ವಿರುದ್ಧ ಪ್ರಕರಣ ದಾಖಲು. ಮೇ.20ರಂದು ಹರೀಶ್ ಪೂಂಜರ ಗರ್ಡಾಡಿ ಮನೆಗೆ ಪೊಲೀಸರ ಭೇಟಿ- ಹರೀಶ್ ಪೂಂಜರನ್ನು ಪೊಲೀಸರು ಬಂಧಿಸಲು ಸಿದ್ಧತೆ, ವಕೀಲರು ಮತ್ತು ಕಾರ್ಯಕರ್ತರಿಂದ ತಡೆ. ಭಾರೀ ಹೈಡ್ರಾಮ. ಪೊಲೀಸ್ ಠಾಣೆಗೆ ಹಾಜರಾಗಲು ನೊಟೀಸ್ ಜಾರಿ. ರಾತ್ರಿ ವೇಳೆ ನಾಯಕರು ಮತ್ತು ವಕೀಲರೊಂದಿಗೆ ಠಾಣೆಗೆ ಹಾಜರಾದ ಹರೀಶ್ ಪೂಂಜ.

15.ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕಳೆದ ಮೇ ತಿಂಗಳಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದ್ದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಹರೀಶ್ ಪೂಂಜ ಪೊಲೀಸರಿಗೆ ಬೆದರಿಕೆ ಹಾಕಿದ್ದ ಪ್ರಕರಣ ಉಲ್ಲೇಖಿಸಿ ಕಾನೂನು ಎಲ್ಲರಿಗೂ ಒಂದೇ ಎಂದು ಪ್ರತಿಪಾದಿಸಿದ್ದರು.

16. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿದ್ದನ್ನು ವಿರೋಧಿಸಿ ಪೊಲೀಸರಿಗೆ ಬೆದರಿಕೆ ಹಾಕಿದ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ, ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಮೇ.28ರಂದು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಬಂಧಿತರಾಗಿದ್ದ (ಈಗ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದಾರೆ) ತಾಲೂಕು ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಂಧಿಸಿದ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಶಾಸಕ ಹರೀಶ್ ಪೂಂಜಾ ಅವರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲೆಯ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದ್ದರು. ಆದರೆ, ಸುದ್ದಿ ಬಿಡುಗಡೆ ಪತ್ರಿಕೆ ಮಾಹಿತಿ ಹಕ್ಕು ಅಡಿಯಲ್ಲಿ ಪಡೆದುಕೊಂಡಿದ್ದ ಮಾಹಿತಿ ಪ್ರಕಾರ, ಪೂಂಜರ ಬಂಧನವೂ ಆಗಿರಲಿಲ್ಲ, ಜಾಮೀನು ಕೂಡ ಪಡೆದುಕೊಂಡಿಲ್ಲ ಎಂದು ತಿಳಿದುಬಂದಿತ್ತು.

17. ತಾಲೂಕಿನ ಗರ್ಡಾಡಿಯಲ್ಲಿ 25 ಮೇಕೆಗಳ ತಲೆ ಕಡಿದು ವಾಮಾಚಾರ ಮಾಡಿದ ಘಟನೆ ಇಡೀ ಸಾರ್ವಜನಿಕರನ್ನು ಬೆಚ್ಚಿಬೀಳಿಸಿತ್ತು. ಬೊಂಬೆಗಳಿಗೆ ಫೋಟೋ, ಹೆಸರು ಅಂಟಿಸಿ, ಮೊಳೆ ಹೊಡೆದು ತಂತ್ರವಿದ್ಯೆ ಮಾಡಲಾಗಿತ್ತು. ಜಮೀನು ವಿವಾದವೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿತ್ತು.

18. ಶಿಬಾಜೆ ಗ್ರಾಮದ ಬರ್ಗುಳದಲ್ಲಿ ವಿದ್ಯುತ್ ಸ್ಪರ್ಶಕ್ಕೀಡಾಗಿ 21ರ ಹರೆಯದ ಯುವತಿ ಪ್ರತೀಕ್ಷಾ ಶೆಟ್ಟಿ ಜೂ.27ರಂದು ಮೃತಪಟ್ಟಿದ್ದರು. ಅವರು ಗಣೇಶ್ ಶೆಟ್ಟಿ ಮತ್ತು ರೋಹಿಣಿ ದಂಪತಿಯ ಪುತ್ರಿ. ವಿದ್ಯುತ್ ತಂತಿಯ ಇನ್ಸುಲೇಟರ್ ತುಂಡಾಗಿ ಕಂಬದ ಮೂಲಕ ತೋಡಿನ ನೀರಿಗೆ ವಿದ್ಯುತ್ ಪ್ರವಹಿಸಿದ ಪರಿಣಾಮ ಶಾಕ್ ಹೊಡೆದು ಪ್ರತೀಕ್ಷಾ ಮೃತಪಟ್ಟಿದ್ದರು.

19 ಬೆಳ್ತಂಗಡಿ-ಧರ್ಮಸ್ಥಳ-ಕೊಲ್ಲೂರು ಪವಿತ್ರ ಧಾರ್ಮಿಕ ಕ್ಷೇತ್ರಗಳಾಗಿದ್ದು, ಯಾತ್ರಾರ್ಥಿಗಳ ಅನುಕೂಲಕ್ಕೆ ರೈಲ್ವೆ ಸಚಿವರೊಂದಿಗೆ ಚರ್ಚಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ವೇ ನಡೆಸಲು ಆದೇಶ ನೀಡುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರು ಜು.17ರಂದು ಬೆಳ್ತಂಗಡಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಭರವಸೆ ನೀಡಿದ್ದರು.

20. ತಾಲೂಕಿನಲ್ಲಿ2019ರ ನಂತರ ಅತಿಹೆಚ್ಚು ಮಳೆಗೆ 2024 ಸಾಕ್ಷಿಯಾಯಿತು. ಜು.29, 30, 31ರಂದು ಸುರಿದ ತೀವ್ರ ಮಳೆಯಿಂದ ಇಡೀ ಬೆಳ್ತಂಗಡಿ ತಾಲೂಕು ತತ್ತರಿಸಿಹೋಗಿತ್ತು. ನದಿ ಉಕ್ಕಿ ಹರಿದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.

21. ಬೆಳ್ತಂಗಡಿ ತಾಲೂಕಿನ ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿಮೊಗ್ರು, ಶಿರ್ಲಾಲು, ನಾವರ, ಸವಣಾಲು ನಡ, ಚಾರ್ಮಾಡಿ, ನಾವೂರು, ನೆರಿಯ, ಕಳಂಜ, ಪುದುವೆಟ್ಟು ಶಿಶಿಲ, ಶಿಬಾಜೆ ಮತ್ತು ರೆಖ್ಯಾ ಗ್ರಾಮಗಳು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ 42 ಗ್ರಾಮಗಳು ಪಶ್ಚಿಮಘಟ್ಟ ಪ್ರದೇಶದ 56800 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಸರ್ಕಾರ ಜುಲೈ 31ರಂದು ಅಧಿಸೂಚನೆ ಹೊರಡಿಸಿತ್ತು.

22. ಬೆಳ್ತಂಗಡಿ ಪ್ರವಾಸಿ ಬಂಗಲೆ ಟೆಂಡರ್‌ನಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಮ್ ಆಗಸ್ಟ್ ತಿಂಗಳಲ್ಲಿ ಆರೋಪಿಸಿ, ಕಾಮಗಾರಿ ಮುಗಿದ ಮೇಲೆ ಟೆಂಡರ್ ಕರೆದು ರೂ 2ಕೋಟಿ ಕಬಳಿಕೆ ಮಾಡಲಾಗಿದೆ ಎಂದಿದ್ದರು. ಈ ಭ್ರಷ್ಟಾಚಾರದಲ್ಲಿ ಶಾಸಕರ ಪಾತ್ರವಿಲ್ಲದೆ ಮತ್ಯಾರದ್ದು ಇರುತ್ತದೆ ಎಂದವರು ಪ್ರಶ್ನಿಸಿದ್ದರು.

23. ಸೆ.5ರ ಶಿಕ್ಷಕರ ದಿನ ಹಿನ್ನೆಲೆಯಲ್ಲಿ ತಾಲೂಕಿನ ನಾಲ್ವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಗುರುವಾಯನಕೆರೆ ಸರ್ಕಾರಿ ಶಾಲೆಯ ಚಿತ್ರಕಲೆ ಶಿಕ್ಷಕ ವಿ.ಕೆ. ವಿಟ್ಲ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿದ್ದರು. ಉಳಿದ ಮೂವರಾದ ಕೆ ಕರಿಯಪ್ಪ, ಮಂಜುನಾಥ ಜಿ, ಮೋಹನಬಾಬು ಡಿ. ಅವರಿಗೆ ಜಿಲ್ಲಾಮಟ್ಟದ ಪ್ರಶಸ್ತಿಗೆ ಪಾತ್ರರಾಗಿದ್ದರು.

24. ಕಾರ್ಕಳ-ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನಲ್ಲೂರಿನ ಪಾಜಗುಡ್ಡೆ ಎಂಬಲ್ಲಿ ಸೆ.30ರಂದು ಟ್ಯಾಂಕರ್ ಲಾರಿ-ಬೈಕ್ ಅಪಘಾತದಲ್ಲಿ ವೇಣೂರು ಕರಿಮಣೇಲುವಿನ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಸೆ.30ರಂದು ನಡೆದಿತ್ತು. ಕಾರ್ಕಳದ ನಲ್ಲೂರು ಕೊಡಪಟ್ಯ ನಿವಾಸಿ ಸುರೇಶ ಆಚಾರ್ಯ (35), ಮಕ್ಕಳಾದ ಸುಮೀಕ್ಷಾ (7), ಸುಶ್ಮಿತಾ (5) ಮತ್ತು ಸುಶಾಂತ್ (2) ಮೃತಪಟ್ಟಿದ್ದರು.

25. ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಅ.6ರಂದು ನಡೆಸಿತ್ತು.

26. ಅ.26ರಂದು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಕಿಶೋರ ಕುಮಾರ್ ಪುತ್ತೂರಿಗೆ ಗೆಲುವು

27. ಶೇರ್ ಮಾರ್ಕೆಟ್ ಮೂಲಕ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಮೋಸ ಮಾಡಿದ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ನಾಲ್ವರು ಸೇರಿ 6 ಮಂದಿ ವಿರುದ್ಧ ನವೆಂಬರ್ ತಿಂಗಳಲ್ಲಿ ಹುಬ್ಬಳ್ಳಿ-ಧಾರವಾಡ ಸಿಟಿ ಸೆನ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

28. ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಕಾರ್ಯದರ್ಶಿಯಾಗಿರುವ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ಚೆಂಡೆ-ಮದ್ದಳೆ ವಾದನ ಕಲಾವಿದರಾಗಿ ಕೊಡುಗೆ ನೀಡಿರುವ ಬಿ. ಸೀತಾರಾಮ ತೋಳ್ಪಡಿತ್ತಾಯ ಅವರಿಗೆ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದರು. ಅ.30ರಂದು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದರು.

29. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನ.14ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ರೂ 600 ಕೋಟಿ ಲಾಭಾಂಶ ವಿತರಣೆ ಕಾರ್ಯಕ್ರಮ ಉದ್ಘಾಟಿಸಿದ್ದರು.

30. ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಪತ್ರಕರ್ತ ಭುವನೇಂದ್ರ ಪುದುವೆಟ್ಟು ಅವರು ನ.19ರಂದು ನಿಧನರಾದರು. ನ.17ರ ರಾತ್ರಿ ತೀವ್ರ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದ್ದರಿಂದ ಮೂಡಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಕ್ಯೂಟ್ ಪಾಂಕ್ರಿಯಾಟಿಸ್ ಇರುವುದು ತಪಾಸಣೆಯಲ್ಲಿ ಗೊತ್ತಾಗಿತ್ತು. ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.

31. ತಾಲೂಕಿನಲ್ಲಿಯೂ ಭಾರೀ ಆತಂಕ ಎಬ್ಬಿಸಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್‌ನಲ್ಲಿ ಹತ್ಯೆಯಾದರು. ನ.18ರಂದು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲು ಎಂಬಲ್ಲಿ ಎನ್‌ಕೌಂಟರ್ ನಡೆದಿತ್ತು.

32. ಪತ್ನಿ ಮತ್ತು ಮಾವನಿಗೆ ಚೂರಿಯಿಂದ ಇರಿದು ಜೀವ ಬೆದರಿಕೆ ಒಡ್ಡಿದ್ದ ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯದ ನ್ಯಾಯಾಧೀಶ ಮನು ಬಿಕೆ ಅವರು ಡಿಸೆಂಬರ್‌ನಲ್ಲಿ ಶಿಕ್ಷೆ ನೀಡಿದ ತೀರ್ಪು ಪ್ರಕಟಿಸಿದರು. ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಜಾರಿಯಾದ ನಂತರ ಹೊಸ ಕಾಯ್ದೆ ಅಡಿಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದ ಪ್ರಕಟಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಪ್ರಕರಣ ಇದಾಗಿತ್ತು.

Exit mobile version