ಬೆಳ್ತಂಗಡಿ: ಸಂಪತ್ತು ಎಲ್ಲರಲ್ಲೂ ಇರಬಹುದು. ಆದರೆ ಕೊಡುವ ಮನಸ್ಸು ಕೆಲವರಲ್ಲಿ ಮಾತ್ರ ಇರುತ್ತದೆ. ತಾನು ಸಂಪಾದಿಸಿದ್ದರಲ್ಲಿ ಒಂದಂಶವನ್ನು ಸಮಾಜದ ಅಶಕ್ತರಿಗೆ ಕೊಡುವ ಮೂಲಕ ಮುರಳಿ ಅವರ ಈ ಕಚೇರಿಯ ಉದ್ಘಾಟನೆ ಎಲ್ಲರಿಗೂ ಮಾದರಿಯಾಗಿದೆ. ಪ್ರೀತಿ ಮತ್ತು ಸೇವೆ ಇರುವಲ್ಲಿ ದೇವರ ಮತ್ತು ಗುರು ಹಿರಿಯರ ಆಶೀರ್ವಾದ ಖಚಿತ ಎಂದು ಹಿರಿಯ ನೋಟರಿ ನ್ಯಾಯವಾದಿಗಳಾಗಿರುವ ವಿಧಾನಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.
ಬೆಳ್ತಂಗಡಿ ಮೂರು ಮಾರ್ಗದ ಬಳಿ ಕಳೆದ 25 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಮುರಳಿ ಬಲಿಪರವರ ನೂತನ ಕಚೇರಿ ಆಡಳಿತ ಸೌಧದ ಬಳಿಯ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡಿದ್ದು ಅದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕೊಡುವ ಪ್ರವೃತ್ತಿ ಇರುವವರು ಅವರಿಂದ ಪಡೆದವರ ಮನಸ್ಸಿನಲ್ಲಿ ಎಂದೂ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ಸಮಾಜ ಕೂಡ ಅಂತವರನ್ನು ಹೃದಯದಲ್ಲಿಟ್ಟುಕೊಳ್ಳುತ್ತಾರೆ ಎಂದು ಪ್ರತಾಪಸಿಂಹ ನಾಯಕ್ ಹೇಳಿದರು.
ದೀಪ ಪ್ರಜ್ವಲನದೊಂದಿಗೆ ನೂತನ ಕಚೇರಿಯನ್ನು ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಕೆ. ಸುಬ್ರಹ್ಮಣ್ಯ ಭಟ್, ಫಿಶರಿಶ್ ಇಲಾಖೆ ನಿವೃತ್ತ ಅಧಿಕಾರಿ ಉಮಾ ಎಸ್. ಭಟ್ ದಂಪತಿ ಉದ್ಘಾಟಿಸಿದರು.
ಈ ವೇಳೆ ಕೃತಜ್ಞತೆ ನುಡಿದ ಮುರಳಿ ಬಲಿಪ ತನ್ನ ಕಚೇರಿ ಉದ್ಘಾಟನೆಗೆ, ತನಗೆ ವಿದ್ಯಾಭ್ಯಾಸದ ಸಮಯದಲ್ಲಿ ಆಶ್ರಯ ನೀಡಿದ ಅತ್ತೆ ಮತ್ತು ಮಾವನಿಗಿಂದ ದೊಡ್ಡ ಅತಿಥಿಗಳು ಯಾರೂ ಕಂಡಿಲ್ಲ. ಆದ್ದರಿಂದ ಅವರ ಕೈಯಿಂದ ಈ ಕಾರ್ಯವನ್ನು ಮಾಡಿಸಿದ್ದೇನೆ. ನನ್ನ ಆದಾಯದಲ್ಲಿ ಒಂದಂಶವನ್ನೇ ನಾನು ಇನ್ನೊಬ್ಬರಿಗೆ ಕೊಡುವ ಕೆಲಸ ಮಾಡುತ್ತಿದ್ದೇನೆ. ನನಗೆ ಅದರಲ್ಲಿ ಆತ್ಮತೃಪ್ತಿ ಕೂಡ ಇದೆ. ನಾನು ಇರುವಷ್ಟು ಸಮಯ ಈ ಸೇವೆ ಮುಂದುವರಿಸಿಕೊಂಡು ಹೋಗಲಿದ್ದೇನೆ. ಮುಂದೆಯೂ ಅವಕಾಶ ಸಿಕ್ಕಿದರೆ ಸದ್ಬಳಸಿಕೊಳ್ಳುತ್ತೇನೆ ಎಂದರು. ಮುರಳಿ ಅವರ ಪತ್ನಿ ಮನೋರಮಾ, ಮಕ್ಕಳಾದ ಮಯೂರ್ ಬಲಿಪ ಮತ್ತು ಮಂದಾರ ಬಲಿಪ ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು.
ಸಮಾರಂಭದಲ್ಲಿ ಮುರಳಿ ಅವರ ಅಣ್ಣ ಸುರೇಶ್ ಭಟ್ ಕೊಜಂಬೆ, ಗಿರಿಜಾ, ಬಂಧುಗಳಾದ ಜಯರಾಮ ಪಾಂಡಿಗಾಯ, ಕಾವ್ಯಶ್ರೀ, ವೃಂದಾ, ವಿದ್ಯಾ ಎ. ಭಟ್, ಡಾ. ಸೌಮ್ಯ, ಜಗದೀಶ್, ಸುಜಾತಾ, ರೇಷ್ಮಾ, ಸುನಿಲ್ ಪ್ರೀತಂ, ಸ್ಮಿತಾ, ನಡ ಗ್ರಾ.ಪಂ. ಅಧ್ಯಕ್ಷೆ ಮಂಜುಳ, ಪ್ರಮುಖರಾದ ಶೈಲೇಶ್ ಠೋಸರ್, ಜಗದೀಶ ಡಿ., ನವೀನ್ ಗೌಡ, ಮುಹಮ್ಮದ್ ಹನೀಫ್ ಉಜಿರೆ, ಬಾಲಕೃಷ್ಣ ಶೆಟ್ಟಿ ಸವಣಾಲು, ಶ್ಯಾಂ ಭಟ್, ಅರೆಕ್ಕಲ್ ರಾಮಚಂದ್ರ ಭಟ್, ಜಗನ್ನಾಥ, ಅಬ್ದುಲ್ ಖಾದರ್ ಕಕ್ಕಿಂಜೆ, ವಾಲ್ಟರ್ ಸಿಕ್ವೇರ ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ಅಶ್ರಫ್ ಆಲಿಕುಂಞ ಮುಂಡಾಜೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.
ಕಡಿರುದ್ಯಾವರ ಗ್ರಾಮದ ಕಾನರ್ಪ ಎಂಬಲ್ಲಿ ನೆಲೆಸಿರುವ ದಂಪತಿಯೊಂದರ 6 ತಿಂಗಳ ಬಾಲೆಗೆ ಕಿಡ್ನಿ ಕಾಯಿಲೆಯ ಚಿಕಿತ್ಸೆಗೆ, ಚಿಬಿದ್ರೆ ಗ್ರಾಮದ ಮುಸ್ಲಿಂ ದಂಪತಿಯ ಎಳೆಯ ಮಗುವಿನ ರಕ್ತದ ಕ್ಯಾನ್ಸರ್ ಚಿಕಿತ್ಸೆಗೆ, ಮಿತ್ತಬಾಗಿಲು ಗ್ರಾಮದ ವೃದ್ದೆಯೊಬ್ಬರ ಕಿಡ್ನಿ ಕಾಯಿಲೆಯ ಚಿಕಿತ್ಸೆಗೆ ಹಾಗೂ ಉಜಿರೆಯಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿರುವ ಮನೆ ಯಜಮಾನನ ಮನೆಯಲ್ಲಿರುವ ಮೂರೂ ಮಂದಿ ವಿಕಲಚೇತನ ಮಕ್ಕಳ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲಾಯಿತು. ಆ ಮೂಲಕ ಕಚೇರಿ ಉದ್ಘಾಟನೆಯ ನಿಮಿತ್ತ ಆರ್ಥಿಕ ಸಹಾಯ ಒದಗಿಸುವ ಮಾದರಿ ಕೆಲಸವನ್ನು ಕಾರ್ಯಕ್ರಮದಲ್ಲಿ ಅನುಷ್ಠಾನಿಸಲಾಯಿತು.