ಸುಲ್ಕೆರಿ: ದೇಶದ ಮೂಲತತ್ವಗಳ ಆಧಾರದ ಮೇಲೆ ನಮ್ಮ ಶಿಕ್ಷಣವನ್ನು ರೂಪಿಸುವ ಅಗತ್ಯ ಇದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಶ್ರೀರಾಮ ಶಿಶುಮಂದಿರ ಸುಲ್ಕೇರಿ, ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಸುಲ್ಕೇರಿ ಹಾಗೂ ಶ್ರೀರಾಮ ಪ್ರೌಢಶಾಲೆ ಸುಲ್ಕೇರಿಯಲ್ಲಿ ಡಿ. 24 ರಂದು ನಡೆದ ಸಾಂಸ್ಕೃತಿಕ ವೈಭವದ ಸಭಾಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ರಾಷ್ಟ್ರದ ಹಿರಿಯ ಸಾಧನೆಗಳನ್ನು ತಿಳಿಸುವಂತಹ ಮತ್ತು ನೆನಪಿಸುವಂತಹ ಕಾರ್ಯ ಶಾಲೆಗಳಲ್ಲಿ ಸಿಗದೇ ಇರುವುದು ನಮ್ಮ ದುರಂತ. ಪಾಶ್ಚಾತ್ಯ ಅನುಕರಣೆಯಿಂದ ಇಂದು ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ.
ನಮ್ಮ ಮಕ್ಕಳು ಸ್ವದೇಶದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವಂತಾಗಬೇಕೇ ಹೊರತು ಪಾಶ್ಚಾತ್ಯ ಅನುಕರಣೆ ಮಾಡುವಂತಾಗಬಾರದು. ಹೀಗಾಗಿ ನಮಗೆ ಮಹರ್ಷಿ ಶಿಕ್ಷಣದ ಅವಶ್ಯಕತೆ ಇದೆ. ಇದನ್ನು ವಿದ್ಯಾಭಾರತಿ ಸಂಸ್ಥೆಯು ದೇಶಾದ್ಯಂತ ಪಸರಿಸಲು ಹೊರಟಿದೆ. ಅದಕ್ಕೆ ಪೂರಕವಾಗಿ ಇಲ್ಲಿನ ಶ್ರೀರಾಮ ಶಾಲೆಯು ಕೆಲಸ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಧನಂಜಯ ಸರ್ಜಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂಗಳೂರಿನ ದಂತ ವೈದ್ಯ ಡಾ. ಸೂರ್ಯಕಾಂತ ಪೈ, ಶಿರ್ತಾಡಿಯ ವೈದ್ಯ ಡಾ. ಕೃಷ್ಣರಾಜ ಭಟ್, ಹಿ. ಪ್ರಾ. ಶಾಲಾ ಮುಖ್ಯೋಪಾಧ್ಯಾಯ ರಮೇಶ್ ಎಸ್. ಮಾಳಗೊಂಡ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ಕಳೆದ ಬಾರಿ 10 ನೇ ತರಗತಿಯಲ್ಲಿ ರಾಜ್ಯಕ್ಕೆ 10 ನೇ ಸ್ಥಾನ ಪಡೆದ ತೃಷಾ ಅವರನ್ನು ಗೌರವಿಸಲಾಯಿತು. ವಿದ್ಯಾಭಾರತಿ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಬಡ್ಡಿ ತಂಡದವರನ್ನು ಪುರಸ್ಕರಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಜು ಪೂಜಾರಿ ಸ್ವಾಗತಿಸಿದರು. ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ಪ್ರಸ್ತಾವಿಸಿದರು. ಅಂಡಿಂಜೆ ಮೋಹನ ವಂದಿಸಿದರು. ಉಪಾಧ್ಯಕ್ಷ ಚಂದ್ರಕಾಂತ ಗೋರೆ ಕಾರ್ಯಕ್ರಮ ನಿರ್ವಹಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ನಾವು ಇಂಗ್ಲೀಷರ ಆಧೀನದಲ್ಲಿದ್ದೇವು. ಸ್ವಾತಂತ್ರ್ಯಾನಂತರ ನಾವು ಇಂಗ್ಲೀಷ ನ ಪ್ರಭಾವದಲ್ಲಿದ್ದೇವೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಶತಾಬ್ದಿಯನ್ನು ಆಚರಿಸಲು ಸನ್ನದ್ದವಾಗಿದೆ. ಸಂಘವು ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಪರಿವರ್ತನೆಯನ್ನು ತರುವುದು, ಸಧೃಡ ಕುಟುಂಬದ ನಿರ್ಮಾಣ, ಪರಿಸರ ಪ್ರೇಮ, ನಾಗರಿಕ ಶಿಷ್ಟಾಚಾರ ಹಾಗೂ ಯುವಜನ ಸಂಪತ್ತನ್ನು ಸದುದ್ದೇಶಕ್ಕೆ ಬಳಸಿಕೊಳ್ಳವಂತ ಪಂಚ ಪರಿವರ್ತನೆಗಳನ್ನು ತರಲು ಹೊರಟಿದೆ ಎಂದು ಕಲ್ಲಡ್ಕ ಭಟ್ ತಿಳಿಸಿದರು.