Site icon Suddi Belthangady

ಇಳಂತಿಲ ಗ್ರಾ.ಪಂ. ಚುನಾವಣೆ – ಮರು ಮತ ಎಣಿಕೆ ನಡೆಸುವಂತೆ ಬೆಳ್ತಂಗಡಿ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆ

ಬೆಳ್ತಂಗಡಿ: ಕಳೆದ ನಾಲ್ಕು ವರ್ಷದ ಹಿಂದೆ ನಡೆದ ಇಳಂತಿಲ ಗ್ರಾಮ ಪಂಚಾಯತಿನ ನಾಲ್ಕನೇ ವಾರ್ಡ್‌ ನ ಚುನಾವಣೆಯ ಮರು ಮತ ಎಣಿಕೆ ನಡೆಸುವಂತೆ ಬೆಳ್ತಂಗಡಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಗ್ರಾ.ಪಂ. ಚುನಾವಣೆಯಲ್ಲಿ ಕೆ. ಇಸುಬು ಅವರು 2 ಮತಗಳ ಅಂತರದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ವಿಜೇತರಾಗಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ನಾರಾಯಣ ಭಟ್ ಅವರು ಬೆಳ್ತಂಗಡಿಯ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ನಾರಾಯಣ ಭಟ್‌ರವರು ನ್ಯಾಯಾಧೀಶರ ಸಮ್ಮುಖದಲ್ಲಿ ನ್ಯಾಯಾಲಯದಲ್ಲಿ ಮತ ಪತ್ರಗಳನ್ನು ಮರು ಎಣಿಕೆ ನಡೆಸುವಂತೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಸದ್ರಿ ಅರ್ಜಿಯನ್ನು ಪುರಸ್ಕರಿಸಿ ಬೆಳ್ತಂಗಡಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಡಿಸೆಂಬರ್ 19ರಂದು 3 ಗಂಟೆಗೆ ನ್ಯಾಯಾಲಯದಲ್ಲಿ ಮತಗಳ ಮರು ಎಣಿಕೆ ನಡೆಸುವಂತೆ ಅಂದು ಚುನಾವಣಾಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ಗುರುಪ್ರಸಾದ್‌ರವರಿಗೆ ನ. 30ರಂದು ನೀಡಿದ ಮಧ್ಯಂತರ ಆದೇಶದಲ್ಲಿ ನಿರ್ದೇಶನ ನೀಡಿದ್ದರು.
ಸದ್ರಿ ಆದೇವನ್ನು ರದ್ದುಗೊಳಿಸುವಂತೆ ವಿಜೇತ ಅಭ್ಯರ್ಥಿ ಯು. ಕೆ. ಇಸುಬುರವರು ಹೈಕೋರ್ಟ್‌ ಮೊರೆ ಹೋಗಿದ್ದರು. ಯು. ಕೆ. ಇಸುಬು ಅವರ ಪರ ವಕೀಲರ ವಾದವನ್ನು ಪುರಸ್ಕರಿಸಿ ಡಿ.17 ರಂದು ಹೈಕೋರ್ಟ್‌ ಬೆಳ್ತಂಗಡಿಯ ನ್ಯಾಯಾಲಯ ನ.30ರಂದು ನೀಡಿದ್ದ ಮಧ್ಯಂತರ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

Exit mobile version