ಬೆಳ್ತಂಗಡಿ: ನ್ಯಾಯಾಲಯದಲ್ಲಿ ದಾಖಲಾಗಿರುವ ಮತ್ತು ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಡಿ.14 ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ಲೋಕ ಅದಾಲತ್ ನಡೆಯಿತು. ಒಟ್ಟು 978 ಪ್ರಕರಣಗಳ ಪೈಕಿ 661 ಪ್ರಕರಣಗಳನ್ನು ಅದಾಲತ್‌ನಲ್ಲಿ ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದ್ದು ಫಲಾನುಭವಿಗಳಿಗೆ 1,05,52,477 ರೂ. ಪರಿಹಾರ ಮೊತ್ತ ವಿತರಿಸಲು ಆದೇಶ ನೀಡಲಾಯಿತು.
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಚೆಕ್ ಪ್ರಕರಣ, ಮೋಟಾರ್ ಪ್ರಕರಣ, ಸಿವಿಲ್ ಪ್ರಕರಣ, ಗಂಡ-ಹೆಂಡತಿ ಪ್ರಕರಣ, ಕ್ರಿಮಿನಲ್ ಪ್ರಕರಣ, ಬ್ಯಾಂಕ್ ಪ್ರಕರಣ ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.
ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮನು ಬಿ. ಕೆ ಅವರ ನ್ಯಾಯಾಲಯದಲ್ಲಿ 341 ರಲ್ಲಿ 170 ಪ್ರಕರಣ ಇತ್ಯರ್ಥಗೊಂಡಿದ್ದು, ರೂ. 47,05,577 ಪರಿಹಾರ ವಿತರಣೆಗೆ ಆದೇಶ ನೀಡಲಾಯಿತು. ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮತ್ತು ಜೆ. ಎಮ್. ಎಫ್. ಸಿ ಯೂ ಆಗಿರುವ ಸಂದೇಶ ಕೆ. ಅವರ ನ್ಯಾಯಾಲಯದಲ್ಲಿ ವ್ಯಾಜಪೂರ್ವ ಪ್ರಕರಣಗಳು 579 ರಲ್ಲಿ 29 ಇತ್ಯರ್ಥಗೊಂಡಿದ್ದು 24,40,602 ರೂ. ಪರಿಹಾರ ವಿತರಣೆಗೆ ಆದೇಶ ಆಗಿದೆ.
ಟ್ರಾಫಿಕ್ ಪ್ರಕರಣ 50 ರಲ್ಲಿ 50 ಇತ್ಯರ್ಥಗೊಂಡಿದ್ದು 25 ಸಾವಿರ ರೂ. ವಿತರಣೆಗೆ ಆದೇಶ ಆಗಿದೆ. ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆ. ಎಮ್. ಎಫ್. ಸಿ ಯೂ ಆಗಿರುವ ಸಂದೇಶ ಕೆ. ಅವರ ನ್ಯಾಯಾಲಯದಲ್ಲಿ 221 ಪ್ರಕರಣಗಳಲ್ಲಿ 164 ಇತ್ಯರ್ಥಗೊಂಡಿದ್ದು ರೂ. 51,05,48 ಪರಿಹಾರ ವಿತರಣೆಗೆ ಆದೇಶ ಮಾಡಲಾಗಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ. ಎಮ್. ಎಫ್. ಸಿ ಯೂ ಆಗಿರುವ ವಿಜಯೇಂದ್ರ ಟಿ. ಹೆಚ್. ಅವರ ನ್ಯಾಯಾಲಯದಲ್ಲಿ 416 ಪ್ರಕರಣಗಳಲ್ಲಿ 327 ಇತ್ಯರ್ಥಗೊಂಡಿದ್ದು, 13,36,352 ರೂ. ವಿತರಣೆಗೆ ಆದೇಶ ನೀಡಲಾಗಿದೆ.
ವಕೀಲ ಸಂಧಾನಕಾರರಾಗಿ ಪ್ರವೀಣ್ ಕುಮಾರ್, ಹರ್ಷಿತ್ ಹೆಚ್. ಮತ್ತು ಶ್ವೇತಾ ಎ. ಭಾಗವಹಿಸಿದ್ದರು. ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆದು ಒಟ್ಟು 978 ಪ್ರಕರಣಗಳಲ್ಲಿ 661 ಪ್ರಕರಣಗಳು ರಾಜಿ ಇತ್ಯರ್ಥ ಪಡಿಸಲಾಯಿತು.
ಅದಾಲತ್‌ನಲ್ಲಿ ಮರು ಮದುವೆ, ನಾಲ್ಕು ವರ್ಷದಿಂದ ಬೇರೆ ಬೇರೆಯಾಗಿದ್ದ ಗಂಡ-ಹೆಂಡತಿ ಡಿ. 14 ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಮರು ಮದುವೆಯಾಗಿದ್ದಾರೆ. ವಿವಾಹ ವಿಚ್ಛೇದನ ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗ ಪರಸ್ಪರ ಒಪ್ಪಿಕೊಂಡು ಡೈವೋರ್ಸ್ ಪ್ರಕರಣ ಮುಕ್ತಾಯಗೊಳಿಸಿ ಮತ್ತೆ ಒಂದಾಗಲು ದಂಪತಿ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಅವರಿಗೆ ಮರು ಮದುವೆ ಮಾಡಲಾಗಿದೆ.
ಈ ಅಪರೂಪದ ಘಟನೆಯ ವೇಳೆ ನ್ಯಾಯಾಧೀಶರಾದ ಮನು ಬಿ. ಕೆ., ಸಂದೇಶ್ ಕೆ., ವಿಜಯೇಂದ್ರ, ಸಹಾಯಕ ಸರ್ಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ, ತಾಲೂಕು ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ ಯಲ್ಲಪ್ಪ ಹಂಗರಗಿ, ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ವಕೀಲರು ಮತ್ತು ಪೊಲೀಸ್ ಇಲಾಖೆಯವರು ಉಪಸ್ಥಿತರಿದ್ದರು.