Site icon Suddi Belthangady

ಮಂಜೊಟ್ಟಿ: ಸ್ಟಾರ್ ಲೈನ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ – “ಫಿಟ್ ಫೆಸ್ಟ್ 2024”

ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ನಲ್ಲಿ 2024 – 25 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ” ಫಿಟ್ ಫೆಸ್ಟ್ 2024 ” ಇದು ಡಿ. 14 ರಂದು ಶಾಲಾ ಕ್ರೀಡಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಈ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಗೂ ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಕೆ. ಪಿ. ಸಿ. ಸಿ ಪ್ರಧಾನ ಕಾರ್ಯದರ್ಶಿ, ಬೆಸ್ಟ್ ಫೌಂಡೇಶನ್ ಸಂಸ್ಥಾಪಕ ರಕ್ಷಿತ್ ಶಿವರಾಂ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಯೊಂದಿಗೆ ಸಾಗಬೇಕು. ಮಾನವೀಯತೆಯೆ ನಮ್ಮ ಮೊದಲ ಧರ್ಮವಾಗಬೇಕು ಎಂದು ಹೇಳಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿ ಸಂಸ್ಥೆಯ ಆಡಳಿತ ಟ್ರಸ್ಟಿನ ಕಾರ್ಯದರ್ಶಿ ಸೈಯದ್ ಅಯ್ಯುಬ್ ವಿದ್ಯಾರ್ಥಿಗಳ ಪ್ರಸಕ್ತ ಸಾಲಿನ ಸಾಧನೆಯನ್ನು ಪ್ರಶಂಶಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕ ಜನಾಬ್ ಸಯ್ಯದ್ ಹಬೀಬ್ ವಿದ್ಯಾರ್ಥಿಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಜೊತೆಗೆ ಕ್ರೀಡಾಕೂಟವು ಯಶಸ್ವಿಯಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಶಾಲಾ ಆಡಳಿತ ಟ್ರಸ್ಟಿನ ಕೋಶಾಧಿಕಾರಿ ಸೈಯದ್ ಇರ್ಫಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಮಾರ್ಗದರ್ಶಕಿ ಶಾಲಾ ಮುಖ್ಯೋಪಾಧ್ಯಾಯನಿ ಜಾಕಿನ್ ಬಿನ್ 2024 – 25 ನೇ ಸಾಲಿನ ವಿಶೇಷ ಸಾಧಕ ವಿದ್ಯಾರ್ಥಿಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.

ಕ್ರೀಡಾ ಜ್ಯೋತಿಯ ಆಗಮನದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸುಂದರವಾದ ಪಥ ಸಂಚಲನ ನೆರವೇರಿತು. ಕಾರ್ಯಕ್ರಮದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗ ನಡ ಇಲ್ಲಿಯ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ತಂಡದ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಉರ್ದು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ 5 ನೇ ತರಗತಿಯ ವಿದ್ಯಾರ್ಥಿ ಸಯ್ಯದ್ ಮಹಮ್ಮದ್ ಉವೈಸ್ ಹಾಗೂ ರಾಜ್ಯಮಟ್ಟದ ಕರಾಟೆ ಪಟುವಾದ 9 ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಶಮ್ಮಾಝ್ ಶರೀಫ್ ಇವರಿಗೆ ಸನ್ಮಾನದ ಗೌರವವನ್ನು ನೀಡಲಾಯಿತು.

ವಿದ್ಯಾರ್ಥಿಗಳಿಗೆ ವಿವಿಧ ವಿಭಾಗದಲ್ಲಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ವಿದ್ಯಾರ್ಥಿ ಮೊಹಮ್ಮದ್ ಹಾಶಿಮ್ ನೆರವೇರಿಸಿಕೊಟ್ಟರು. ವಿದ್ಯಾರ್ಥಿನಿ ಆಯಿಷತ್ ಲಿಫ್ರಾ ಅತಿಥಿಗಳನ್ನು ಸ್ವಾಗತಿಸಿದರು. ರಂಝಿಯಾ ಧನ್ಯವಾದ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

Exit mobile version