Site icon Suddi Belthangady

ವಿರಾಟ್ ಪದ್ಮನಾಭ ವಿರಚಿತ ‘ಬೆಟ್ಟದ ಹೂವು’ ಕೃತಿಯ ರಕ್ಷಾಪುಟ ಅನಾವರಣ

ಉಜಿರೆ: ಎಸ್‌. ಡಿ. ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ ಬರೆದಿರುವ ‘ಬೆಟ್ಟದ ಹೂವು: ಆಧುನಿಕ ಭಾರತದ ಸಾಮಾಜಿಕರಾಮಾಯಣ’ ಶೀರ್ಷಿಕೆಯ ರಕ್ಷಾಪುಟವನ್ನು ಬೆಂಗಳೂರಿನ ಕ್ಷೇಮವನದ ಮುಖ್ಯಕಾರ್ಯನಿರ್ವಹಕಾಧಿಕಾರಿ ಶ್ರದ್ಧಾ ಅಮಿತ್ ಡಿ. 14 ರಂದು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕೃತಿಯ ಲೇಖಕ ವಿರಾಟ್ ಪದ್ಮನಾಭ ‘ಬೆಟ್ಟದ ಹೂವು’ ಸಿನಿಮಾದ ಮಹತ್ವವನ್ನು ವಿವರಿಸಿದರು. ‘ಬೆಟ್ಟದ ಹೂವು’ ಚಲನ ಚಿತ್ರವು ರಾಮನನ್ನು ಸಾಕ್ಷಾತ್ಕರಿಸುತ್ತಲೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಅವಕಾಶಗಳನ್ನು ತೆರೆದಿಡುತ್ತದೆ. ಗ್ರಾಮೀಣ ಅಭ್ಯುದಯದ ಸಾಧ್ಯತೆಗಳ ಎಳೆಗಳು ಈ ಸಿನೆಮಾದಲ್ಲಿವೆ. ಗುಣಾತ್ಮಕ ವಿಶ್ಲೇಷಣಾ ಸಂಶೋಧನಾ ವಿಧಾನವನ್ನು ಅನ್ವಯಿಸಿ ಈ ಕೃತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಸಿನಿಮಾಕ್ಕಾಗಿಯೇ ಸಾಹಿತ್ಯಕವಾದ ಜ್ಞಾನಪೀಠ ಪ್ರಶಸ್ತಿ ನೀಡುವ ಆಡಳಿತಾತ್ಮಕ ಸಂಪ್ರದಾಯ ಶುರುವಾದರೆ ಅದಕ್ಕೆ ಮೊಟ್ಟಮೊದಲ ಅರ್ಹ ಸಿನಿಮಾ ಕಲಾಕೃತಿಯಾಗಿ ಆಯ್ಕೆಯಾಗುವಷ್ಟರ ಮಟ್ಟಿಗೆ ‘ಬೆಟ್ಟದ ಹೂವು’ ಸಿನಿಮಾ ಶ್ರೇಷ್ಠ ಗುಣಮಟ್ಟ ಹೊಂದಿದೆ. ಆ ಪ್ರಶಸ್ತಿ ಇದ್ದಿದ್ದರೆ ಎನ್. ಲಕ್ಷ್ಮೀನಾರಾಯಣ್‌ ರವರಿಗೇ ಅಂಥದ್ದೊಂದು ಮೊಟ್ಟಮೊದಲ ಮಾನ್ಯತೆ ಲಭ್ಯವಾಗುತ್ತಿತ್ತು ಎಂದರು. ಗ್ರಾಮೀಣ, ಗ್ರಾಮೀಣಾಭಿವೃದ್ಧಿ ಯೋಜನೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಡಿ. ವೀರೇಂದ್ರ ಹೆಗ್ಗಡೆ ಮತ್ತು ತರಗತಿಯ ಭೋದನೆಯ ಕ್ಷಣಗಳನ್ನು ಅಮೂಲ್ಯಗೊಳಿಸುವ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಅರ್ಪಿಸಿದ್ದೇನೆ ಎಂದು ಅವರು ಹೇಳಿದರು.

ಸ್ನೇಹ ಬುಕ್ ಹೌಸ್‌ ನ ಕೆ. ವಿ ಪರಶಿವಪ್ಪ ಈ ಕೃತಿಯನ್ನು ಶೀಘ್ರದಲ್ಲಿ ಹೊರತರಲಿದ್ದಾರೆ. ಕೃತಿಯ ಮುಖಪುಟದ ಚಿತ್ರ ವಿನ್ಯಾಸವನ್ನು ಸ್ಯಾನ್ರಿಟಾ ಮಾಡ್ತಾ ರೂಪಿಸಿದ್ದಾರೆ. ಮುಖಪುಟ ಮತ್ತು ರಕ್ಷಾಪುಟ ವಿನ್ಯಾಸ ಕೇಶವ ಕುಡುವಳ್ಳಿರವರದ್ದಾಗಿದೆ ಎಂದರು.

ಉಜಿರೆ ಎಸ್‌. ಡಿ. ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎಕುಮಾರ ಹೆಗ್ಡೆ, ಸ್ನಾತಕೋತ್ತರ ಕೇಂದ್ರದ ಡೀನ್‌ ಡಾ. ವಿಶ್ವನಾಥ ಪಿ. ಮತ್ತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಭಾಸ್ಕರ ಹೆಗ್ಗಡೆ ಉಪಸ್ಥಿತರಿದ್ದರು.

Exit mobile version