ಉಜಿರೆ: ಕನ್ಯಾಡಿಯ ಸೇವಾಭಾರತಿ ಹಾಗು ಸೌತಡ್ಕ ಸೇವಾಧಾಮದ ಆಶ್ರಯದಲ್ಲಿ ಪುತ್ತೂರಿನ ಆದರ್ಶ ಆಸ್ಪತ್ರೆ ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ) ಸಹಯೋಗದಲ್ಲಿ ಪುತ್ತೂರಿನ ಜವುಳಿ ವ್ಯಾಪಾರಸ್ಥ ಎಂ. ಸಂಜೀವ ಶೆಟ್ಟಿ ಮತ್ತು ಸೋಜಾ ಮೆಟಲ್ ಮಾರ್ಟ್, ಅವರ ಸಹಕಾರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 27 ನೇ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರದಲ್ಲಿ ದಿವ್ಯಾಂಗರಿಗಾಗಿ ಗಾಲಿಕುರ್ಚಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಜನಸಾಮಾನ್ಯರಿಗೆ ಬೆನ್ನುಹುರಿ ಅಪಘಾತದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗು ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರನ್ನು ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ಡಿ. 9 ರಂದು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಗಾಲಿಕುರ್ಚಿ ಜಾಥಾ ನಡೆಸಲಾಯಿತು.
ಪುತ್ತೂರು ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಹಸಿರು ನಿಶಾನೆ ತೋರಿಸಿ ಜಾಥಾಕ್ಕೆ ಚಾಲನೆ ನೀಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಗಾಲಿಕುರ್ಚಿ ಜಾಥಾ ಆರಂಭಿಸಿ ಮೈ ದೇ ದೇವುಸ್ ಚರ್ಚ್ ಮುಂಭಾಗದಿಂದ ಎ. ಪಿ. ಎಂ. ಸಿ ರಸ್ತೆ ಮುಖಾಂತರ ಆದರ್ಶ ಆಸ್ಪತ್ರೆಯ ತನಕ ಜಾಥಾವನ್ನು ಮಾಡಲಾಯಿತು. ಒಟ್ಟು15 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು, ಅರೈಕೆದಾರರು, ಪೊಲೀಸ್ ಸಿಬ್ಬಂದಿಗಳು, ಸೇವಾಭಾರತಿ ಸಿಬ್ಬಂದಿವರ್ಗದವರು, ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.