ಉಜಿರೆ: ಕನ್ಯಾಡಿಯ ಸೇವಾಭಾರತಿ ಹಾಗು ಸೌತಡ್ಕದ ಸೇವಾಧಾಮದ ಜಂಟಿ ಆಶ್ರಯದಲ್ಲಿ ಪುತ್ತೂರಿನ ಆದರ್ಶ ಆಸ್ಪತ್ರೆ ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ) ಇವರ ಸಹಯೋಗದಲ್ಲಿ ಪುತ್ತೂರಿನ ಜವಳಿ ವ್ಯಾಪಾರಸ್ಥ ಎಂ. ಸಂಜೀವ ಶೆಟ್ಟಿ ಮತ್ತು ಸೋಜಾ ಮೆಟಲ್ ಮಾರ್ಟ್ ಇವರ ಸಹಕಾರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 27 ನೇ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಡಿ. 8 ರಂದು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರಿನ ಆದರ್ಶ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾದ ಡಾ. ವೈ. ಸುಬ್ರಾಯ ಭಟ್ ಉದ್ಘಾಟಿಸಿ, ಶುಭ ಹಾರೈಸಿದರು. ಸೇವಾಭಾರತಿಯ ಕೋಶಾಧಿಕಾರಿ ಮತ್ತು ಸೇವಾಧಾಮದ ಸಂಸ್ಥಾಪಕ ಕೆ. ವಿನಾಯಕ ರಾವ್ ಕನ್ಯಾಡಿ ಅಧ್ಯಕ್ಷತೆ ವಹಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು.
ಪುತ್ತೂರು ಆದರ್ಶ ಆಸ್ಪತ್ರೆಯ ಸರ್ಜನ್ ಡಾ. ಎಂ. ಕೆ. ಪ್ರಸಾದ್ ಭಂಡಾರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಆದರ್ಶ ಆಸ್ಪತ್ರೆಯಲ್ಲಿ ಇಂತಹ ಜನೋಪಯೋಗಿ ಶಿಬಿರಗಳನ್ನು ಇನ್ನೂ ಹೆಚ್ಚು ಆಯೋಜಿಸಲು ನಾವು ಸದಾ ಸಹಕರಿಸುತ್ತೇವೆ ಹಾಗೂ ಶಿಬಿರಾರ್ಥಿಗಳಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸುವುದಾಗಿ ಹೇಳಿದರು.
ಮುಖ್ಯ ಅತಿಥಿ ಪುತ್ತೂರಿನ ವಿಜಯ ಸಾಮ್ರಾಟ್ (ರಿ), ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜರವರಿಗೆ ಸೇವಾಭಾರತಿ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಸೇವಾಧಾಮದ ನೂತನ ಕಟ್ಟಡ ನಿರ್ಮಾಣಕ್ಕೆ ತಮ್ಮ ಕೈಲಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರಿಗೂ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರ ಸ್ವೀಕರಿಸಿದ ಅವರು ಪುತ್ತೂರು ತಾಲೂಕಿನಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ಎಲ್ಲಾ ದಿವ್ಯಾಂಗರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಎರಡು ತಿಂಗಳ ಒಳಗೆ ದೊರಕಿಸುವುದಾಗಿ ಭರವಸೆ ನೀಡಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ಯಾಮ್ ಭಟ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸೇವಾಭಾರತಿ ಸಂಸ್ಥೆಗೆ ಹಾಗೂ ಎಲ್ಲಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಶಿಬಿರದಲ್ಲಿ ಒಟ್ಟು 15 ಮಂದಿ ಬೆನ್ನುಮೂಳೆ ಮುರಿತಕ್ಕೊಳಗಾದ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ದಕ್ಷಿಣಕನ್ನಡ ಮತ್ತು ಕೊಡಗು ಕ್ಷೇತ್ರ ಸಂಯೋಜಕ ಕುಸುಮಾಧರ ಸ್ವಾಗತಿಸಿ, ಸೇವಾಭಾರತಿ ಸಂಸ್ಥೆಯ ಹಿರಿಯ ಪ್ರಬಂಧಕರಾದ ಚರಣ್ ಕುಮಾರ್ ಎಂ. ನಿರೂಪಿಸಿ, ಧನ್ಯವಾದವಿತ್ತರು.