ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಬಾಲಕಿಗೆ ರಿಕ್ಷಾದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಇಬ್ಬರು ಆರೋಪಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ(ಪೊಕ್ಸೊ)ಎಫ್ಟಿಎಸ್ಸಿ-1 ನ್ಯಾಯಾಲಯದ ನ್ಯಾಯಾಧೀಶ ಡಿ.ವಿನಯ್ ಶಿಕ್ಷೆ ವಿಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಇಳಂತಿಲ ನಿವಾಸಿಯಾಗಿದ್ದು ಬೀಡಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅಬ್ದುಲ್ ಕರೀಂ (35ವ.)ಮತ್ತು ಮೊಗ್ರು ಗ್ರಾಮದ ಪಚ್ಚಡ್ಕ ನಿವಾಸಿ ಆಟೊ ರಿಕ್ಷಾ ಚಾಲಕ ಸಾದಿಕ್ (34ವ.) ಶಿಕ್ಷೆಗೊಳಗಾದವರು. ಆರೋಪಿ ಅಬ್ದುಲ್ ಕರೀಂಗೆ ಪೋಕ್ಸೊ ಕಾಯ್ದೆಯ ಕಲಂ 8ರಡಿ 5 ವರ್ಷಗಳ ಸಾದಾ ಸಜೆ ಮತ್ತು 5,000 ರೂ.ದಂಡ, ದಂಡ ತೆರಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(1) (ಡಬ್ಲ್ಯು)(ಐ)ರಡಿ 5 ವರ್ಷ ಸಾದಾ ಸಜೆ ಮತ್ತು 5,000ರೂ.ದಂಡ ವಿಧಿಸಲಾಗಿದೆ. ದಂಡ ತೆರಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ, ಪರಿಶಿಷ್ಟ ಜಾತಿ, ಪಂಗಡದವರ ದೌರ್ಜನ್ಯ ತಡೆ ಕಾಯಿದೆಯ ಕಲಂ 3(2) ಮತ್ತು ಭಾರತೀಯ ದಂಡ ಸಂಹಿತೆ ಕಲಂ 357ಎ(1)(ಐ)ರಡಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರೂ.ದಂಡ ಪಾವತಿಸುವಂತೆ ಆದೇಶಿಸಲಾಗಿದೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 3 ತಿಂಗಳ ಕಠಿಣ ಸಜೆ ಅನುಭವಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆರೋಪಿ ಸಾದಿಕ್ಗೆ ಪೋಕ್ಸೊ ಕಾಯ್ದೆಯ ಕಲಂ ೮ರಡಿ 3 ವರ್ಷಗಳ ಸಾದಾ ಸಜೆ ಮತ್ತು 5,000 ರೂ. ದಂಡ, ದಂಡ ತೆರಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ ವಿಧಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕಿ 2023ರ ಜೂ.18ರಂದು ಸ್ವಸಹಾಯ ಸಂಘದ ಹಣ ಕಟ್ಟಲೆಂದು ಬಂದಾರು ಗ್ರಾಮದ ನೇರೋಳ್ದಪಲ್ಕೆ ಎಂಬಲ್ಲಿಗೆ ಹೋಗುತ್ತಿದ್ದಾಗ ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿದ್ದ ಪ್ರತಾಪ್ಸಿಂಗ್ ಥೋರಾಟ್ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಾಸಿಕ್ಯೂಷನ್ ಪರವಾಗಿ ಹಿಂದಿನ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು. ಬಳಿಕ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.