Site icon Suddi Belthangady

ಟಿ.ವಿ. ನೋಡಲು ಹೋಗುತ್ತಿದ್ದ ಬಾಲಕಿಯ ಅತ್ಯಾಚಾರ ಪ್ರಕರಣ – ಕಡಿರುದ್ಯಾವರದ ಸುಧೀರ್‌ಗೆ 20 ವರ್ಷ ಜೈಲು ಶಿಕ್ಷೆ

ಬೆಳ್ತಂಗಡಿ: ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದಡಿ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ಮನೆಯ ಕೆ. ಸುಧೀರ್(27) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-೨ ಪೋಕ್ಸೋ ವಿಶೇಷ ನ್ಯಾಯಾಲಯ ೨೦ ವರ್ಷಗಳ ಜೈಲು ಶಿಕ್ಷೆ ಮತ್ತು ೫೦ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿವರ: 13 ವಯಸ್ಸಿನವಳಾಗಿದ್ದ ಬಾಲಕಿ ಸುಧೀರ್‌ನ ಮನೆಗೆ ರಜಾ ದಿನಗಳಲ್ಲಿ ಹಾಗೂ ಇತರ ದಿನಗಳಲ್ಲಿ ಟಿ.ವಿ. ನೋಡಲು ಹೋಗುತ್ತಿದ್ದಳು. ಕೆಲವೊಂದು ಬಾರಿ ಸುಧೀರ್ ಮಾತ್ರ ಮನೆಯಲ್ಲಿರುತ್ತಿದ್ದು ೨೦೨೧ನೇ ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಬಾಲಕಿ ಆತನ ಮನೆಗೆ ಟಿ.ವಿ. ನೋಡಲು ಹೋಗಿದ್ದಾಗ ಅಂಗಡಿಗೆ ಹೋಗಿ ಬರೋಣ ಎಂದು ತಿಳಿಸಿ ಅಂಗಡಿಗೆ ಕರೆದುಕೊಂಡು ಹೋಗದೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸುಧೀರ್‌ನ ಅಜ್ಜಿಯ ಯಾರೂ ವಾಸವಿಲ್ಲದ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಈ ವಿಚಾರವನ್ನು ತಾಯಿಗೆ ಹೇಳುತ್ತೇನೆ ಎಂದು ಬಾಲಕಿ ಹೇಳಿದಾಗ ತಾಯಿಗೆ ಹೇಳಿದರೆ ನೀನೇ ನನ್ನ ಬಳಿ ಬಂದದ್ದು ಎಂದು ಹೇಳಿ ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ ಎಂದು ಹೇಳಿ ಹೆದರಿಸಿದ್ದ. ಅನಂತರದ ದಿನಗಳಲ್ಲೂ ಬಾಲಕಿ ಆತನ ಮನೆಗೆ ರಜಾ ದಿನಗಳಲ್ಲಿ ಟಿ.ವಿ. ನೋಡಲು ಹೋದಾಗ ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ಅತ್ಯಾಚಾರ ನಡೆಸಿದ್ದ. ಜತೆಗೆ ಆತನ ಅಜ್ಜಿ ಮನೆಯಲ್ಲಿಯೂ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ. ಬಾಲಕಿ ೨೦೨೨ ಆಗಸ್ಟ್ ತಿಂಗಳ ಅನಂತರ ಗರ್ಭಿಣಿಯಾಗಿದ್ದಳು.
ಬಳಿಕ ಸುಧೀರ್ ಮತ್ತು ಇತರರು ಸೇರಿ ಚಿಕ್ಕಮಗಳೂರು ಕಡೆ ಎಲ್ಲಿಯಾದರೂ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸುವ ಎಂದು ಯೋಜನೆ ರೂಪಿಸಿದ್ದರು. ಮದುವೆ ಆಗಿದ್ದು ಗಂಡ-ಹೆಂಡತಿ ಎಂದು ಆಸ್ಪತ್ರೆಯವರಿಗೆ ನಂಬಿಸಲು ಆಕೆಗೆ ಕಾಲುಂಗುರ, ಬೆಳ್ಳಿಯ ಕರಿಮಣಿ ಸರ ಹಾಕಿಸಿ ಮದುಮಗಳಂತೆ ಅಲಂಕಾರ ಮಾಡಿಸಿ ಆತನೊಂದಿಗೆ ಫೋಟೋ ತೆಗೆಸಿದ್ದರು. ಬಳಿಕ ಬಾಲಕಿಯ ಮನೆಗೆ ತೆರಳಿ ಆಕೆಯ ತಾಯಿಗೆ ಮದುವೆ ಮತ್ತು ಬರ್ತ್‌ಡೇಗೆ ಹೋಗಲು ಇದೆ ಎಂದು ಹೇಳಿ ಬಾಲಕಿಯನ್ನು ಕರೆದುಕೊಂಡು ಸುಧೀರ್ ಮತ್ತು ಇತರರು 2022ರ ಡಿ. 17ರಂದು ಚಿಕ್ಕಮಗಳೂರಿನ ಆಸ್ಪತ್ರೆಗೆ ತೆರಳಿದ್ದು ಅಲ್ಲಿ ಆಕೆ ತನ್ನ ಹೆಂಡತಿ ಎಂದು ವೈದ್ಯರಿಗೆ ತಿಳಿಸಿ ಗರ್ಭಪಾತ ಮಾಡಿಸಿದ್ದರು ಎಂದು ಆರೋಪಿಸಲಾಗಿತ್ತು.

ಪ್ರಕರಣ ದಾಖಲು: ಅನಂತರ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಕಲಂಗಳಡಿ ಪ್ರಕರಣ ದಾಖಲಾಗಿತ್ತು. ಆಗಿನ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ್ ಬಿ. ಮತ್ತು ಸತ್ಯನಾರಾಯಣ ಕೆ. ಅವರು ತನಿಖೆ ಪೂರ್ಣಗೊಳಿಸಿ ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು ಅಭಿಯೋಜನೆ ಪರ ಒಟ್ಟು ೨೪ ಸಾಕ್ಷಿದಾರರನ್ನು ವಿಚಾರಿಸಿ 62 ದಾಖಲೆಗಳನ್ನು ಗುರುತಿಸಲಾಗಿತ್ತು. ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ-ಪ್ರತಿವಾದವನ್ನು ಆಲಿಸಿದ ಜಿಲ್ಲಾ ನ್ಯಾಯಾಧೀಶ ಮಾನು ಕೆ.ಎಸ್. ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಅತ್ಯಾಚಾರ ಮಾಡಿದ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ ಕಲಂ 276 ಮತ್ತು ಕಲಂ ೬ ಪೊಕ್ಸೋ ಕಾಯ್ದೆಯಂತೆ 20 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 40 ಸಾವಿರ ರೂ. ದಂಡ ವಿಧಿಸಲಾಗಿದೆ. ಸಾಕ್ಷ್ಯ ನಾಶ ಮಾಡಿದ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ ಕಲಂ 201ರಡಿ 3 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ. ದಂಡದ ಹಣವಾದ 50 ಸಾವಿರ ರೂ. ಅನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಷನ್ ಪರ ಸರಕಾರದ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದರು.
ಸಂತ್ರಸ್ತೆಗೆ 2 ಲಕ್ಷ ರೂ. ಪರಿಹಾರ: ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 62 357(ಎ) ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ 2 ಲಕ್ಷ ರೂ. ಪರಿಹಾರವನ್ನು ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿದೆ.

Exit mobile version