Site icon Suddi Belthangady

ಪತ್ರಕರ್ತರ ಸಂಘದ 5ನೇ ಜಿಲ್ಲಾ ಸಮ್ಮೇಳನದ ಸಭಾಂಗಣಕ್ಕೆ ಸುದ್ದಿ – ಬಿಡುಗಡೆ ಮುಖ್ಯ ವರದಿಗಾರ ದಿ. ಭುವನೇಂದ್ರ ಪುದುವೆಟ್ಟು ಹೆಸರಿಟ್ಟು ಸ್ಮರಣೆ

ಬೆಳ್ತಂಗಡಿ: ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಡಿ.5ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 5ನೇ ಜಿಲ್ಲಾ ಸಮ್ಮೇಳನದ ಸಭಾಂಗಣಕ್ಕೆ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಭುವನೇಂದ್ರ ಪುದುವೆಟ್ಟು ಅವರ ಹೆಸರಿನ್ನಿಡುವ ಮೂಲಕ ಗೌರವಾರ್ಪಣೆ ಸಲ್ಲಿಸಲಾಗಿದೆ. ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿರುವ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರೂ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರರೂ ಆಗಿದ್ದ ಭುವನೇಂದ್ರ ಪುದುವೆಟ್ಟು ಅವರ ಹೆಸರನ್ನು ಪತ್ರಕರ್ತರ ಸಂಘದ ೫ನೇ ಜಿಲ್ಲಾ ಸಮ್ಮೇಳನದ ಸಭಾಂಗಣಕ್ಕೆ ಇಡುವ ಕುರಿತು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಸರ್ವಾನುಮತದಿಂದ ಭುವನೇಂದ್ರ ಪುದುವೆಟ್ಟು ಅವರ ಹೆಸರನ್ನು ವೇದಿಕೆಗೆ ಇಡಲು ಒಪ್ಪಿಗೆ ದೊರೆತಿತ್ತು. ಅದರಂತೆ ಸಮ್ಮೇಳನದ ಸಭಾಂಗಣಕ್ಕೆ ಭುವನೇಂದ್ರ ಅವರ ಹೆಸರನ್ನಿಡಲಾಗಿತ್ತು. ಅಲ್ಲದೆ, ಕಾರ್ಯಕಾರಿಣಿ ಸದಸ್ಯರ ಸಭೆಯ ತೀರ್ಮಾನದಂತೆ ವೇದಿಕೆಗೆ ಉದಯವಾಣಿ ಪತ್ರಿಕೆಯ ಮಂಗಳೂರು ಬ್ಯೂರೋ ಚೀಫ್ ಆಗಿದ್ದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರ ಹೆಸರನ್ನಿಡಲಾಗಿತ್ತು.

ವಿವಿಧ ಕಾರ್ಯಕ್ರಮ: ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ದಿ. ಭುವನೇಂದ್ರ ಪುದುವೆಟ್ಟು ಸಭಾಂಗಣದ ದಿ.ಮನೋಹರ ಪ್ರಸಾದ್ ವೇದಿಕೆಯಲ್ಲಿ ಸಮ್ಮೇಳನ ನಡೆದಿದೆ. ಸಮ್ಮೇಳನದ ಉದ್ಘಾಟನೆಯನ್ನು ಮೂಡಬಿದಿರೆ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ನೆರವೇರಿಸಿದ್ದು ಹಿರಿಯ ಪತ್ರಕರ್ತ ಶಿವಸುಬ್ರಮಣ್ಯ ಕೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಆಶಯ ನುಡಿಗಳನ್ನಾಡಿದರು. ಬಳಿಕ ಪ್ರಾಯೋಜಕರಿಗೆ ಸನ್ಮಾನ, ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ ಅನಾವರಣ, ಕುತ್ಲೂರು ಶಾಲಾ ವಿದ್ಯಾರ್ಥಿ ಬ್ಯಾಂಡ್ ಸೆಟ್ ಗ್ರೂಪ್‌ಗೆ ಸಮವಸ್ತ್ರ ವಿತರಣೆ, ಹಸಿರೇ ಉಸಿರು ಕಾರ್ಯಕ್ರಮಕ್ಕೆ ಚಾಲನೆ, ಹರಿಹರ ಸರಕಾರಿ ಶಾಲೆಗೆ ಸಮವಸ್ತ್ರ ವಿತರಣೆ, ಸಾಧಕರಿಗೆ ಸನ್ಮಾನ, ‘ಮಾಧ್ಯಮ ಹಾಗೂ ಯುವಜನತೆ’ ಗೋಷ್ಠಿ, ಅನ್ನಪೂರ್ಣೇಶ್ವರಿ ಅಂಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಸಂಸ್ಮರಣೆ, ತಾಲೂಕು ಪತ್ರಕರ್ತರ ಸಂಘಗಳ ಅಧ್ಯಕ್ಷರೊಂದಿಗೆ ಸಂವಾದ, ಸಾಧಕ ಪತ್ರಕರ್ತರಿಗೆ ಸನ್ಮಾನ, ಸುಗಮ ಸಂಗೀತ ಕಾರ್ಯಕ್ರಮ ಜರಗಿತು. ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ಸಮಾರೋಪ ಭಾಷಣ ಮಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಸಹಿತ ಹಲವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತ ದಿ.ವೀರೇಶ್ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.

ಭುವನೇಂದ್ರ ಪುದುವೆಟ್ಟುಗೆ ರಾಜ್ಯ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ: ಅಗಲಿದ ಪತ್ರಕರ್ತರಿಗೆ ಬೆಂಗಳೂರಿನಲ್ಲಿರುವ ಕೆಯುಡಬ್ಲೂಜೆ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಭುವನೇಂದ್ರ ಪುದುವೆಟ್ಟು ಮತ್ತಿತರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತರಾದ ಬೆಂಗಳೂರಿನ ಟಿ.ಜಿ.ಅಶ್ವತ್ಥನಾರಾಯಣ, ಬಾಗಲಕೋಟೆಯ ಬಸವರಾಜ ಬಹಿರಶೆಟ್ಟಿ, ಉಡುಪಿಯ ಜಯಕರ ಸುವರ್ಣ, ದಾವಣಗೆರೆಯ ಎಂ.ವೀರಪ್ಪಭಾವಿ, ರಾಮನಗರದ ಗಂಗಾಧರ್, ರಾಯಚೂರಿನ ಸಂತೋಷ ಸಾಗರ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಭುವನೇಂದ್ರ ಪುದವೆಟ್ಟು, ವೀರೇಶ್, ಸಕಲೇಶಪುರದ ಚಂದ್ರಶೇಖರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಎರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭಾರತೀಯ ಕಾರ್ಯನಿತರ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ ಶ್ರದ್ಧಾಂಜಲಿ ಅರ್ಪಿಸಿದರು.

Exit mobile version