ಕಕ್ಯಪದವು: ಡಿ. 9 ರಂದು ಎಲ್. ಸಿ. ಆರ್. ಇಂಡಿಯನ್ ಪದವಿ ಪೂರ್ವ ಕಾಲೇಜಿನಲ್ಲಿ ದಶಮಾನೋತ್ಸವದ ಪ್ರಯುಕ್ತ “ದಶೈಕ್ಯ 2024 “ಅಂತರ್ ಪ್ರೌಢಶಾಲಾ ಚಟುವಟಿಕೆ ನಡೆಯಿತು. ಕಾರ್ಯಕ್ರಮದ ಉದ್ಘಾಟಕ ಹರಿಕಿರಣ್ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಸರಳಿಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಸ್ಥೆಯ ದಶಮಾನೋತ್ಸವೆಂಬುದು ಪರ್ವಕಾಲ, ಕನಸುಗಳು ಸಾಕಾರವಾಗಲು ಸವಾಲು, ಸಂಕಲ್ಪ, ಸಾಧನೆ ಎಂಬ ಸಕಾರಗಳು ಬಹಳ ಮುಖ್ಯ. ಆ ನಿಟ್ಟಿನಲ್ಲಿ ಎಲ್. ಸಿ. ಆರ್ ವಿದ್ಯಾಸಂಸ್ಥೆಯ ಕಾಯಕ ಶ್ಲಾಘನೀಯ ಎಂದು ಸ್ಪರ್ಧಿಗಳಿಗೆ ಶುಭ ಹಾರೈಸಿದರು.
ಸಂಸ್ಥೆಯ ಸಂಯೋಜಕ ಯಶವಂತ್ ಜಿ. ನಾಯಕ್ ಮಾತನಾಡಿ ಮಕ್ಕಳು ಕೇವಲ ಅಂಕಗಳಿಗೆ ಸೀಮಿತವಾಗದೆ ಎಲ್ಲಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಸಮಾಜದಲ್ಲಿ ರೂಪುಗೊಳ್ಳಬಹುದು ಎಂದು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ಮಾತುಗಳೊಂದಿಗೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವಿಜಯ ಕೆ., ಪದವಿ ಪೂರ್ವ ವಿಭಾಗದ ಮುಖ್ಯಸ್ಥೆ ಸೌಮ್ಯ ಎನ್ ಹಾಗೂ ವಿದ್ಯಾರ್ಥಿ ಕಾರ್ಯಕ್ರಮ ಸಂಯೋಜಕ ಮಹಮ್ಮದ್ ಸಾಬೀತ್ ಹಾಗೂ ಶ್ರದ್ಧಾ ಬಿ. ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. ಸಮಗ್ರ ಪ್ರಶಸ್ತಿಯನ್ನು ಶ್ರೀ ಪಂಚದರ್ಗಾ ಪ್ರೌಢಶಾಲೆ ಕಕ್ಯಬೀಡು ಮುಡಿಗೇರಿಸಿಕೊಂಡಿತು. ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಸರಕಾರಿ ಪ್ರೌಢಶಾಲೆ ಮಣಿನಾಲ್ಕೂರು ಪಡೆದುಕೊಂಡಿತು.
ಕಾರ್ಯಕ್ರಮ ಸಂಯೋಜಕಿ ದೀಕ್ಷಿತಾ ಎ. ಸ್ವಾಗತಿಸಿ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಚೈತ್ರ ಬಿ. ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಂದ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು.