Site icon Suddi Belthangady

ಡಿ. 14: ಯಕ್ಷ ಧ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಗುರುವಾಯನಕೆರೆಯಲ್ಲಿ ಯಕ್ಷ ಸಂಭ್ರಮ – ಪ್ರಶಸ್ತಿ ಪ್ರಧಾನ, ಗೌರವ ಸನ್ಮಾನ, ಸಾಧಕರಿಗೆ ಸನ್ಮಾನ – ಪತ್ರಿಕಾ ಗೋಷ್ಠಿ

ಬೆಳ್ತಂಗಡಿ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಂಗಳೂರು, ಬೆಳ್ತಂಗಡಿ ಘಟಕದ ವತಿಯಿಂದ ಡಿ. 14ರಂದು ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಮಾಹಿತಿ ನೀಡಿದರು. ಅವರು ಡಿ. 10ರಂದು ಬೆಳ್ತಂಗಡಿ ಲಯನ್ಸ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿಯವರ ಮಾರ್ಗದರ್ಶನದಂತೆ ಕಳೆದ ಎರಡು ವರ್ಷಗಳಿಂದ ಉಜಿರೆಯಲ್ಲಿ ಯಕ್ಷ ಸಂಭ್ರಮ ಯಶಸ್ವಿಯಾಗಿ ನಡೆದಿದ್ದು, ತಾಲೂಕಿನ ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕೆಂಬ ನಿಟ್ಟಿನಲ್ಲಿ ಈ ವರ್ಷ ಗುರುವಾಯನಕೆರೆಯ ಶಕ ನವಶಕ್ತಿ ಕ್ರೀಡಾಂಗಣದಲ್ಲಿ ಮೂರನೇ ವರ್ಷದ. ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 11.30 ಕ್ಕೆ ಕಾರ್ಯಕ್ರಮ ಉದ್ಘಾಟನೆಯನ್ನು ಬೆಳ್ತಂಗಡಿ ತಹಶೀಲ್ದಾರ್ ಪ್ರಥ್ವಿ ಸಾನಿಕಂ ಮಾಡಲಿದ್ದಾರೆ. ಶಶಿಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್.‌, ಲಕ್ಷ್ಮೀ ಗ್ರೂಪ್‌ ಉಜಿರೆ ಮಾಲಕ ಮೋಹನ್ ಕುಮಾರ್ ಹಾಗೂ ಯಕ್ಷ ಧ್ರುವ ಯಕ್ಷಶಿಕ್ಷಣ ಮಂಗಳೂರು ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಪಣಂಬೂರು ಭಾಗವಹಿಸಲಿದ್ದಾರೆ.‌ ನಂತರ ತಾಲೂಕಿನ 8 ಶಾಲೆಗಳ ಯಕ್ಷಧ್ರುವ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಂಜೆ 5.30ರಿಂದ ಗುರುವಾಯನಕೆರೆ ಬಂಟರ ಭವನದ ಬಳಿಯಿಂದ ಭಜನಾ ತಂಡಗಳು, ತಾಲೀಮು ತಂಡ, ಚೆಂಡೆ ವಾದ್ಯಗಳ ಭವ್ಯ ಮೆರವಣಿಗೆ ಕ್ರೀಡಾಂಗಣಕ್ಕೆ ಆಗಮಿಸಲಿದೆ. ಸಂಜೆ 7.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಯವರಿಗೆ ಯಕ್ಷ ಸಂಭ್ರಮ 2024 ಪ್ರಶಸ್ತಿ,
ಗುರುವಾಯನಕೆರೆಯ ಹಿರಿಯ ವೈದ್ಯ ಡಾ. ವೇಣುಗೋಪಾಲ ಶರ್ಮ, ಬೆಳ್ತಂಗಡಿಯ ಡಾ.‌ಕೆ.ಜಿ. ಪಣಿಕರ್ ಅವರಿಗೆ ಗೌರವ ಸನ್ಮಾನ ಹಾಗೂ ಸಾಧಕರಾದ ನಿಡ್ಲೆಯ ಅಗ್ರೀಲಿಫ್ ಸಂಸ್ಥೆಯ ಅವಿನಾಶ್ ರಾವ್ ಮತ್ತು ಅತಿಶಯ ಜೈನ್ ಇವರಿಗೆ ಸನ್ಮಾನ ನಡೆಯಲಿದೆ. ಚಲನಚಿತ್ರ ನಟ ನಟಿಯರು, ಕಿರುತೆರೆ , ಯಕ್ಷಗಾನ ಕಲಾವಿದರು ಭಾಗವಹಿಸಲಿದ್ದಾರೆ.

ವಿಶೇಷ ರೀತಿಯ ಆಹಾರ ಖಾದ್ಯಗಳು, ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಬಂಗಾರ ಗೆಲ್ಲುವ ಅವಕಾಶ ಇರಲಿದೆ. ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಜರಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಗೌರವ ಸಲಹೆಗಾರ ರಘುರಾಮ ಶೆಟ್ಟಿ ಉಜಿರೆ, ಸಲಹೆಗಾರ ವಸಂತ ಶೆಟ್ಟಿ ಶ್ರದ್ಧಾ, ಸಂಚಾಲಕ ಕಿರಣ್ ಕುಮಾರ್ ಶೆಟ್ಟಿ , ಸಹ ಸಂಚಾಲಕ ತುಕರಾಮ್ ಬಿ. ಉಪಸ್ಥಿತರಿದ್ದರು.

Exit mobile version